*ಗೋಣಿಕೊಪ್ಪ, ಸೆ. ೧೨: ಪಂಚಾಯಿತಿಗೆ ಆದಾಯ ಕ್ರೋಢೀಕರ ಣಗೊಳಿಸಿಕೊಳ್ಳಲು ಗ್ರಾ.ಪಂ. ಆಡಳಿತ ಮಂಡಳಿ ಒಮ್ಮತದ ನಿರ್ಧಾರ ದೊಂದಿಗೆ ಕಾರ್ಯಪ್ರವೃತ್ತರಾಗಬೇಕು. ಹಾಗಾದಾಗ ಮಾತ್ರ ಪಂಚಾಯಿತಿ ಅಭಿವೃದ್ಧಿ ಹೊಂದುತ್ತದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು.

ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಚೈತ್ರಾ ಬಿ. ಚೇತನ್ ಅಧ್ಯಕ್ಷತೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ನಡೆದ ಪಂಚಾಯಿತಿ ಅಭಿವೃದ್ಧಿ ಪೂರಕ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ರಸ್ತೆ, ಕುಡಿಯುವ ನೀರು, ವಿದ್ಯುತ್ ಇನ್ನಿತರ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಜನರಿಗೆ ಒದಗಿಸಿಕೊಡುವ ಮೂಲಕ ಮಾದರಿ ಗ್ರಾಮವಾಗಿ ಮಾಡಲು ಸದಸ್ಯರು ಮುಂದಾಗಬೇಕಾಗಿದೆ. ಪಂಚಾಯಿತಿ ಆದಾಯಕ್ಕೆ ಹಲವಾರು ವರ್ಷಗಳಿಂದ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿರುವವರು ಉಳಿಸಿಕೊಂಡ ಬಾಕಿ ಮೊತ್ತವನ್ನು ಪಾವತಿಸುವಂತೆ ಮನವೊಲಿಸಬೇಕು. ಸರ್ಕಾರದ ನಿಯಮದಂತೆ ಟೆಂಡರ್ ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಗೋಣಿಕೊಪ್ಪ, ಅರುವತ್ತೊಕ್ಲು, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ನಿರ್ಮಿಸಿರುವ ಹಳ್ಳಿಗಟ್ಟು ಕಸವಿಲೇವಾರಿ ಘಟಕಕ್ಕೆ ಸೂಕ್ತ ಬಂದೋಬಸ್ತ್ ನೀಡುವ ಮೂಲಕ ಆ ಸ್ಥಳದಲ್ಲಿ ಕಸ ವಿಲೇವಾರಿಗೆ ಮುಂದಾಗುವAತೆ ತಿಳಿಸಿದರು.

ಸಭೆಯಲ್ಲಿ ಗ್ರಾ.ಪಂ. ಸದಸ್ಯರುಗಳು ಶಾಸಕರಿಗೆ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಾದ ಚರಂಡಿ ವ್ಯವಸ್ಥೆ, ರಸ್ತೆ ಡಾಂಬರೀಕರಣ, ಬೈಪಾಸ್ ಮತ್ತು ಮಾರುಕಟ್ಟೆ ರಸ್ತೆ ಕಾಂಕ್ರೀಟ್ ಕಾಮಗಾರಿ, ಪೌರ ಕಾರ್ಮಿಕರ ವಾಸಿಸುವ ಸ್ಥಳದಲ್ಲಿ ಗೃಹ ನಿರ್ಮಾಣಕ್ಕೆ ಕೊಳಚೆ ಮಂಡಳಿಯಿAದ ಮನೆ ನಿರ್ಮಾಣಕ್ಕೆ ಅನುದಾನ ನೀಡುವಂತೆ, ಹಳ್ಳಿಗಟ್ಟುವಿನ ಕಸವಿಲೇವಾರಿ ಘಟಕವನ್ನು ಪುನಶ್ಚೇತನಗೊಳಿಸಲು ನಾಲ್ಕನೇ ವಾರ್ಡ್ ಪಟೇಲ್‌ನಗರದಲ್ಲಿ ಟ್ರಾನ್ಸ್ಫಾರ್ಮರ್ ಅಳವಡಿಕೆ, ವಸತಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ನಕಾಶೆ ತಯಾರಿಸಿಕೊಡಲು ಮನವಿ, ಬಸ್ಸ್ ನಿಲ್ದಾಣ ಕಾಮಗಾರಿಗೆ ನೀಲಿನಕ್ಷೆ ತಯಾರಿಸಲು ಇಂಜಿನಿಯರ್ ವಿಭಾಗಕ್ಕೆ ಸೂಚಿಸುವಂತೆ ಮತ್ತು ೧೫ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆ ಪ್ರಾರಂಭಿಸಲು ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿ ಕೊಡುವಂತೆ ಮನವಿ ಸಲ್ಲಿಸಿದರು.

ಸದಸ್ಯರ ಮನವಿಯನ್ನು ಪುರಸ್ಕರಿಸಿ ಮಾತನಾಡಿದ ಶಾಸಕರು ವೆಂಕಟಪ್ಪ ಬಡಾವಣೆಯಲ್ಲಿ ಹಾಳಾಗಿರುವ ರಸ್ತೆಯನ್ನು ಸಿಮೆಂಟ್ ರಸ್ತೆಯನ್ನಾಗಿಸಲು ಸಲಹೆ ನೀಡಿದರು. ಮೂರನೇ ವಾರ್ಡ್ನಲ್ಲಿ ವಾಸಿಸುತ್ತಿರುವ ಪೌರ ಕಾರ್ಮಿಕರ ವಸತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಇದನ್ನು ಕೊಳಚೆ ನಿರ್ಮೂಲನಾ ಮಂಡಳಿ ಅಡಿಯಲ್ಲಿ ತರಲು ಸಾಧ್ಯವಿಲ್ಲ. ಪರ್ಯಾಯ ಮಾರ್ಗದ ಬಗ್ಗೆ ಚಿಂತಿಸಬಹುದು ಎಂದರು.

ಕೀರೆಹೋಳೆ ಒತ್ತುವರಿ ಬಗ್ಗೆ ಎಲ್ಲಾ ಸದಸ್ಯರು ಪಂಚಾಯಿತಿಯ ಹಿತದೃಷ್ಟಿಯಿಂದ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುವಂತೆ ಹಾಗೂ ಒತ್ತುವರಿ ತೆರವು ಸಂದರ್ಭ ಯಾವುದೇ ಮುಲಾಜಿಗೆ ಒಳಗಾಗಬಾರದೆಂದು ನಿರ್ದೇಶನ ನೀಡಿದರು.

ನಗರದ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಕೂಡಲೇ ಪೊಲೀಸ್ ಉಪಾಧೀಕ್ಷಕರು, ತಾಲೂಕು ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್ ಹಾಗೂ ಚೇಂಬರ್ ಆಫ್ ಕಾರ್ಮಸ್‌ನ ಪ್ರಮುಖರನ್ನು ಕರೆದು ಇತ್ಯರ್ಥಪಡಿಸುವಂತೆ ತಿಳಿಸಿದರು.

ಈ ಸಂದರ್ಭ ಮಾತನಾಡಿದ ತಾಲೂಕು ತಹಶೀಲ್ದಾರ್ ಯೋಗನಂದ್ ಪ್ರತಿವರ್ಷ ಕೀರೆಹೊಳೆ ಶುಚಿಗೊಳಿಸಲು ರೂ. ೫ ಲಕ್ಷ ವ್ಯಯ ಮಾಡುತ್ತಿರುವುದು ತೆರಿಗೆದಾರರ ಹಣದಿಂದ. ಇದಕ್ಕೆ ಕೂಡಲೇ ಕಡಿವಾಣ ಹಾಕಿ ಕೀರೆ ಹೊಳೆಯಿಂದ ಹೂಳೆತ್ತುವ ಮಣ್ಣನ್ನು ಯಾರಾದರೂ ಇಚ್ಚಿಸಿದಲ್ಲಿ ಅವರಿಗೆ ನೀಡಬಹುದೆಂದು ಸಲಹೆ ನೀಡಿದರು.

ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಚೇತನ್, ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಪೊಲೀಸ್ ಉಪಾಧೀಕ್ಷಕರಾದ ಜಯಕುಮಾರ್, ವೃತ್ತ ನಿರೀಕ್ಷಕ ಜಯರಾಮ್, ಪಿ.ಡಬ್ಲು÷್ಯ.ಡಿ. ಸಹಾಯಕ ಇಂಜಿನಿಯರ್ ಸುರೇಶ್, ಸಣ್ಣುವಂಡ ನವೀನ್, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಮಹಾದೇವ್, ಚೆಸ್ಕಾ ಇಂಜಿನಿಯರ್ ನೀಲ್‌ಶೆಟ್ಟಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ಕೆ. ರಾಜೇಶ್, ರಾಮಕೃಷ್ಣ, ಕೊಣಿಯಂಡ ಬೋಜಮ್ಮ, ಸೌಮ್ಯಬಾಲು, ನೂರೇರ ರತಿಅಚ್ಚಪ್ಪ, ರಾಮ್‌ದಾಸ್, ವಿವೇಕ್ ರಾಯ್ಕರ್, ಗೀತಾ, ಪುಷ್ಪಾಮನೋಜ್, ಮಂಜುಳ ಉಪಸ್ಥಿತರಿದ್ದರು.

- ಎನ್.ಎನ್. ದಿನೇಶ್