ಮಡಿಕೇರಿ, ಸೆ. ೮: ಮೈಸೂರು ವಿಶ್ವವಿದ್ಯಾನಿಲಯದ ೨೦೨೦-೨೧ನೇ ಸಾಲಿನ ೧೦೧ನೇ ಘಟಿಕೋತ್ಸವದಲ್ಲಿ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ "ಜಾಹೀರಾತು" ವಿಷಯದಲ್ಲಿ ಕೊಡಗಿನ ಕುವರಿ ಅಹಲ್ಯಾ ಅಪ್ಪಚ್ಚು ಪ್ರಥಮ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಿವಾಸಿ ಅನುಸೂಯಾ ಹಾಗೂ ಡಿ.ಕೆ. ಅಪ್ಪಚ್ಚು ದಂಪತಿಗಳ ಪುತ್ರಿಯಾದ ಅಹಲ್ಯಾ ಅಪ್ಪಚ್ಚು ಬಹಳ ಚುರುಕಿನ ಸ್ವಭಾವದವರು. ವಿದ್ಯಾಭ್ಯಾಸ, ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸದಾ ಮುಂದು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. ೮೦ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೯೨ ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರರಾದವರು. ಅಂದಿನ ಕೊಡಗಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರಿಂದ ಪ್ರಶಸ್ತಿಯನ್ನೂ ಪಡೆದಿದ್ದರು.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿ ನಂತರ ಉನ್ನತ ವ್ಯಾಸಂಗಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯ ಪ್ರವೇಶಿಸಿದ್ದರು. ಪದವಿಯಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಕಾಲೇಜಿಗೆ ಮೊದಲ ಸ್ಥಾನ ಗಳಿಸಿದ ಕೀರ್ತಿ ಇವರದ್ದು. ಓದಿನಲ್ಲಿ ಬಂಗಾರದ ಸಾಧನೆ ಮಾಡಬೇಕೆನ್ನುವ ಕನಸನ್ನಿಟ್ಟುಕೊಂಡು ನಡೆಸಿದ ಅಭ್ಯಾಸಕ್ಕೆ ಸಿಕ್ಕಿದ ಫಲವಿದಾಗಿದ್ದು, ಕನಸು ಕನಸಾಗಿ ಉಳಿಯಬಾರದು ಅದನ್ನು ಸಾಧಿಸಿ ತೋರಿಸುವ ಛಲವಿರಬೇಕೆನ್ನುತ್ತಾರೆ ಅಹಲ್ಯಾ.

ಪಠ್ಯೇತರ ಚಟುವಟಿಕೆ

ಬಾಲ್ಯದಿಂದಲೂ ಎಲ್ಲಾ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಚಟುವಟಿಕೆಯಿಂದ ಭಾಗವಹಿಸುತ್ತಿದ್ದ ಇವರಿಗೆ ಚಿತ್ರಕಲೆ ಎಂದರೆ ಅಚ್ಚುಮೆಚ್ಚು. ಯಾವುದೇ ತರಬೇತಿ ಇಲ್ಲದೆ ಸ್ವತಃ ಸತತ ಅಭ್ಯಾಸ ನಡೆಸಿ ಚಿತ್ರಕಲೆಯ ನೈಪುಣ್ಯತೆಯನ್ನು ಗಿಟ್ಟಿಸಿಕೊಂಡವರು. ಶಾಲಾ ದಿನಗಳಲ್ಲಿ ಏರ್ಪಡಿಸುತ್ತಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನಗಳು ದೊರೆತಾಗ ಚಿತ್ರಕಲೆಯಲ್ಲಿನ ಆಸಕ್ತಿ ಮತ್ತಷ್ಟು ಹೆಚ್ಚಾಯಿತು. ಬಹಳ ಆಳವಾದ ಅರ್ಥವನ್ನು ಕಲ್ಪಿಸುವ ಪರಿಸರದ ಚಿತ್ರಗಳನ್ನು ಅದ್ಭುತವಾಗಿ ಬಿಡಿಸುವುದಲ್ಲದೆ, ಯಾವುದೇ ವ್ಯಕ್ತಿಯ ಮುಖಚಹರೆಯನ್ನು ಅಂದವಾಗಿ ಬಿಡಿಸುವಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಜೊತೆಗೆ ಸಂಗೀತದ ಕೀಬೋರ್ಡ್ ನುಡಿಸುವುದಲ್ಲದೆ, ಕ್ಲೇ ಮಾಡೆಲಿಂಗ್, ವಸ್ತç ವಿನ್ಯಾಸ, ಹಾಡುಗಾರಿಕೆ ಇವರ ಹವ್ಯಾಸ. ಪ್ರಬಂಧ ರಚನೆ, ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನಾದರೂ ಸಂಪಾದಿಸುವ ಹಂಬಲದಿAದ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಇವರ ಸ್ವಭಾವ.

ಕಾಲೇಜು ದಿನಗಳಲ್ಲಿ ಸೌಂದರ್ಯ ಸ್ಪರ್ಧೆಗಳಲ್ಲಿ ಮಿಂಚುವ ಮೂಲಕ ವೀಕ್ಷಕರ ಹಾಗೂ ತೀರ್ಪುಗಾರರ ಮನಸುಗಳನ್ನು ಗೆದ್ದು ಕಿರೀಟ ಧರಿಸಿದ್ದು ಇವರ ಚಾತುರ್ಯತೆಗೆ ಉದಾಹರಣೆ.

ಈ ಎಲ್ಲಾ ಹವ್ಯಾಸಗಳೊಡನೆ ಓದಿನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮೈಸೂರು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕವನ್ನು ಪಡೆದು ಕೊಂಡಿರುವುದು ಇವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತಾಗಿದೆ.

- ಬರಹ : ಚಂದನ್ ನಂದರಬೆಟ್ಟು