ಶ್ರೀಮಂಗಲ, ಸೆ. ೧೨: ೨೦೨೩ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಬರುವುದು ಖಚಿತವಾಗಿದ್ದು, ಜಿಲ್ಲೆಯ ಎರಡು ಶಾಸಕ ಸ್ಥಾನವನ್ನು ಗೆಲ್ಲುವ ಮೂಲಕ ಈ ಸರಕಾರಕ್ಕೆ ಜಿಲ್ಲೆ ಯಿಂದಲೂ ಕೊಡುಗೆ ನೀಡಬೇಕಾಗಿದೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಎ.ಎಸ್. ಪೊನ್ನಣ್ಣ ಕರೆ ನೀಡಿದರು. ಬಿರುನಾಣಿ ಕೃಷಿ ಪತ್ತಿನ ಸಹಕಾರ ಸಭಾಂಗಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಂದಲೂ ದಬ್ಬಾಳಿಕೆ ನಡೆಯುತ್ತಿದೆ. ಪಕ್ಷದ ಕಾರ್ಯಕರ್ತರನ್ನು ಬೆದರಿಸುವ ವ್ಯವಸ್ಥೆಗೆ ಯಾರು ಭಯಪಡುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೆ ಎಲ್ಲಾ ರೀತಿಯಲ್ಲಿ ಬೆಂಬಲವನ್ನು ನೀಡಲಾಗುವುದು ಎಂದು ಹೇಳಿದರು.

ಕೊಡಗಿನ ಕೂರ್ಗ್ ಬೈ ರೇಸ್ ಮತ್ತು ಜಮ್ಮಾ ಹಿಡುವಳಿಗೆ ಕೋವಿ ವಿನಾಯಿತಿ ಹಕ್ಕು ಪ್ರಶ್ನಿಸಿರುವ ಪ್ರಕರಣದ ಪರವಾಗಿ ತಾವು ವಕಾಲತ್ತು ವಹಿಸಿದ್ದು, ಈ ಹಕ್ಕನ್ನು ೧೭೫ ವರ್ಷದ ನಂತರ ಪ್ರಶ್ನೆ ಮಾಡಲಾಗುತ್ತಿದೆ. ಈ ಹಕ್ಕನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುತ್ತಿದೆ. ಇದರ ಬಗ್ಗೆ ಅಪಪ್ರಚಾರ ಸರಿಯಲ್ಲ. ಕೋವಿ ವಿನಾಯಿತಿ ಹಕ್ಕು ಕೊಡಗಿನ ಎಲ್ಲಾ ಮೂಲ ನಿವಾಸಿಗಳಿಗಿದ್ದು, ಯಾರ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶ ವಿಲ್ಲದೇ ಯಥಾಪ್ರಕಾರ ಅದು ಮುಂದುವರೆಯಬೇಕೆನ್ನುವ ನಿಟ್ಟಿನಲ್ಲಿ ವಕಾಲತ್ತು ವಹಿಸಲಾಗಿದೆ ಎಂದು ಹೇಳಿದರು.

ಬಿರುನಾಣಿ ವ್ಯಾಪ್ತಿಯಿಂದ ವೀರಾಜಪೇಟೆಗೆ ಸಂಪರ್ಕ ಕಲ್ಪಿಸುವ ೨ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕೂಟಿಯಾಲ ಸಂಪರ್ಕ ರಸ್ತೆಗೆ ತಡೆಯಾಗಿದ್ದು, ಇದರ ಸಂಪೂರ್ಣ ದಾಖಲೆ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೊರೆ ಹೋಗಿ ಜನರ ಪ್ರಯೋಜನಕ್ಕೆ ಈ ರಸ್ತೆಯನ್ನು ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯೆ ವೀಣಾಅಚ್ಚಯ್ಯ ಅವರು ಮಾತನಾಡಿ ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟದಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸೂಕ್ತ ಉತ್ತರ ಕೊಡಲು ಸಾಧ್ಯವಾಗದ ಸಚಿವರುಗಳು ಇದ್ದಾರೆ. ಜಮ್ಮಾ ಜಾಗ ಸರಕಾರದ್ದು ಎಂದು ಸಚಿವರು ಹೇಳುತ್ತಿದ್ದು, ಕೊಡಗಿನ ಬಗ್ಗೆ ಯಾವುದೇ ಜ್ಞಾನ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಪ್ರಭಾವಿಗಳು ಹಾಗೂ ಹಿರಿಯರಾದ ಇಬ್ಬರು ಶಾಸಕರುಗಳು ಇದ್ದಾರೆ. ತಮ್ಮದೇ ಸರಕಾರ ಇದ್ದರೂ ಜಿಲ್ಲೆಯ ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟಿದೆ. ಪಕ್ಷದ ಕಾರ್ಯಕರ್ತರು ಪಕ್ಷವನ್ನು ಸಂಘಟಿಸುವ ಮೂಲಕ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಮತದಾರರು ಹಾಗೂ ಕಾರ್ಯ ಕರ್ತರು ಇದ್ದ ಸ್ಥಳಗಳಲ್ಲಿ ಈಗ ಹೆಚ್ಚಿನ ಯುವಕರು ಪಕ್ಷಕ್ಕೆ ಸೇರ್ಪಡೆ ಗೊಳ್ಳುತ್ತಿದ್ದಾರೆ. ಮತಗಳಿಕೆ ಹೆಚ್ಚಾಗುತ್ತಿದೆ. ಕೊಡಗು ಜಿಲ್ಲೆ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದು, ಇದನ್ನು ಬಗೆಹರಿಸಲು ವಿಚಾರವಂತ ಮತ್ತು ಪ್ರಜ್ಞಾವಂತ ನಾಯಕರು ಜಿಲ್ಲೆಗೆ ಬೇಕಾಗಿದ್ದಾರೆ ಎಂದರು. ಕಾರ್ಯ ಕರ್ತರ ಸಭೆಗೂ ಮೊದಲು ಬಿರುನಾಣಿ ಯ ಶ್ರೀ ಪುತ್ತುಭಗವತಿ ದೇವಸ್ಥಾನಕ್ಕೆ ಎ.ಎಸ್. ಪೊನ್ನಣ್ಣ ನೇತೃತ್ವದಲ್ಲಿ ಕಾರ್ಯಕರ್ತರು ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಂ ಅವರು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಪೊನ್ನಂಪೇಟೆ ಘಟಕ ಮಹಿಳಾ ಅಧ್ಯಕ್ಷೆ ಕೋಳೆರ ಭಾರತಿ, ಕೊಡಗು ಜಿಲ್ಲಾ ಮಾನವ ಹಕ್ಕು ಉಪಾಧ್ಯಕ್ಷೆ ಕುಸುಮಾಜೋಯಪ್ಪ, ಮಾಜಿ ಜಿಲ್ಲಾಧ್ಯಕ್ಷ ಶಿವುಮಾದಪ್ಪ, ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಪಿ.ಕೆ. ಪೊನ್ನಪ್ಪ, ಪೊನ್ನಂಪೇಟೆ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸಾಜಿಅಚ್ಚುತ್ತನ್, ಜಿಲ್ಲಾ ಎಸ್.ಟಿ. ಘಟಕದ ಅಧ್ಯಕ್ಷೆ ಪಂಕಜ, ಬಿರುನಾಣಿ ವಲಯ ಮಾಜಿ ಅಧ್ಯಕ್ಷ ಅಣ್ಣಾಳಮಾಡ ಲಾಲಅಪ್ಪಣ್ಣ ಹಾಜರಿದ್ದರು.

ಪಕ್ಷಕ್ಕೆ ಸೇರ್ಪಡೆ

ಸಭೆಯಲ್ಲಿ ಹಲವು ಪ್ರಮುಖ ಕಾರ್ಯಕರ್ತರು ಇತರ ಪಕ್ಷದಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಕಳೆದ ಬಾರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಬುಟಿಯಂಡ ತಂಬಿನಾಣಯ್ಯ, ಮಾಜಿ ಗ್ರಾ.ಪಂ. ಅಧ್ಯಕ್ಷೆ ಜಯಮ್ಮ, ಮಾಜಿ ಗ್ರಾ.ಪಂ. ಸದಸ್ಯ ಕುಪ್ಪಣಮಾಡ ಬೇಬಿ ನಂಜಮ್ಮ, ಸೇರಿದಂತೆ ೪೫ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಕೊಡಗು ಜಿಲ್ಲಾ ಮಾನವ ಹಕ್ಕು ಉಪಾಧ್ಯಕ್ಷೆ ಕುಸುಮಾಜೋಯಪ್ಪ, ಮಾಜಿ ಜಿಲ್ಲಾಧ್ಯಕ್ಷ ಶಿವುಮಾದಪ್ಪ, ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಪಿ.ಕೆ. ಪೊನ್ನಪ್ಪ, ಪೊನ್ನಂಪೇಟೆ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸಾಜಿಅಚ್ಚುತ್ತನ್, ಜಿಲ್ಲಾ ಎಸ್.ಟಿ. ಘಟಕದ ಅಧ್ಯಕ್ಷೆ ಪಂಕಜ, ಬಿರುನಾಣಿ ವಲಯ ಮಾಜಿ ಅಧ್ಯಕ್ಷ ಅಣ್ಣಾಳಮಾಡ ಲಾಲ ಅಪ್ಪಣ್ಣ, ಹೈಕೋರ್ಟ್ ವಕೀಲ ಬೋಪಣ್ಣ, ಜಿ.ಪಂ. ಮಾಜಿ ಸದಸ್ಯ ಬಾನಂಡ ಪ್ರಥ್ಯು, ಕೆ.ಎಂ. ಬಾಲಕೃಷ್ಣ, ತಾ.ಪಂ. ಮಾಜಿ ಸದಸ್ಯರಾದ ಉಮೇಶ್‌ಕೇಚಮ್ಮಯ್ಯ, ಪಲ್ವಿನ್ ಪೂಣಚ್ಚ, ಪ್ರಮುಖರಾದ ಕೊಲ್ಲೀರ ಬೋಪಣ್ಣ, ಚೊಟ್ಟೆಯಂಡಮಾಡ ವಿಶು, ಮುಕ್ಕಾಟೀರ ಸಂದೀಪ್, ತಾ.ಪಂ. ಮಾಜಿ ಅಧ್ಯಕ್ಷೆ ರೇವತಿಪರಮೇಶ್ವರ ಹಾಜರಿದ್ದರು.