ಕಣಿವೆ/ ಗೋಣಿಕೊಪ್ಪ, ಸೆ. ೧೨: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಜಂಬೂ ಸವಾರಿಗೆ ತರಬೇತಿ ಪಡೆಯಲು ಕೊಡಗು ಜಿಲ್ಲೆಯ ದುಬಾರೆಯ ಸಾಕಾನೆ ಶಿಬಿರದಿಂದ ಮೂರು ಆನೆಗಳನ್ನು ಹಾಗೂ ತಿತಿಮತಿ ಸಮೀಪದ ಮತ್ತಿಗೋಡು ಆನೆ ಶಿಬಿರದಿಂದ ೩ ಆನೆಗಳನ್ನು ಭಾನುವಾರ ಕಳಿಸಿಕೊಡಲಾಯಿತು.

ದುಬಾರೆಯ ಸಾಕಾನೆ ಶಿಬಿರದಿಂದ ಮೂರು ಲಾರಿಗಳ ಮುಖೇನ ವಿಕ್ರಂ, ಧನಂಜಯ ಹಾಗೂ ಕಾವೇರಿ ಎಂಬ ಮೂರು ಆನೆಗಳು ಮಾಲ್ದಾರೆಯ ಮೂಲಕ ಸವಾರಿ ಹೊರಟವು.

ಹಾಗೆಯೇ ವಿಕ್ರಂ ಆನೆಯ ಮಾವುತ ಪುಟ್ಟ, ಕಾವಾಡಿ ಸಂಜು, ಧನಂಜಯ ಆನೆಯ ಮಾವುತ ಭಾಸ್ಕರ, ಕಾವಾಡಿ ಮಣಿ ಹಾಗೂ ಕಾವೇರಿ ಆನೆಯ ಮಾವುತ ಡೋಬಿ ಹಾಗೂ ಕಾವಾಡಿ ರಂಜನ್ ಅವರು ಕುಟುಂಬ ಸಹಿತ

(ಮೊದಲ ಪುಟದಿಂದ) ಆನೆಗಳೊಂದಿಗೆ ತೆರಳಿದರು. ಈ ಸಂದರ್ಭ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಹಾಗು ಉಪವಲಯ ಅರಣ್ಯಾಧಿಕಾರಿ ರಂಜನ್ ಇದ್ದರು.

ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಅಂಬಾರಿ ಆನೆ ಅಭಿಮನ್ಯು, ಸಹಪಾಠಿಗಳಾದ ಗೋಪಾಲಸ್ವಾಮಿ ಹಾಗೂ ಅಶ್ವತ್ಥಾಮ ಆನೆಗಳು ಭಾನುವಾರ ನಾಗರಹೊಳೆ ಮತ್ತಿಗೋಡು ಶಿಬಿರದಿಂದ ಹುಣಸೂರು ತಾಲೂಕಿನ ವೀರನಹೊಸಳ್ಳಿಗೆ ಪ್ರಯಾಣ ಬೆಳೆಸಿದವು.

ಬೆಳಿಗ್ಗೆ ಮಾವುತರು ಆನೆಗಳನ್ನು ತೊಳೆದು ಸರಳವಾಗಿ ಶೃಂಗರಿಸಿದ್ದರು. ಮಧ್ಯಾಹ್ನ ಅವುಗಳಿಗೆ ಪೂಜೆ ಸಲ್ಲಿಸಿ ೩ ಗಂಟೆ ವೇಳೆಗೆ ಶಿಬಿರದಿಂದ ಬೀಳ್ಕೊಡಲಾಯಿತು. ಅಭಿಮನ್ಯು ಆನೆಯ ಮಾವುತ ವಸಂತ, ಕಾವಾಡಿ ರಾಜು, ಗೋಪಾಲಸ್ವಾಮಿ ಆನೆಯ ಮಾವುತ ಗಣೇಶ್, ಕಾವಾಡಿ ಸೃಜನ್, ಅಶ್ವತ್ಥಾಮ ಆನೆಯ ಮಾವುತ ತಿಮ್ಮ, ಕಾವಾಡಿ ರಮೇಶ್ ಆನೆಯೊಂದಿಗೆ ಪ್ರಯಾಣ ಬೆಳೆಸಿದರು.

ಈ ಮೂರು ಆನೆಗಳು ಸೋಮವಾರ ಇತರ ಆನೆಗಳೊಂದಿಗೆ ಕೂಡಿಕೊಂಡು ಮೈಸೂರಿಗೆ ಪ್ರಯಾಣ ಬೆಳೆಸಲಿವೆ ಎಂದು ಮತ್ತಿಗೋಡು ಸಾಕಾನೆ ಶಿಬಿರದ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ತಿಳಿಸಿದರು. ಸಾಕಾನೆ ಶಿಬಿರದ ಆನೆ ಮಾವುತರ ಮತ್ತು ಕಾವಾಡಿಗಳ ಕುಟುಂಬಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.