ಸೋಮವಾರಪೇಟೆ, ಸೆ. ೧೪: ಸರ್ಕಾರದ ರೂ. ೩೫ ಲಕ್ಷ ಹಣ ವ್ಯಯಿಸಿ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಜಾಗಕ್ಕೆ ತಡೆಗೋಡೆ ನಿರ್ಮಿಸುವ ಮೂಲಕ ಸರ್ಕಾರಿ ಹಣ ದುರುಪಯೋಗವಾಗಲು ಕಾರಣವಾದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ಸಚಿವರಿಗೆ ದೂರು ನೀಡಲಾಗಿದೆ.

ಸಣ್ಣ ನೀರಾವರಿ ಇಲಾಖೆಯಿಂದ ೨೦೧೮-೧೯ನೇ ಸಾಲಿನಲ್ಲಿ ಪ್ರವಾಹ ನಿಯಂತ್ರಣ ಸಣ್ಣ ಕಾಮಗಾರಿಗಳ ಯೋಜನೆಯಡಿ ಚೌಡ್ಲು ಗ್ರಾಮದ ಕೆ.ಎನ್. ಸೋಮಮ್ಮ ಮನೆ ಹತ್ತಿರ ೩೫ ಲಕ್ಷ ರೂ.ಗಳ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಮಾಡಲಾಗಿದ್ದು, ಇದರಲ್ಲಿ ಸರ್ಕಾರಿ ಹಣ ದುರುಪಯೋಗ ವಾಗಿದೆ ಎಂದು ಆರೋಪಿಸಿ, ರಾಜ್ಯ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರಿಗೆ ಆರ್.ಟಿ.ಐ. ಕಾರ್ಯಕರ್ತ ಬಿ.ಪಿ. ಅನಿಲ್ ಕುಮಾರ್ ದೂರು ನೀಡಿದ್ದಾರೆ.

ತಡೆಗೋಡೆ ಕಾಮಗಾರಿ ನಡೆದ ಜಾಗ ಖಾಸಗಿಯವರಿಗೆ ಸೇರಿದ್ದು, ಕಾಮಗಾರಿ ವೈಯಕ್ತಿಕವಾದುದು. ಈ ಜಾಗದಲ್ಲಿ ಪ್ರವಾಹ ತರುವ ನದಿಗಳು ಹರಿಯುವುದಿಲ್ಲ. ಸಾರ್ವಜನಿಕ ರಸ್ತೆಯಿಲ್ಲ. ಆದ್ದರಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ನಿಯಮಬಾಹಿರವಾಗಿ ನಿರ್ಮಿಸಿರುವ ತಡೆಗೋಡೆ ಕಾಮಗಾರಿ ಯನ್ನು ಮೇಲಧಿಕಾರಿಗಳಿಂದ ನಮ್ಮ ಸಮಕ್ಷಮ ಪರಿಶೀಲಿಸಬೇಕು. ಸಂಬAಧಪಟ್ಟ ಇಂಜಿನಿಯರ್ ಅವರಿಂದ ಪೋಲಾದ ಸರ್ಕಾರದ ಹಣವನ್ನು ವಸೂಲಾತಿ ಮಾಡಲು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಶಾಂತಳ್ಳಿ ಹೋಬಳಿಯ ಗುಡ್ಡಳ್ಳಿ ಗ್ರಾಮದ ಹೊಳೆಗೆ ಚೆಕ್‌ಡ್ಯಾಂ ಕಟ್ಟಿ ನಾಲೆಯ ಮೂಲಕ ಭತ್ತ ಕೃಷಿ ಭೂಮಿಗೆ ನೀರನ್ನು ಹಾಯಿಸಲು ಯೋಜನೆ ರೂಪಿಸುವಂತೆ ೨೦೧೬ರಲ್ಲಿ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿತ್ತು. ಸಣ್ಣ ನೀರಾವರಿ ಇಲಾಖೆಯಲ್ಲಿ ಅನುದಾನವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಈ ಕಾರಣದಿಂದ ೫೦ ಎಕರೆಯಷ್ಟು ಭತ್ತ ಭೂಮಿಯನ್ನು ಹಾಳು ಬಿಡಲಾಗಿದೆ. ನೀರಿನ ಸೌಕರ್ಯ ಮಾಡಿಕೊಟ್ಟಿದ್ದರೆ, ರೈತರು ಎರಡು ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ಅಧಿಕಾರಿ ಖಾಸಗಿ ಜಮೀನಿಗೆ ತಡೆಗೋಡೆ ಕಟ್ಟಿಕೊಟ್ಟಿರುವುದು ಖಂಡನೀಯ ಎಂದು ಅನಿಲ್ ಆರೋಪಿಸಿದ್ದಾರೆ.