ಕೂಡಿಗೆ, ಸೆ. ೧೨: ಕೂಡಿಗೆ ಗ್ರಾಮ ಪಂಚಾಯಿತಿ ಮತ್ತು ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯು ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.
ದಿಡ್ಡಳ್ಳಿಯವರಿಗೆ ಪುನರ್ವಸತಿ ಕೇಂದ್ರದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಮನೆಗಳ ಕಾಮಗಾರಿಗಳ ವೀಕ್ಷಣೆ ಜೊತೆಗೆ ಪುನರ್ವಸತಿ ಕೇಂದ್ರದಲ್ಲಿ ಮನೆಗಳ ನಿರ್ಮಾಣಕ್ಕೆ ಅನುಗುಣವಾಗಿ ಒಳಚರಂಡಿ, ರಸ್ತೆ, ಕುಡಿಯುವ ನೀರಿನ ಸರಬರಾಜು ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ವಿವಿಧ ಇಲಾಖೆಯವರು ತೆಗೆದುಕೊಂಡು ಜವಾಬ್ದಾರಿಯ ಬಗ್ಗೆ ಕಾಮಗಾರಿಗಳ ಸಮಗ್ರವಾದ ಮಾಹಿತಿಯನ್ನು ಜಿಲ್ಲಾ ಗಿರಿಜನ ಸಮನ್ವಯ ಅಧಿಕಾರಿಯವರ ನೇತೃತ್ವದಲ್ಲಿ ಪರಿಶೀಲಿಸಲಾಯಿತು.
ಸಭೆಯಲ್ಲಿ ಪುನರ್ವಸತಿ ಕೇಂದ್ರದಲ್ಲಿ ಪ್ರಮುಖವಾಗಿ ಕೈಗೊಳ್ಳಬೇಕಾಗಿರುವ ಅಂಶಗಳಾದ ಆಸ್ಪತ್ರೆ, ಅಂಗನವಾಡಿ ಸೇರಿದಂತೆ ನಿರ್ಮಾಣವಾಗಿ ಬಾಕಿ ಇರುವ ಮನೆಗಳ ಹಸ್ತಾಂತರ ವಿಷಯ ಸೇರಿದಂತೆ ಅಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್ ಅಧಿಕಾರಿಗಳ ಗಮನಕ್ಕೆ ತಂದರು.
ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಪುನರ್ವಸತಿ ಕೇಂದ್ರದಲ್ಲಿ ನಡೆದ ಕಾಮಗಾರಿಗಳ ಸವಿಸ್ತಾರವಾದ ವರದಿಗಳನ್ನು ಸಭೆಯಲ್ಲಿ ತಿಳಿಸಿದರು
ಸಭೆಯು ಜಿಲ್ಲಾ ಗಿರಿಜನ ಸಮನ್ವಯ ಯೋಜನೆ ಅಧಿಕಾರಿ ಶ್ರೀನಿವಾಸ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭ ನಿರ್ಮಿತಿ ಕೇಂದ್ರದ ಅಧಿಕಾರಿ ಕರಿಯಪ್ಪ, ಕೆಆರ್ಐಡಿಎಲ್ ಸಹಾಯಕ ಕಾರ್ಯಪಾಲಕ ಅಧಿಕಾರಿ ಪ್ರಮೋದ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಭಾಕರ್, ಕಚೇರಿ ವ್ಯವಸ್ಥಾಪಕ ಬಾಲಕೃಷ್ಣ ರೈ, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್, ಜಯಶ್ರೀ ಅಭಿವೃದ್ಧಿ ಅಧಿಕಾರಿ ಎಂ.ಕೆ. ಆಯಿಷಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.