ಕುಶಾಲನಗರ ಸೆ. ೭: ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ನಡೆದ ಅಪಘಾತ ಪರಿಣಾಮ ಬೈಕ್ ಹೊತ್ತಿ ಉರಿದು ಗಂಭೀರವಾಗಿ ಗಾಯಗೊಂಡಿದ್ದ ಕೊಡಗು ಮೂಲದ ಯುವಕ ಸಾವನ್ನಪ್ಪಿರುವ ಘಟನೆ ಹುಣಸೂರು-ಮಡಿಕೇರಿ ನಡುವಿನ ರಾಷ್ಟಿçÃಯ ಹೆದ್ದಾರಿಯ ಕಲ್ಬೆಟ್ಟ ಜಂಕ್ಷನ್ನಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ಪಾರಾಣೆ-ಕೊಣಂಜಗೇರಿ ಗ್ರಾ.ಪಂ. ವ್ಯಾಪ್ತಿಯ ಕೈಕಾಡು ಗ್ರಾಮದ ಬೊಳ್ಳಂಡ ಡಿ. ಪ್ರವೀಣ್ ಅವರ ಪುತ್ರ ಬಿ.ಪಿ ಮುತ್ತಣ್ಣ (೨೩) ಮೃತ ದುರ್ದೈವಿ.
ಹುಣಸೂರಿನಿಂದ ಮಡಿಕೇರಿಯತ್ತ ತೆರಳುತ್ತಿದ್ದ ಮುತ್ತಣ್ಣ ಬೈಕ್ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನ ಪೆಟ್ರೋಲ್ ಟ್ಯಾಂಕ್ ಸೋರಿಕೆ ಪರಿಣಾಮ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿದೆ.
ಮೃತ ಪ್ರವೀಣ್ ತಾಮರ ರೆಸಾರ್ಟ್ನಲ್ಲಿ ಉದ್ಯೋಗಿಯಾಗಿದ್ದು, ಮೈಸೂರಿನಲ್ಲಿ ಉದ್ಯೋಗದಲ್ಲಿದ್ದ ತನ್ನ ಸಹೋದರ ನಾಚಪ್ಪ ಅವರನ್ನು ಭೇಟಿಯಾಗಲು ತೆರಳುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ. ತೀವ್ರ ರಕ್ತ ಸ್ರಾವದಿಂದ ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಯುವಕ ಮಾರ್ಗಮಧ್ಯೆ ಅಸುನೀಗಿದ್ದಾನೆ.
ಘಟನೆ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಹುಣಸೂರು ಗ್ರಾಮಾಂತರ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರ ಅಂತ್ಯಕ್ರಿಯೆ ತಾ. ೭ ರಂದು ಸ್ವಗ್ರಾಮದಲ್ಲಿ ನೆರವೇರಿತು.