ಮಡಿಕೇರಿ, ಸೆ. ೧೨: ಹೇಳಿ-ಕೇಳಿ ಕೊಡಗು ಕೃಷಿ ಪ್ರಧಾನವಾಗಿರುವ ಜಿಲ್ಲೆ. ಇಲ್ಲಿನ ಜನತೆಯ ಬದುಕಿನ ಆಧಾರವೇ ಕೃಷಿ ಫಸಲುಗಳು ಹಾಗೂ ಪ್ರಮುಖವಾಗಿರುವ ಕಾಫಿ ಇತ್ಯಾದಿ. ಇದರ ಮೂಲಕವೇ ವ್ಯಾಪಾರ ವಹಿವಾಟುಗಳು ಅವಲಂಬಿತವಾಗಿವೆ. ಇಂತಹ ಜಿಲ್ಲೆಯಲ್ಲಿ ವಾತಾವರಣದ ಬದಲಾವಣೆಯಿಂದಾಗಿ ನಿರಂತರವಾಗಿ ಮಳೆಯಾಗುತ್ತಿರುವುದು ಕೊರೊನಾ ಸಂಕಷ್ಟದ ನಡುವೆ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದೀಗ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ನಿನ್ನೆಯಿಂದ ಜಿಲ್ಲೆಯಾದ್ಯಂತ ಮತ್ತೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ತಾ. ೧೫ರ ತನಕವೂ ಭಾರೀ ಮಳೆಯಾಗುವ ಸೂಚನೆಯೊಂದಿಗೆ ಯಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ.

ಈಗಾಗಲೇ ಪ್ರಸಕ್ತ ವರ್ಷಾರಂಭದಿAದಲೇ ನಿರಂತರವಾಗಿ ಜಿಲ್ಲೆ ಮಳೆಯ ಸನ್ನಿವೇಶವನ್ನೇ ಎದುರಿಸುತ್ತಿದ್ದು, ಈಗಿನ ಪರಿಸ್ಥಿತಿ ಬಹುತೇಕ ಎಲ್ಲಾ ಕೃಷಿ ಫಸಲುಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತಿದೆ. ಮುಂದಿನ ಭವಿಷ್ಯದ ಬಗ್ಗೆ ಈಗಿನ ಸನ್ನಿವೇಶ ರೈತರು ಬೆಳೆಗಾರರಲ್ಲಿ ಮಾತ್ರವಲ್ಲದೆ ವ್ಯಾಪಾರಸ್ಥರಲ್ಲಿಯೂ ಆತಂಕವನ್ನುAಟು ಮಾಡುತ್ತಿದೆ.

ಗಣೇಶೋತ್ಸವ ದಿನದ ಸಂದರ್ಭ ತುಸು ಕಡಿಮೆಯಾದಂತಿದ್ದ ಮಳೆ ನಿನ್ನೆಯಿಂದ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಸುರಿಯುತ್ತಿದೆ.

ಜಿಲ್ಲೆಯ ಮಳೆ ವಿವರ

ಜಿಲ್ಲೆಯಲ್ಲಿ ಒಟ್ಟು ೧.೫೦ ಇಂಚು ಸರಾಸರಿ ಮಳೆಯಾಗಿದೆ. ಮಡಿಕೇರಿ ಕಸಬಾಕ್ಕೆ ೧.೪೬ ಇಂಚು, ನಾಪೋಕ್ಲು ವ್ಯಾಪ್ತಿಗೆ ೨.೫೧ ಇಂಚು, ಸಂಪಾಜೆ ವ್ಯಾಪ್ತಿಗೆ ೨ ಇಂಚು, ಭಾಗಮಂಡಲ ವ್ಯಾಪ್ತಿಯಲ್ಲಿ ೩.೪೬ ಇಂಚು ಮಳೆಯಾಗಿದೆ.

ವೀರಾಜಪೇಟೆ ಕಸಬಾಕ್ಕೆ ೧.೫೩ ಇಂಚು, ಹುದಿಕೇರಿ ವ್ಯಾಪ್ತಿಗೆ ೦.೮೮ ಇಂಚು, ಶ್ರೀಮಂಗಲ ವ್ಯಾಪ್ತಿಗೆ ೧.೪೪ ಇಂಚು, ಪೊನ್ನಂಪೇಟೆ ವ್ಯಾಪ್ತಿಗೆ ೩.೬ ಇಂಚು, ಅಮ್ಮತ್ತಿ ೦.೫, ಬಾಳೆಲೆ ವ್ಯಾಪ್ತಿಯಲ್ಲಿ ೦.೪ ಇಂಚು ಮಳೆಯಾಗಿದೆ.

ಸೋಮವಾರಪೇಟೆ ಕಸಬಾಕ್ಕೆ ೦.೫೬೮ ಇಂಚು, ಶನಿವಾರಸಂತೆ ವ್ಯಾಪ್ತಿ ೦.೮ ಇಂಚು, ಶಾಂತಳ್ಳಿ ವ್ಯಾಪ್ತಿ ೧.೬೦ ಇಂಚು, ಕೊಡ್ಲಿಪೇಟೆ ವ್ಯಾಪ್ತಿ ೦.೬೨ ಇಂಚು, ಕುಶಾಲನಗರ ವ್ಯಾಪ್ತಿ ೦.೨೨ ಇಂಚು, ಸುಂಟಿಕೊಪ್ಪ ವ್ಯಾಪ್ತಿಗೆ ೦.೬೪ ಇಂಚು ಮಳೆಯಾಗಿದೆ.