ಕಣಿವೆ, ಸೆ. ೧೩: ಮಳೆ ಬಂದರೆ ಸೋರುವ ಮಾಳಿಗೆಗಳು... ಅಲ್ಲಲ್ಲಿ ಇಟ್ಟ ಪಾತ್ರೆಗಳೊಳಗೆ ತೊಟ್ಟಿಕ್ಕುವ ನೀರಿನ ಹನಿಗಳು... ಬಿರುಗಾಳಿ ಬಂದರAತು ಆತಂಕ ಸೃಷ್ಟಿಸುವ ಶಿಥಿಲಗೊಂಡ ಗೋಡೆಗಳು...
ಇವು ಕುಶಾಲನಗರದ ಪೊಲೀಸ್ ವಸತಿ ಗೃಹಗಳಲ್ಲಿ ಪ್ರತೀ ಮಳೆಗಾಲದಲ್ಲಿ ಕಂಡುಬರುವ ಸಾಮಾನ್ಯ ಚಿತ್ರಣ. ಇದು ದಿನದ ಹಗಲು ಮತ್ತು ರಾತ್ರಿ ಜನರ ರಕ್ಷಣೆಯ ಹೊಣೆ ಹೊತ್ತು ಕರ್ತವ್ಯಗೈವ ಪೊಲೀಸ್ ಸಿಬ್ಬಂದಿಗಳು ಅನುಭವಿಸುತ್ತಿರುವ ನರಕಯಾತನೆ.
ಕೊಡಗು ಜಿಲ್ಲೆ ಪಾಲಿಗೆ ಕುಶಾಲನಗರ ಪಟ್ಟಣ ಜನದಟ್ಟಣೆಯ ನಗರ. ಅರ್ಥಾತ್ ಅಭಿವೃದ್ದಿಯ ನಾಗಾಲೋಟದಲ್ಲಿ ಸಾಗುತ್ತಿರುವ ಪ್ರಮುಖ ವಾಣಿಜ್ಯ ಹಾಗೂ ಶೈಕ್ಷಣಿಕ ನಗರವೆಂಬ ಖ್ಯಾತಿ ಹೊಂದಿದೆ.
ವರ್ಷದ ಸರ್ವ ಋತುಗಳಲ್ಲಿಯೂ ಸಮನಾದ ಹವಾಗುಣ ಹೊಂದಿರುವ ಸಮತಟ್ಟು ಭೂಪ್ರದೇಶವುಳ್ಳ ಕುಶಾಲನಗರ ಪಟ್ಟಣ ಕೊಡಗು ಜಿಲ್ಲೆಯ ಮೂಲೆ ಮೂಲೆಗಳ ಜನರು ಮಾತ್ರವಲ್ಲ, ನೆರೆಯ ಮೈಸೂರು ಜಿಲ್ಲೆಯ ನೂರಾರು ಮಂದಿ ನಿವೇಶನಗಳನ್ನು ಖರೀದಿಸಿ ಮನೆಗಳನ್ನು ಕಟ್ಟಿಕೊಂಡು ವಾಸವಿರುವ ಕಾರಣ ಸಹಜವಾಗಿಯೇ ಕುಶಾಲನಗರದಲ್ಲಿ ವಾಹನಗಳು ಹಾಗೂ ಜನದಟ್ಟಣೆ ಅಧಿಕವಾಗಿದೆ.
ಜೊತೆಗೆ ಪ್ರಯಾಸವಿಲ್ಲದೆ ನಿತ್ಯವೂ ಆಗಮಿಸುವ ಪ್ರವಾಸಿಗರ ಸಂಖ್ಯೆಯ ಹೆಚ್ಚಳದಿಂದಾಗಿ ಇಲ್ಲಿನ ಆರಕ್ಷಕರಿಗೆ ನಿತ್ಯವೂ ಬಿಡುವಿಲ್ಲದ ಕೆಲಸ ಕಾರ್ಯಗಳು ಇದ್ದೇ ಇರುತ್ತವೆ.
ಆದ್ದರಿಂದ ಕುಶಾಲನಗರದಲ್ಲಿ ನಗರಕ್ಕೆ ಸೀಮಿತವಾದ ಪೊಲೀಸ್ ಠಾಣೆ ಇದೆ. ಹಾಗೆಯೇ ೪೦ ಕ್ಕೂ ಅಧಿಕ ಗ್ರಾಮಗಳಿರುವ ಇಲ್ಲಿ ಅದಕ್ಕೆಂದೇ ಪ್ರತ್ಯೇಕವಾದ ಗ್ರಾಮಾಂತರ ಠಾಣೆಯೂ ಇದೆ. ಹಾಗೆಯೇ ಸಂಚಾರಿ ಠಾಣೆಯೂ ಕೂಡ ಇದೆ.
ತಾಲೋಕು ಘೋಷಣೆಗೂ ಮುನ್ನ ಇದ್ದಂತಹ ತಾಲೋಕು ಪೋಲೀಸ್ ಅಧಿಕಾರಿಗಳ ಕಛೇರಿ, ಅಂದರೆ ಡಿವೈಎಸ್ಪಿ ಕಛೇರಿ, ವೃತ್ತ ನಿರೀಕ್ಷಕರ ಕಛೇರಿ ಹೀಗೆ ಎಲ್ಲವೂ ಇಲ್ಲೇ ಇರುವುದರಿಂದ ಸರಿಸುಮಾರು ನೂರಕ್ಕೂ ಅಧಿಕ ಮಂದಿ ಪೊಲೀಸ್ ಸಿಬ್ಬಂದಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಾಗೆಯೇ ನಾಲ್ವರು ಉಪನಿರೀಕ್ಷಕರು, ಹತ್ತಕ್ಕೂ ಹೆಚ್ಚು ಸಹಾಯಕ ಉಪನಿರೀಕ್ಷಕರು, ತಲಾ ಅಧಿಕಾರಿಗಳಿಗೊಂದರAತೆ ಎಂಟು ಪೊಲೀಸ್ ವಾಹನಗಳು ಇಲ್ಲಿವೆ.
ಆದರೆ ಕೋವಿಡ್‌ನಂತಹ ಭಯಾನಕ ಹಾಗೂ ಅನಾರೋಗ್ಯಕಾರಿ ಸನ್ನಿವೇಶದ ನಡುವೆಯೂ ಹಗಲು ರಾತ್ರಿ ಎನ್ನದೇ ತ್ರಾಸದಿಂದ ಕರ್ತವ್ಯಗೈವ ಈ ಪೋಲೀಸ್ ಸಿಬ್ಬಂದಿಗಳು ಮನೆಗೆ ಬಂದು ಹೆಂಡತಿ ಮಕ್ಕಳ ಜೊತೆ ನೆಮ್ಮದಿಯಿಂದ ಕಾಲಕಳೆಯಲು ವರುಣ ವಿಘ್ನನಾಗಿ ಕಾಡುತ್ತಿದ್ದಾನೆ.
ಅಂದರೆ ಮಳೆ ಬಂದರೆ ಸಾಕು ಹಳೆಯದಾದ ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳ ಮೇಲ್ಛಾವಣಿಯ ಹೆಂಚುಗಳು ಹಾಳಾಗಿರುವ ಕಾರಣ ಹೆಂಚುಗಳ ಸಂದುವಿನಲ್ಲಿ ಮಳೆಯ ನೀರು ಮನೆಯೊಳಗೆ ಬೀಳುತ್ತಿದೆ. ಇದರಿಂದಾಗಿ ಹಳೆಯ ಗೋಡೆಗಳು ನೀರು ಕುಡಿದು ಶಿಥಿಲಾವಸ್ಥೆ ತಲುಪಿವೆ. ಜೊತೆಗೆ ಕವೆಕೋಲುಗಳು ಕೂಡ ಹಾಳಾಗಿದ್ದು, ಜೋರು ಗಾಳಿ ಮಳೆ ಬಂದರೆ ಯಾವ ಕ್ಷಣದಲ್ಲಿ ಬೇಕಾದರೂ ಕುಸಿಯುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ.
ಹೀಗಾಗಿ ಕೆಲವು ಸಿಬ್ಬಂದಿಗಳು ಮಕ್ಕಳು ಹಾಗೂ ಕುಟುಂಬದವರ ಹಿತದೃಷ್ಟಿಯಿಂದ, ಭಯಾನಕ ಸ್ಥಿತಿಯಲ್ಲಿರುವ ಈ ವಸತಿ ಗೃಹಗಳನ್ನು ತೊರೆದು ದುಬಾರಿ ಬಾಡಿಗೆ ಪಾವತಿಸಿ ಬಾಡಿಗೆ ಮನೆಗಳಲ್ಲಿ ಇದ್ದಾರೆ. ಇನ್ನೂ ಕೆಲವರು ಸ್ವಂತ ಮನೆಗಳನ್ನೂ ಹೊಂದಿದ್ದಾರೆ.
ಆದರೆ ಆರ್ಥಿಕವಾಗಿ ಸದೃಢರಲ್ಲದವರು ಆದದ್ದು ಆಗಲಿ ಎಂದುಕೊAಡು ಹಳೆಯದಾದ ಶಿಥಿಲಾವಸ್ಥೆಯ ಕಟ್ಟಡಗಳಲ್ಲಿಯೇ ನರಕದ ಜೀವನ ನಡೆಸುತ್ತಿದ್ದಾರೆ.
ಅಧಿಕಾರಿಗಳು ಕೂಡ ಬಾಡಿಗೆ ಮನೆಗಳಲ್ಲಿ
ಪೇದೆಗಳು ಮಾತ್ರ ಬಾಡಿಗೆ ಮನೆಗಳಲ್ಲಿಲ್ಲ. ಇಲಾಖೆಯ ಅಧಿಕಾರಿಗಳು ಕೂಡ ಬಾಡಿಗೆ ಮನೆಯಲ್ಲಿಯೇ ವಾಸವಿದ್ದಾರೆ.
ಕುಶಾಲನಗರ ಠಾಣೆಯ ಹಿಂಭಾಗ ಸುಮಾರು ೫೦ ವರ್ಷಗಳ ಹಿಂದೆ ನಿರ್ಮಿಸಿರಬಹುದಾದ ಹಳೆಯ ವಸತಿ ಗೃಹಗಳಲ್ಲಿ ವಾಸವಿರುವ ಕೆಲವು ಸಿಬ್ಬಂದಿಗಳು ತಮ್ಮ ಕೈಯಿಂದ ಹಣ ವ್ಯಯಿಸಿ ಸಣ್ಣ ಪುಟ್ಟ ರಿಪೇರಿ ಮಾಡಿಸಿಕೊಂಡು ವಾಸವಿದ್ದಾರೆ. ಇನ್ನು ಮಲ್ಲಿಕಾರ್ಜುನ ಖರ್ಗೆ ಗೃಹ ಮಂತ್ರಿಯಾದ ಅವಧಿಯಲ್ಲಿ ಅಂದರೆ ೧೫ ವರ್ಷಗಳ ಹಿಂದೆ ನಿರ್ಮಿಸಿದ್ದ ವಸತಿ ಸಮುಚ್ಛಯ ಕಟ್ಟಡವೂ ಕೂಡ ಶಿಥಿಲಾವಸ್ಥೆಯನ್ನು ತಲುಪುತ್ತಿದ್ದು, ಮೇಲಂತಸ್ಥಿನ ತಾರಸಿಯಿಂದ ನೀರಿನ ಹನಿಗಳು ತೊಟ್ಟಿಕ್ಕುತ್ತಿರುವ ಬಗ್ಗೆ ಅಲ್ಲಿನ ವಾಸಿಗಳು ಹೇಳುತ್ತಾರೆ. ಕಿಟಕಿ ಬಾಗಿಲುಗಳು ಸರಿಯಾಗಿಲ್ಲ ಎಂದು ಕೆಲವು ಸಿಬ್ಬಂದಿಗಳು ಹೇಳುತ್ತಾರೆ. ಈ ಬಗ್ಗೆ ಕುಶಾಲನಗರದ ಹಿರಿಯ ಪೊಲೀಸ್ ಅಧಿಕಾರಿ ಡಿವೈಎಸ್‌ಪಿ ಶೈಲೇಂದ್ರ ಅವರ ಬಳಿ ವಸತಿಗೃಹಗಳ ಅವ್ಯವಸ್ಥೆ ಬಗ್ಗೆ ಶಕ್ತಿ ಅಭಿಪ್ರಾಯ ಕೇಳಿದಾಗ, ನೋಡೋಣ ಮೇಲಧಿಕಾರಿಗಳಿಗೆ ವಸತಿಗೃಹಗಳ ಸ್ಥಿತಿಗತಿಗಳು ಹಾಗೂ ಅಧೋಗತಿ ಗಳ ಬಗ್ಗೆ ವಿವರಿಸಿ ಪತ್ರ ವ್ಯವಹಾರ ನಡೆಸಿದ್ದೇವೆ. ಸದ್ಯದಲ್ಲೇ ಇರುವ ಹಳೆಯ ವಸತಿಗೃಹಗಳನ್ನು ತೆರವುಗೊಳಿಸಿ ಹೊಸ ವಸತಿ ಸಮುಚ್ಛಯ ನಿರ್ಮಾಣ ಮಾಡುವ ಬಗ್ಗೆ ಹೇಳಿದ್ದಾರೆ ಎಂದರು.
ಏನೇ ಇರಲಿ, ವಾಸಕ್ಕೆ ಯೋಗ್ಯವಲ್ಲದ ಕುಶಾಲನಗರದ ಪೊಲೀಸರ ವಸತಿಗೃಹಗಳನ್ನು ಆದಷ್ಟು ಶೀಘ್ರದಲ್ಲಿ ತೆರವುಗೊಳಿಸಿ ಹೊಸ ವಸತಿಗೃಹಗಳನ್ನು ನಿರ್ಮಿಸಿಕೊಡುವತ್ತ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲೆಯ ಆಡಳಿತ ಪಕ್ಷದ ಶಾಸಕರುಗಳು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳ ಗಮನ ಸೆಳೆದು ವಿಶೇಷ ಅನುದಾನ ತಂದು ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಸಮರ್ಪಕವಾದ ಹಾಗೂ ಸುಸಜ್ಜಿತವಾದ ವಸತಿ ಸಮುಚ್ಛಯಗಳನ್ನು ನಿರ್ಮಿಸಲು ಮುಂದಾಗಬೇಕಿದೆ.
-ಕೆ.ಎಸ್.ಮೂರ್ತಿ