ಕೇರಳ ರಾಜ್ಯದಲ್ಲಿ ‘ನಿಫಾ ವೈರಸ್’ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊಡಗು ಜಿಲ್ಲೆಯಲ್ಲಿಯೂ ಆತಂಕ ಮನೆ ಮಾಡಿದ್ದು, ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ.
ಜ್ವರ, ತಲೆನೋವು, ತಲೆ ಸುತ್ತುವಿಕೆ, ವಾಂತಿ, ಪ್ರಜ್ಞಾಹೀನತೆಗೆ ಒಳಗಾಗುವುದು, ಅತಿಯಾದ ಜ್ವರ ಮೆದುಳಿಗೆ ವ್ಯಾಪಿಸುವುದು, ಮಾತಿನಲ್ಲಿ ತೊದಲುವಿಕೆ, ಅಪಸ್ವರ ಇವು ನಿಫಾ ವೈರಸ್‌ನ ರೋಗ ಲಕ್ಷಣಗಳಾಗಿದ್ದು, ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡು ಬಂದಲ್ಲಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.
ಸೋಂಕಿತ ಬಾವಲಿಗಳ ನೇರ ಸಂಪರ್ಕದಿAದ ಹಾಗೂ ಬಾವಲಿಗಳು ಬಿಸಾಡಿದ ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ಇತರ ಪ್ರಾಣಿಗಳಿಗೆ ಹರಡುತ್ತದೆ. ಸೋಂಕಿತ ಪ್ರಾಣಿಗಳಿಂದ ಇತರ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು, ರಕ್ತ ಇವುಗಳ ನೇರ ಸಂಪರ್ಕದಿAದ ಹಾಗೂ ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಹರಡುವ ಸಾಧ್ಯತೆ ಇದೆ.
ಮುಂಜಾಗ್ರತಾ ಕ್ರಮಗಳು
ಯಾವುದೇ ರೀತಿಯ ಜ್ವರ ಕಂಡು ಬಂದಲ್ಲಿ ಉದಾಸೀನ ಮಾಡದೇ ಹಾಗೂ ನಿಫಾ ವೈರಸ್ ಲಕ್ಷಣಗಳಿರುವ ಜ್ವರಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು. ರೋಗಿಗಳ ಜೊತೆ ಕಾರ್ಯನಿರ್ವಹಿಸುವ ಸಿಬ್ಬಂದಿ ಮಾಸ್ಕ್, ಕೈಕವಚ ಧರಿಸುವುದು ಮುಂತಾದ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಗಮನ ಕೊಡುವುದು.
ಯಾವುದೇ ಪ್ರಾಣಿ-ಪಕ್ಷಿಗಳು ಕಚ್ಚಿದ ಹಾಗೂ ಮಳೆಗಾಳಿಯಿಂದ ಬಿದ್ದಿರುವ ಹಣ್ಣುಗಳನ್ನು ಸೇವಿಸಬಾರದು. ಬೀದಿ ಬದಿಗಳಲ್ಲಿ ಕತ್ತರಿಸಿ ಮಾರುವ ಹಣ್ಣು ಹಂಪಲುಗಳನ್ನು ಸೇವಿಸಬಾರದು. ನೀರಾ ಇಳಿಸುವವರು ವೈಯಕ್ತಿಕ ಸ್ವಚ್ಛತೆ ಕಾಪಾಡುವುದು ಹಾಗೂ ಸರಿಯಾಗಿ ಕೈ ಕಾಲುಗಳನ್ನು ಸೋಪಿನಿಂದ ತೊಳೆಯುವುದು.
ಶುಚಿಗೊಳಿಸದ ಕೈಗಳಿಂದ ಕಣ್ಣು ಮತ್ತು ಮೂಗುಗಳನ್ನು ಉಜ್ಜಬಾರದು. ಕಚ್ಚಾ ಖರ್ಜೂರಗಳನ್ನು ಸೇವಿಸದಿರುವುದು. ಸಂಸ್ಕರಿಸದ ಯಾವುದೇ ಡ್ರೆöÊ ಫ್ರೂಟ್‌ಗಳನ್ನು ಉಪಯೋಗಿಸದಿರುವುದು. ಸಂಸ್ಕರಿಸದ ಡೇಟ್ಸ್ ಫ್ರೂಟ್ ಜ್ಯೂಸ್‌ಗಳನ್ನು ಉಪಯೋಗಿಸದಿರುವುದು. ಹಂದಿ ಸಾಕಾಣಿಕಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಯಾವುದೇ ರೀತಿಯ ಗಾಯ ಅಥವಾ ಸೋಂಕಿಗೆ ಒಳಗಾಗಿದ್ದಲ್ಲಿ ಸೂಕ್ತ ಚಿಕಿತ್ಸೆಗೆ ಒಳಪಡುವುದು.
ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸಂಗ್ರಹಣೆ ಮಾಡುವ ಸೇಂದಿ ಮತ್ತು ಪಾನೀಯಗಳನ್ನು ಸೇವಿಸಬಾರದು. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿರುವ ತೆರೆದ ಬಾವಿಯ ನೀರನ್ನು ಶುದ್ದೀಕರಿಸಿ ಸೇವಿಸುವುದು ಹಾಗೂ ಬಾವಿಗಳನ್ನು ಬಲೆಗಳಿಂದ ಮುಚ್ಚಿ ಬಾವಲಿಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳುವುದು.
ಈ ವೈರಸ್ ಜ್ವರವು ನೇರ ಸಂಪರ್ಕದಿAದ ಹರಡುವುದರಿಂದ ಸೋಂಕಿತ ವ್ಯಕ್ತಿ ಮತ್ತು ಪ್ರಾಣಿಗಳಿಂದ (ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕೆಲವು ಸಂದರ್ಭದಲ್ಲಿ ಕುರಿಗಳು) ದೂರವಿರುವುದು ಸೂಕ್ತವಾಗಿದೆ. ಅಲ್ಲದೆ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಆರೋಗ್ಯ ಸಹಾಯವಾಣಿ ೧೦೪ ಅಥವಾ ೦೮೨೭೨-೨೨೫೪೪೩ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.