ಗೋಣಿಕೊಪ್ಪ ವರದಿ, ಸೆ. ೧೨ : ಬೀರುಗ ಗ್ರಾಮದಲ್ಲಿ ಶನಿವಾರ ರಾತ್ರಿ ಕಾಡಾನೆ ಹಿಂಡು ದಾಳಿ ನಡೆಸಿ ಭತ್ತ ಬೆಳೆ ನಾಶ ಮಾಡಿವೆ. ಅಯ್ಯಮಾಡ ಉದಯ ಅವರ ಬೆಳೆ ತಿಂದು ಸುಮಾರು ೫೦ ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಕಾಫಿ ತೋಟಕ್ಕೆ ಲಗ್ಗೆ ಇಟ್ಟು ಬಾಳೆ, ಅಡಕೆ, ತೆಂಗು, ಕಾಫಿ ರೆಂಬೆ ಮುರಿದು ನಾಶ ಮಾಡಿದೆ.

ಸ್ಥಳಕ್ಕೆ ಶ್ರೀಮಂಗಲ ವನ್ಯಜೀವಿ ವಲಯ ಅಧ್ಯಕ್ಷ ವೀರೇಂದ್ರ ಬೇಟಿ ನೀಡಿ ಪರಿಶೀಲನೆ ನಡೆಸಿದರು. ವೀರಾಜಪೇಟೆ ತಾಲೂಕು ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ತಕ್ಷಣ ನಷ್ಟಕ್ಕೆ ಪರಿಹಾರ ನೀಡಬೇಕು. ಆನೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ರೈತ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ ಈ ಬಗ್ಗೆ ಇಲಾಖೆ ಅಧಿಕಾರಿಯನ್ನು ಒತ್ತಾಯಿಸಿದರು. ಪರಿಹಾರ ವಿತರಿಸಲು ಕ್ರಮಕೈಗೊಳ್ಳುವುದಾಗಿ ಅಧಿಕಾರಿ ವೀರೇಂದ್ರ ಭರವಸೆ ನೀಡಿದರು.