ಪೊನ್ನಂಪೇಟೆ, ಸೆ. ೧೨: ಕೊಡಗಿನಲ್ಲಿ ೨೦೧೯ ರಲ್ಲಿ ಸುರಿದ ಭಾರೀ ಮಳೆಗೆ ತಮ್ಮ ಮನೆಗಳು ಕುಸಿದು ಬಿದ್ದ ಪರಿಣಾಮ ಮನೆ ಕಳೆದುಕೊಂಡು ನಿರಾಶ್ರಿತರಾಗಿ ಟಾರ್ಪಲ್ ಕಟ್ಟಿಕೊಂಡು ಗುಡಿಸಲಿನಲ್ಲಿ ವಾಸಿಸುತ್ತ ಸಂಕಷ್ಟದಲ್ಲಿ ಜೀವನ ಸಾಗಿಸುತಿದ್ದ ಎರಡು ಬಡ ಕುಟುಂಬಗಳಿಗೆ ಇದೀಗ ಸುಂದರವಾದ ಹೊಸ ಮನೆಯಲ್ಲಿ ವಾಸ ಮಾಡುವ ಭಾಗ್ಯ ದೊರಕಿದ್ದು, ಆ ಕುಟುಂಬಗಳಲ್ಲಿ ಈಗ ಸಂತಸ ಮನೆಮಾಡಿದೆ.
ಬೆಂಗಳೂರು ಹಿರಾ ವೆಲ್ಫೇರ್ ಅಸೋಸಿಯೇಷನ್ ಚಾರಿಟೇಬಲ್ ಫೌಂಡೇಶನ್, ಬೆಂಗಳೂರು ಹಿರಾ ಮೋರಲ್ ಸ್ಕೂಲ್ ಮತ್ತು ಕರ್ನಾಟಕ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ, ಕೊಡಗು ರಿಲೀಫ್ ಸೆಲ್, ಕೊಡಗು ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಪಾಲ ಗ್ರಾಮದ ನೆರೆ ಸಂತ್ರಸ್ತರಾದ ಅಬ್ಬಾಸ್, ಫಾತಿಮ ದಂಪತಿ ಮತ್ತು ನಫೀಸಾ ಎಂಬವರ ಎರಡು ಕುಟುಂಬಗಳಿಗೆ ಸುಮಾರು ೧೨ ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಬಡಕುಟುಂಬಗಳ ಬದುಕಿಗೆ ಬೆಳಕಾಗಿದೆ.
ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹ
ಕೊಡಗಿನಲ್ಲಿ ಎರಡು ವರ್ಷದ ಹಿಂದೆ ನೆರೆ ಹಾವಳಿಗೆ ತುತ್ತಾಗಿ ಮನೆ ಕಳೆದುಕೊಂಡಿದ್ದ ತಿತಿಮತಿ ಸಮೀಪದ ಮರಪಾಲದ ಸಂತ್ರಸ್ತರ ಸಂಕಷ್ಟವನ್ನು ಇಲ್ಲಿಗೆ ಭೇಟಿ
(ಮೊದಲ ಪುಟದಿಂದ) ನೀಡಿದ್ದ ಸಂದÀರ್ಭ ಕಣ್ಣಾರೆ ಕಂಡಿದ್ದ ಹಿರಾ ಮೋರಲ್ ಸ್ಕೂಲ್‌ನ ವಿದ್ಯಾರ್ಥಿಗಳು, ಸಂತ್ರಸ್ತರಿಗೆ ಸೂರು ಕಲ್ಪಿಸುವ ಸಂಕಲ್ಪವನ್ನು ಮಾಡಿದ್ದರು. ಇದಕ್ಕಾಗಿ ವಿದ್ಯಾರ್ಥಿಗಳ ತಂಡ ತಾವೇ ೧೦ ಲಕ್ಷ ರೂಪಾಯಿಗಳ ದೇಣಿಗೆ ಸಂಗ್ರಹಿಸಿ ಆ ಹಣದಿಂದ, ಮಳೆಯಿಂದ ಮನೆ ಕಳೆದುಕೊಂಡಿದ್ದ ಎರಡು ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವಲ್ಲಿ ಮಹತ್ತರ ಪಾತ್ರವಹಿಸಿದೆ. ಎರಡು ಮನೆಗಳನ್ನು ಸಂಪೂರ್ಣವಾಗಿ ವಿದ್ಯಾರ್ಥಿಗಳು ಸಂಗ್ರಹಿಸಿದ ಹಣದಿಂದಲೇ ನಿರ್ಮಿಸಲಾಗಿರುವುದು ವಿಶೇಷತೆಯಾಗಿದ್ದು, ಮೋರಲ್ ಸ್ಕೂಲ್ ವಿದ್ಯಾರ್ಥಿಗಳ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಸಂತ್ರಸ್ತರಿಗೆ ಮನೆ ಹಸ್ತಾಂತರ: ಮಂಗಳೂರು ವಲಯ ಜಮಾಅತ್ ಇಸ್ಲಾಮಿ ಹಿಂದ್ ಸಂಘಟನೆಯ ಸಂಚಾಲಕ ಯು. ಅಬ್ದುಲ್ ಸಲಾಂ ಅವರ ಅಧ್ಯಕ್ಷತೆಯಲ್ಲಿ ಮರಪಾಲ ಗ್ರಾಮದಲ್ಲಿ ನಡೆದ ನೆರೆ ಸಂತ್ರಸ್ತರಿಗೆ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅಬ್ಬಾಸ್, ಫಾತಿಮ ದಂಪತಿ ಮತ್ತು ನಫೀಸಾ ಅವರಿಗೆ ಮನೆಯನ್ನು ಹಸ್ತಾಂತರಿಸಲಾಯಿತು.
ನAತರ ಮಾತನಾಡಿದ ಅಬ್ದುಲ್ ಸಲಾಂ ಸಮಾಜದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ,ಅಸಾಯಕರಿಗೆ, ದುರ್ಬಲರಿಗೆ, ಅನಾಥರಿಗೆ ಸಹಾಯ ಮಾಡಬೇಕಾಗಿರುವುದು ನಮ್ಮ ಧಾರ್ಮಿಕ ಕರ್ತವ್ಯವಾಗಿದೆ. ನಮ್ಮ ಸಂಘಟನೆಯ ಮುಖಾಂತರ ಜಿಲ್ಲೆಯ ಹಲವೆಡೆ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತ ಬರುತಿದ್ದು, ಕೊಡಗಿನಲ್ಲಿ ಸಂಭವಿಸಿದ ಪ್ರವಾಹ, ಭೂಕುಸಿತದ ಸಂಧರ್ಭ ಮನೆ ಕಳೆದು ಕೊಂಡ ಹಲವರಿಗೆ ಮನೆ ಕಟ್ಟಿ ಕೊಡುವ ಕೆಲಸ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸಿದ್ದಾಪುರದಲ್ಲಿ ೫ ಮನೆ, ಮಡಿಕೇರಿ ತ್ಯಾಗರಾಜ ಕಾಲೋನಿಯಲ್ಲಿ ೮ ಮನೆ ನಿರ್ಮಿಸಿ ಕೊಡಲಾಗಿದೆ. ನಲ್ವತ್ತೆಕ್ರೆ ಗ್ರಾಮದಲ್ಲಿ ೨೫ ಮನೆ ನಿರ್ಮಿಸಲು ಈಗಾಗಲೇ ಶಂಕುಸ್ಥಾಪನೆ ಮಾಡಲಾಗಿದೆ. ಮಡಿಕೇರಿಯಲ್ಲಿ ವೃದ್ಧಾಶ್ರಮವನ್ನು ಸ್ಥಾಪಿಸಿ ಜಾತಿ ಧರ್ಮ ಮತ ಬೇಧವಿಲ್ಲದೆ ಅಸಹಾಯಕರ ಸೇವೆ ಮಾಡಲಾಗುತ್ತಿದೆ ಎಂದರು.
ತಿತಿಮತಿ ಗ್ರಾ.ಪಂ. ಉಪಾಧ್ಯಕ್ಷೆ ಪಿ.ಎಂ. ವಿಜಯ, ಬೆಂಗಳೂರು ಹಿರಾ ವೆಲ್ಫೇರ್ ಅಸೋಸಿಯೇಷನ್ ಚಾರಿಟೇಬಲ್ ಫೌಂಡೇಶನ್ ಕಾರ್ಯದರ್ಶಿ ಶಂಶೀರ್, ಜಮಾ ಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಮರ್ಕಡ, ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ, ಹಿರಾ ಮೋರಲ್ ಸ್ಕೂಲ್ ಪ್ರಾಂಶುಪಾಲ ಫಾಜಿಲ್, ಹಿರಾ ಮೋರಲ್ ಸ್ಕೂಲ್ ಆಡಳಿತಾಧಿಕಾರಿ ಸಮೀರ್, ಕೊಡಗು ಜಮಾಹತ್ ಇಸ್ಲಾಂ ಹಿಂದ್ ಜಿಲ್ಲಾ ಸಂಚಾಲಕ ಪಿ.ಕೆ.ಅಬ್ದುಲ್ ರೆಹಮಾನ್, ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಮುಸ್ತಫ, ಕೊಡಗು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಕೆ.ಟಿ. ಬಶೀರ್, ಗ್ರಾ.ಪಂ. ಸದಸ್ಯರಾದ ಶ್ಯಾಮಲ, ಅಫ್ರೋಜ್, ಚಂದ್ರಶೇಖರ್, ತಿತಿಮತಿ ಮಸೀದಿಯ ಧಾರ್ಮಿಕ ಗುರುಗಳಾದ ರಫೀಕ್ ಬಾಕವಿ, ಖಮರುದ್ದಿನ್ ಅಹಸನಿ, ಸ್ಥಳೀಯರಾದ ಬಿ.ಸಿ. ರಾಜು, ಸಿ.ಜೆ. ವಿಲ್ಸನ್, ಹಿರಾ ಮೋರಲ್ ಸ್ಕೂಲ್‌ನ ವಿದ್ಯಾರ್ಥಿಗಳು ಹಾಗೂ ಇನ್ನಿತರರು ಹಾಜರಿದ್ದರು. -ಚನ್ನನಾಯಕ್