ಕೂಡಿಗೆ, ಸೆ. ೧೧: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ ಕಳೆದ ಮೂರು ವರ್ಷಗಳಿಂದಲೂ ಈ ಭಾಗದಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವಿಶೇಷ ಅನುದಾನದಲ್ಲಿ ೨೫೦ಕ್ಕೂ ಹೆಚ್ಚು ದನದ ಕೊಟ್ಟಿಗೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಆದರೆ ಕಳೆದ ೫ ವರ್ಷಗಳಿಂದಲೂ ಹೆಬ್ಬಾಲೆಯಲ್ಲಿರುವ ಪಶು ಚಿಕಿತ್ಸಾಲಯಕ್ಕೆ ಖಾಯಂ ವೈದ್ಯರ ನೇಮಕವಾಗದೆ ಹಸುಗಳ ಚಿಕಿತ್ಸೆಗಾಗಿ ರೈತರು ಪರದಾಡುವಂತಹ ಪ್ರಸಂಗ ಎದುರಾಗಿದೆ.
ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯು ಹತ್ತು ಗ್ರಾಮಗಳನ್ನು ಒಳಗೊಂಡಿದ್ದು, ಈ ಭಾಗದ ರೈತರು ಶೇ. ೮೦ ರಷ್ಟು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ರೈತರು ಹಾಲಿನ ಉತ್ಪಾದನೆ ಹೆಚ್ಚಿಸಲು ವಿವಿಧ ಹೈಬ್ರೀಡ್ ತಳಿಯ ಹಸುಗಳನ್ನು ಹೊರ ರಾಜ್ಯಗಳಿಂದ ತಂದು ಸಾಕುತ್ತಿದ್ದಾರೆ.
ಹೆಬ್ಬಾಲೆಯಲ್ಲಿ ಕಳೆದ ೧೫ ವರ್ಷಗಳ ಹಿಂದೆ ಸುಸಜ್ಜಿತ ಪಶು ಪ್ರಾಥಮಿಕ ಚಿಕಿತ್ಸಾಲಯವನ್ನು ತೆರೆದರೂ ಸಹ ಕಳೆದ ೫ ವರ್ಷಗಳಿಂದಲೂ ಖಾಯಂ ವೈದ್ಯಯ ನೇಮಕಾತಿ ಆಗಿಲ್ಲ. ಈ ಕೇಂದ್ರದಲ್ಲಿ ತಾತ್ಕಾಲಿಕ ವೈದ್ಯರು ವಾರಕ್ಕೆ ಒಂದು ದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ ದಿನಗಳಲ್ಲಿ ಪಶು ಪರಿವೀಕ್ಷಕರೆ ಹಸುಗಳಿಗೆ ಚಿಕಿತ್ಸೆ ನೀಡುವಂತಾಗಿದೆ.
ಖಾಯA ಪಶು ವೈದ್ಯಾಧಿಕಾರಿಯನ್ನು ನೇಮಕ ಮಾಡುವಂತೆ ಗ್ರಾಮ ಪಂಚಾಯಿತಿ ವತಿಯಿಂದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೆಬ್ಬಾಲೆ ಗ್ರಾಮ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ತಿಳಿಸಿದ್ದಾರೆ.
ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿರುವುದರಿಂದ ರೈತರ ಹಸುಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಖಾಯಂ ವೈದ್ಯರನ್ನು ನೇಮಕ ಮಾಡಬೇಕೆಂದು ಹೆಬ್ಬಾಲೆ, ಹುಲುಸೆ, ೬ನೇ ಹೊಸಕೋಟೆ, ಹಳಗೋಟೆ ಸೇರಿದಂತೆ ಹತ್ತು ಗ್ರಾಮಗಳ ರೈತರು ಒತ್ತಾಯಿಸಿದ್ದಾರೆ. - ಕೆ.ಕೆ. ಎನ್.