ಮಡಿಕೇರಿ, ಸೆ. ೭: ಕೊರೊನಾ ಮಹಾಮಾರಿಯಿಂದಾಗಿ ಸಾಮಾಜಿಕ, ಕೌಟುಂಬಿಕ ಚಟುವಟಿಕೆಗಳೆಲ್ಲವೂ ಕಳೆಗುಂದಿವೆ. ಧಾರ್ಮಿಕ ಆಚರಣೆಯಾದ ಗಣೇಶ ಚತುರ್ಥಿಗೂ ಕೊರೊನಾ ವಿಘ್ನವಾಗಿ ಪರಿಣಮಿಸಿದೆ. ವಿನಾಯಕನ ಆರಾಧನೆಗೆ ಸರ್ಕಾರ ಅವಕಾಶ ನೀಡಿದೆಯಾದರೂ ಐದು ದಿನಗಳಿಗೆ ಸೀಮಿತಗೊಳಿಸಿ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ. ಗಣಪತಿ ಆರಾಧನೆಯ ಪ್ರಮುಖ ಆಕರ್ಷಣೆಗಳಾದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಡಿಜೆಗಳಿಗೆ ನಿಷೇಧ ಹೇರಲಾಗಿದ್ದು, ಆಡಂಬರದ ಆಚರಣೆಗೆ ಕೊರೊನಾ ಅಡ್ಡಿಯಾಗಿದೆ.

ಹೀಗಿದ್ದರೂ ಕೂಡ ಗಣಪತಿ ಉತ್ಸವ ಸಮಿತಿಗಳು ಸರ್ಕಾರದ ನಿಯಮ ಪಾಲನೆಯೊಂದಿಗೆ ಕೇವಲ ಪೂಜೆ ಪುನಸ್ಕಾರಕ್ಕೆ ಸೀಮಿತವಾಗಿ ಗಣೇಶೋತ್ಸವ ಆಚರಿಸಲು ತಯಾರಿ ನಡೆಸಿವೆ. ಜಿಲ್ಲಾ ಕೇಂದ್ರ ಮಡಿಕೇರಿ, ತಾಲೂಕು ಕೇಂದ್ರಗಳಾದ ಸೋಮವಾರಪೇಟೆ, ವೀರಾಜಪೇಟೆ, ಕುಶಾಲನಗರ, ಪೊನ್ನಂಪೇಟೆ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲೂ ವಿನಾಯಕನ ಆರಾಧನೆಗೆ ಸಿದ್ಧತೆಗಳು ನಡೆದಿವೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಉತ್ಸವ ಸಮಿತಿಗಳ ಪ್ರಮುಖರ ಸಭೆ ನಡೆಸಿ ಸರ್ಕಾರದ ಮಾರ್ಗಸೂಚಿಗಳ ಪಾಲನೆ ಸಂಬAಧ ಸೂಚನೆಗಳನ್ನು ನೀಡುವ ಪ್ರಕ್ರಿಯೆಯು ಚಾಲ್ತಿಯಲ್ಲಿದೆ.

ಮಡಿಕೇರಿಯಲ್ಲಿ ೩೩ ಕಡೆ

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಈ ಬಾರಿ ೩೩ ಕಡೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ. ಮಹದೇವಪೇಟೆ ವಿನಾಯಕ ಯುವಕ ಮಿತ್ರಮಂಡಳಿ, ಚಾಮುಂಡೇಶ್ವರಿ ನಗರ ಸಿದ್ದಿವಿನಾಯಕ ಮಿತ್ರ ಮಂಡಳಿ, ಮೆಸ್ಕಾಂ ಗಣೇಶೋತ್ಸವ ಸಮಿತಿ, ಗೌಳಿ ಬೀದಿ ಶ್ರೀ ಕಂಚಿಕಾಮಾಕ್ಷಿ ಯುವಕ ಸಂಘ, ಸುದರ್ಶನ ಬಡಾವಣೆಯ ಮುನೀಶ್ವರ ಯುವಕ ಸಂಘ, ಕೊಹಿನೂರು ರಸ್ತೆ ಹಿಂದೂ ಯುವಶಕ್ತಿ, ಬನ್ನಿಮಂಟಪ ಸ್ವಸ್ತಿಕ್ ಯುವ ವೇದಿಕೆ, ಸಂಪಿಗೆ ಕಟ್ಟೆ ಯುವಕ ಸಂಘ, ಜ್ಯೋತಿನಗರ ಶಿವಶಕ್ತಿ ಯುವಕ ಸಂಘ, ದೇಚೂರು ವಿದ್ಯಾವಾರಿಧಿ ಸಂಘ, ಮಂಗಳಾದೇವಿ ನಗರ ಶ್ರೀ ಆದಿಪರಾಶಕ್ತಿ ಯುವಕ ಸಂಘ, ಕೆಎಸ್‌ಆರ್‌ಟಿಸಿ ಡಿಪೋ, ಬ್ರಾಹ್ಮಣರ ಬೀದಿಯ ಓಂಕಾರ್ ಯುವ ವೇದಿಕೆ, ರೈಫಲ್‌ರೇಂಜ್ ಗಣಪತಿ, ಕಲಾನಗರ ರಾಘವೇಂದ್ರ ದೇವಾಲಯ ಗಣಪತಿ, ಗಣಪತಿ ಬೀದಿ ಗಣಪತಿ ಯುವಕ ಸಂಘ, ಕನ್ನಂಡಬಾಣೆ ದೃಷ್ಠಿ ಗಣಪತಿ ಯುವಕ ಸಂಘ, ಶ್ರೀ ಮಹಾಗಣಪತಿ ಸೇವಾ ಸಮಿತಿ ಕಾನ್ವೆಂಟ್ ಜಂಕ್ಷನ್, ಮಲ್ಲಿಕಾರ್ಜುನ ನಗರ ಜ್ಯೋತಿ ಯುವಕ ಸಂಘ, ವಿದ್ಯಾನಗರ ವಿನಾಯಕ ಉತ್ಸವ ಸಮಿತಿ, ಜಿ.ಟಿ. ರಸ್ತೆ ಧಾರ್ಮಿಕ್ ಯುವ ವೇದಿಕೆ, ಹೊಸ ಬಡಾವಣೆ ಪ್ರಸನ್ನ ಗಣಪತಿ ಯುವಕ ಸಮಿತಿ, ಚಾಮುಂಡೇಶ್ವರಿ ನಗರ ಕೇಸರಿ ಯುವಕ ಸಂಘ, ಐಟಿಐ ಜಂಕ್ಷನ್‌ನ ಮೈತ್ರಿ ವಿಘ್ನೇಶ್ವರ ಯುವಕ ಸಂಘ, ಪುಟಾಣಿನಗರ ಉದ್ಭವ ವಿನಾಯಕ ಸೇವಾ ಸಮಿತಿ, ಚೈನ್‌ಗೇಟ್ ವಿದ್ಯಾವಿನಾಯಕ ಯುವಕ ಸಂಘ, ಅಂಬೇಡ್ಕರ್ ಬಡಾವಣೆ ಅಂಬೇಡ್ಕರ್ ಯುವಕ ಸಂಘ, ರಾಣಿಪೇಟೆ ಮುನೀಶ್ವರ ಯುವಕ ಸಂಘ, ಭಗವತಿ ನಗರ ಭಗವತಿ ಯುವಕ ಶಕ್ತಿ ಸಂಘ, ಚೌಡೇಶ್ವರಿ ದೇವಾಲಯ ಸಮಿತಿ, ತ್ಯಾಗರಾಜಕಾಲೋನಿಯ ಅಭಿಷ್ಠಪ್ರಧ ಗಣಪತಿ ಯುವಕ ಸಂಘ, ಗಣಪತಿ ಸೇವಾ ಸಮಿತಿ ಅಶೋಕಪುರ, ಶಾಂತಿನಿಕೇತನ ಯುವಕ ಸಂಘ ಈ ಉತ್ಸವ ಸಮಿತಿಗಳು ಈ ಬಾರಿಯ ಉತ್ಸವ ಆಚರಣೆ ತಯಾರಿ ನಡೆಸಿವೆ. ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯಲ್ಲಿ ೬೨ ಕಡೆ ಉತ್ಸವ ಆಚರಣೆ ನಡೆಯಲಿದೆ.

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಕೆಲವೆಡೆ ಗಣಪತಿ ಉತ್ಸವ ಮೂರ್ತಿಗಳ ಮಾರಾಟ ಪ್ರಾರಂಭವಾಗಿದೆಯಾದರೂ ಪ್ರತಿಬಾರಿಯಂತೆ ಬಿರುಸಿನ ಸನ್ನಿವೇಶ ಕಂಡು ಬರುತ್ತಿಲ್ಲ. ಕೊನೆ ಘಳಿಗೆವರೆಗೂ ಗಣಪತಿ ಉತ್ಸವ ಆಚರಣೆ ಕೊರೊನಾ ಹಿನ್ನೆಲೆಯಲ್ಲಿ ಸಾಧ್ಯವೇ? ಇಲ್ಲವೇ? ಎಂಬ ಬಗ್ಗೆ ಗೊಂದಗಳಿದ್ದ ಕಾರಣ ಗಣಪತಿ ಉತ್ಸವ ಮೂರ್ತಿಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಅಧಿಕ ಸಂಖ್ಯೆಯಲ್ಲಿ ಮೂರ್ತಿಗಳನ್ನು ತಂದಿಡಲು ಮುಂದಾಗಲಿಲ್ಲ. ಎರಡು ದಿನಗಳ ಹಿಂದಷ್ಟೆ ಸರ್ಕಾರ ಗಣೇಶೋತ್ಸವಕ್ಕೆ ನಿರ್ಬಂಧಗಳ ಸಹಿತ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೆಲವಾರು ಬಗೆಯ ಉತ್ಸವ ಮೂರ್ತಿಗಳು ಮಾತ್ರ ಮಾರಾಟಕ್ಕೆ ಸಿದ್ಧವಾಗಿವೆ. ಕೊರೊನಾ ಹಿನ್ನೆಲೆಯಲ್ಲಿ ಮೂರ್ತಿಗಳ ಮಾರಾಟ ಬಹಳಷ್ಟು ಕುಸಿತ ಕಂಡಿದೆ ಎಂದು ಮಡಿಕೇರಿಯ ಗಣಪತಿ ಮೂರ್ತಿಗಳ ಮಾರಾಟಗಾರರಲ್ಲೊಬ್ಬರಾದ ಪ್ರಶಾಂತ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

ಪ್ರತಿ ಬಾರಿ ಮಡಿಕೇರಿಯಲ್ಲಿ ಎಂಟಕ್ಕೂ ಅಧಿಕ ಗಣಪತಿ ಮೂರ್ತಿಗಳನ್ನು ತಯಾರು ಮಾಡುತ್ತಿದ್ದ ಕಲಾವಿದ ರವಿ ಅವರು ಈ ಬಾರಿ ಕೇವಲ ೨ ಗಣಪತಿ ಮೂರ್ತಿಗಳನ್ನು ಮಾತ್ರ ರಚಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕೊನೆ ಘಳಿಗೆಯಲ್ಲಿ ಉತ್ಸವಕ್ಕೆ ಸರ್ಕಾರ ಅನುಮತಿ ನೀಡಿದ್ದರಿಂದ ಸಮಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ಹೆಚ್ಚಿನ ಮೂರ್ತಿಗಳ ರಚನೆ ಕಾರ್ಯವನ್ನು ಒಪ್ಪಿಕೊಳ್ಳಲಿಲ್ಲ ಎಂದು ರವಿ ಹೇಳಿದರು.

ವೀರಾಜಪೇಟೆಯಲ್ಲಿ ೨೧ ಕಡೆ

* ವೀರಾಜಪೇಟೆ: ಗೌರಿ ಗಣೇಶೋತ್ಸವದ ಆಚರಣೆಗೆ ತಿಂಗಳುಗಟ್ಟಲೇ ಸಿದ್ಧತೆ ನಡೆಸುತ್ತಿದ್ದ ವೀರಾಜಪೇಟೆ ಪಟ್ಟಣದ ವಿವಿಧ ಉತ್ಸವ ಸಮಿತಿಗಳು ಕೊರೊನಾ ಹಿನ್ನೆಲೆಯಲ್ಲಿ ಆಚರಣೆಯನ್ನು ಒಂದು ಅಥವಾ ಮೂರು ದಿನಕ್ಕೆ ಮೊಟಕುಗೊಳಿಸಿವೆ.

ವೀರಾಜಪೇಟೆ ಪಟ್ಟಣದಲ್ಲಿ ಗೌರಿಗಣೇಶನ ಉತ್ಸವದ ಆಚರಣೆಗೆ ಸಂಬAಧಿಸಿದAತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಸಮಿತಿಗಳಿಗೆ ಮಾಹಿತಿ ನೀಡಿದ್ದಾರೆ. ವೀರಾಜಪೇಟೆಯ ಐತಿಹಾಸಿಕ ಗೌರಿಗಣೇಶ ನಾಡಹಬ್ಬದ ಸಮಿತಿಯ ಅಧ್ಯಕ್ಷ ಬಿ.ಜಿ.ಸಾಯಿನಾಥ್ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ವೀರಾಜಪೇಟೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಅತ್ಯಂತ ಸರಳವಾಗಿ ಉತ್ಸವ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರತಿಬಾರಿಯಂತೆ ಈ ಬಾರಿ ಸಾಮೂಹಿಕ ವಿಸರ್ಜನೆ ಇರುವುದಿಲ್ಲ. ವೀರಾಜಪೇಟೆ ಮೀನುಪೇಟೆಯಲ್ಲಿರುವ ಮುತ್ತಪ್ಪ ದೇವಾಲಯದ ಆವರಣದಲ್ಲಿ ಗಣಪತಿ ಉತ್ಸವ ಸಮಿತಿಗಳ ಪ್ರಮುಖರು ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆದು ಸಭೆಯಲ್ಲಿ ಸರ್ಕಾರದ ಸೂಚನೆಯಡಿ ಉತ್ಸವ ಆಚರಿಸುವ ಸಂಬAಧ ಚರ್ಚೆ ನಡೆಯಿತು.

ವೀರಾಜಪೇಟೆಯಲ್ಲಿ ಈ ಬಾರಿ ೨೧ ಕಡೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ ನೆಹರು ನಗರ ನೇತಾಜಿ ಉತ್ಸವ ಸಮಿತಿ, ಪಂಜರುಪೇಟೆ ಗಣಪತಿ ಬೀದಿ ಮಹಾಗಣಪತಿ ಸೇವಾ ಸಮಿತಿ, ಪಂಜರುಪೇಟೆ ವಿನಾಯಕ ಸೇವಾ ಸಮಿತಿ, ಗಾಂಧಿನಗರ ಗಣಪತಿ ಸೇವಾ ಸಮಿತಿ, ಮಲೆತಿರಿಕೆ ಬೆಟ್ಟ ಕಣ್ಮಣಿ ವಿನಾಯಕ ಉತ್ಸವ ಸಮಿತಿ, ಹರಿಕೇರಿ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಮೀನುಪೇಟೆ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ, ಗೌರಿಕೆರೆ ಗಣಪತಿ ಸೇವಾ ಸಮಿತಿ, ಪ.ಪಂ. ಪೌರಸೇವಾ ನೌಕರರ ಸಂಘ, ಪೆರುಂಬಾಡಿ ವಿದ್ಯಾವಿನಾಯಕ ಸೇವಾ ಸಮಿತಿ, ಬೇಟೋಳಿ ವಿನಾಯಕ ಸೇವಾ ಸಮಿತಿ, ರಾಮನಗರ ಪುದುಪಾಡಿ ಗಣಪತಿ ಸಮಿತಿ, ರಾಮನಗರ ಬೇಟೋಳಿ ವಿನಾಯಕ ಯುವಕ ಸಂಘ, ಮಗ್ಗುಲ ಡೆಂಟಲ್ ಕಾಲೇಜ್ ಗಣಪತಿ ಮಂಡಳಿ, ವಿನಾಯಕ ನಗರ ವರಸಿದ್ಧಿವಿನಾಯಕ ಸೇವಾ ಸಮಿತಿ, ಅರಸುನಗರ ವಿಘ್ನೇಶ್ವರ ಸೇವಾ ಸಮಿತಿ, ತೆಲುಗರ ಬೀದಿ ವಿನಾಯಕ ಯುವಕ ಭಕ್ತ ಮಂಡಳಿ, ದಕ್ಕನಿ ಮೊಹಲ್ಲಾ ವಿಜಯವಿನಾಯಕ ಉತ್ಸವ ಸಮಿತಿ, ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ಸುಂಕದಕಟ್ಟೆಯ ಸರ್ವಸಿದ್ಧಿವಿನಾಯಕ ಉತ್ಸವ ಸಮಿತಿ, ಕುಕ್ಲೂರು ಗ್ರಾಮದ ವಿನಾಯಕ ಸೇವಾ ಸಮಿತಿಗಳು ಗಣಪತಿ ಆರಾಧನೆ ಮಾಡಲಿವೆ.

ಸೋಮವಾರಪೇಟೆ ವ್ಯಾಪ್ತಿಯಲ್ಲಿ

ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ೨೦ ಸ್ಥಳಗಳಲ್ಲಿ ಈ ಬಾರಿ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಲಾಗಿದೆ.

ಕೊರೊನಾ ಹಿನ್ನೆಲೆ ಸರ್ಕಾರ ಹತ್ತು ಹಲವು ಬಿಗಿ ನಿಯಮಗಳನ್ನು ಜಾರಿಗೊಳಿಸಿದ್ದು, ಇದರಿಂದಾಗಿ ಹಲವಷ್ಟು ಸಮಿತಿಗಳು ಗಣೇಶೋತ್ಸವ ನಡೆಸಲು ಮುಂದಾಗಿಲ್ಲ. ಕಳೆದೆರಡು ವರ್ಷಗಳ ಹಿಂದೆ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೫೦ಕ್ಕೂ ಅಧಿಕ ಕಡೆಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಈ ಬಾರಿ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೨೦ ಕಡೆಗಳಲ್ಲಿ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ.

ಸೋಮವಾರಪೇಟೆ ಪಟ್ಟಣದ ಸಾರ್ವಜನಿಕ ಗೌರಿಗಣೇಶ ಉತ್ಸವ ಸಮಿತಿ, ಮಹದೇಶ್ವರ ಬಡಾವಣೆ, ಕರ್ಕಳ್ಳಿ, ಕಟ್ಟೆ ಬಸವೇಶ್ವರ ದೇವಾಲಯ, ಮಾನಸ ಹಾಲ್, ರಾಮಮಂದಿರ ಸೇರಿದಂತೆ ಕೂತಿ, ಚಿಕ್ಕತೋಳೂರು, ಐಗೂರು, ಯರಪಾರೆ, ದೊಡ್ಡಮಳ್ತೆ, ಗಣಗೂರು, ಮಾದಾಪುರ ಸೇರಿದಂತೆ ಇತರೆಡೆಗಳಲ್ಲಿ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಸಮಿತಿಯ ಪ್ರಮುಖರು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ. ಕೊರೊನಾ ಹಿನ್ನೆಲೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಯಾವುದೇ ಕಾನೂನು ಉಲ್ಲಂಘನೆಯಾಗದAತೆ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಇಲಾಖೆ ಸೂಚನೆ ನೀಡಿದೆ.

ಸೋಮವಾರಪೇಟೆ ಪಟ್ಟಣದಲ್ಲಿ ಉತ್ಸವ ಮೂರ್ತಿಗಳ ಮಾರಾಟವೂ ಮಂದಗತಿಯಲ್ಲಿ ಸಾಗುತ್ತಿದೆ. ಹೆತ್ತೂರಿನ ಮಂಜು ಅವರ ಸಹೋದರರು ತಯಾರಿಸಿರುವ ಮೂರ್ತಿಗಳನ್ನು ಪಟ್ಟಣದ ಗಣಪತಿ ದೇವಾಲಯ ಸಮೀಪ ಮಾರಾಟಕ್ಕಿಟ್ಟಿದ್ದು, ಈವರೆಗೆ ಕೇವಲ ೧೨ ಮೂರ್ತಿಗಳು ಮಾತ್ರ ಮಾರಾಟವಾಗಿವೆ. ಕೊರೊನಾ ಹಿನ್ನೆಲೆ ಉತ್ಸವ ಮೂರ್ತಿಗಳ ಖರೀದಿಗೆ ಜನರು ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ ಎಂದು ಮಂಜು ತಿಳಿಸಿದ್ದಾರೆ.

ಪೊನ್ನಂಪೇಟೆ

ಪೊನ್ನAಪೇಟೆ: ಈ ಬಾರಿ ಅತಿ ಸರಳವಾಗಿ ಗೌರಿ ಗಣೇಶ ಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದೆ.ಈ ಬಗ್ಗೆ ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯು ಗೌರಿ ಗಣೇಶ ಹಬ್ಬದ ಪೂರ್ವಭಾವಿ ಸಭೆಯನ್ನು ನಡೆಸಿದ್ದು, ಕೋವಿಡ್ ಕಾರಣದಿಂದಾಗಿ ಸರ್ಕಾರದ ನಿಯಮದ ಅನುಸಾರ ಹಬ್ಬವನ್ನು ಶಾಸ್ತೊçÃಕ್ತವಾಗಿ ಆಚರಿಸಲು ನಿರ್ಣಯಿಸಲಾಗಿದೆ. ಗ್ರಾಮದ ಇತರ ಗೌರಿ ಗಣೇಶ ಉತ್ಸವ ಸಮಿತಿಗಳಿಗೆ ಹಬ್ಬದ ಆಚರಣೆಯ ಕುರಿತು ಮಾಹಿತಿಯನ್ನು ಪತ್ರ ಮುಖೇನ ತಿಳಿಸಲಾಗಿದೆ.

ತಾ.೯ ರಂದು ಗೌರಿ ಹಬ್ಬದ ದಿನ ಬೆಳಗ್ಗೆ ೬.೧೫ಕ್ಕೆ ಗೌರಿ ಕೆರೆಗೆ ತೆರಳಿ ಪೂಜೆ ಸಲ್ಲಿಸಿ ಗೌರಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಅಂದು ಬೆಳಗ್ಗೆ ೮.೩೦ ಕ್ಕೆ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ಮಾಡಲಾಗುವುದು. ತಾ.೧೦ ರಂದು ಗಣೇಶ ಚತುರ್ಥಿಯ ದಿನ ಬೆಳಗ್ಗೆ ೬ ಗಂಟೆಗೆ ಗಣಪತಿ ಹೋಮ ನಡೆಸಿ ೮ ಗಂಟೆಗೆ ಗಣೇಶ ಮೂರ್ತಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು. ಅದೇ ದಿನ ಸಂಜೆ ೪.೪೫ ಕ್ಕೆ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು. ಪೊನ್ನಂಪೇಟೆಯಲ್ಲಿ ಬಸವೇಶ್ವರ ದೇವಸ್ಥಾನ, ಕೃಷ್ಣನಗರ, ಶಿವಕಾಲೋನಿ, ಕಾಟ್ರಕೊಲ್ಲಿ, ಎಂ.ಜಿ.ನಗರ, ವಿಘ್ನೇಶ್ವರ ವಾಹನ ಚಾಲಕರ ಮಾಲೀಕರ ಸಂಘ ಹಾಗೂ ಜೋಡುಬೀಟಿ ಈ ಸಮಿತಿಗಳು ಗಣೇಶೋತ್ಸವ ಆಚರಣೆ ಮಾಡಲಿವೆ.

ಗೋಣಿಕೊಪ್ಪಲು

ಗೋಣಿಕೊಪ್ಪಲು : ಗೋಣಿಕೊಪ್ಪ ಉಮಾಮಹೇಶ್ವರಿ ದೇವಾಲಯದಲ್ಲಿ ಗಣೇಶ ಉತ್ಸವವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಲು ದೇವಾಲಯ ಸಮಿತಿ ನಿರ್ಧರಿಸಿದೆ. ಭಕ್ತಾಧಿಗಳು ದೇವಾಲಯದ ಆವರಣಕ್ಕೆ ಆಗಮಿಸುವ ಸಂದರ್ಭ ಸ್ಯಾನಿಟೈಸ್ ಮಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಲು ವ್ಯವಸ್ಥೆ ಮಾಡಲಾಗಿದೆ.

ಈ ಬಾರಿಯ ಉತ್ಸವವನ್ನು ಸರಳ ಪೂಜಾ ಕಾರ್ಯದೊಂದಿಗೆ ಮೂರು ದಿನಗಳ ನಂತರ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು ಈ ಬಾರಿ ಸಾಮೂಹಿಕ ಪೂಜೆ, ಅನ್ನದಾನ ಇತ್ಯಾದಿಗಳನ್ನು ನಿರ್ಬಂಧಿಸಲಾಗಿದೆ ಎಂದು ದೇವಾಲಯ ಸಮಿತಿಯ ಆಡಳಿತ ಮಂಡಳಿ ತಿಳಿಸಿದೆ.

ಕುಶಾಲನಗರ

ಕುಶಾಲನಗರ: ಗಜಮುಖನ ಉತ್ಸವಕ್ಕೆ ಇನ್ನೆರಡು ದಿನ ಬಾಕಿಯಿರುವಂತೆ ಕುಶಾಲನಗರದಲ್ಲಿ ಗೌರಿ ಮತ್ತು ಗಣೇಶನ ಮೂರ್ತಿಗಳ ಮಾರಾಟ ಮಳಿಗೆಗಳು ತೆರೆದುಕೊಂಡಿವೆ.

ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಕೇವಲ ಮಣ್ಣಿನ ಗಣಪತಿಗಳ ಮೂರ್ತಿಗಳ ಮಾರಾಟಕ್ಕೆ ಮಾತ್ರ ಅವಕಾಶವಿರುವ ಕಾರಣ ಕುಶಾಲನಗರಕ್ಕೆ ಕಳೆದ ೧೪ ವರ್ಷದಿಂದ ಗಣಪತಿ ಮೂರ್ತಿಗಳನ್ನು ಮೈಸೂರಿನಿಂದ ತಂದು ಮಾರಾಟ ಮಾಡುತ್ತಿದ್ದ ವಿಶ್ವನಾಥ್, ಸರ್ಕಾರ ಉತ್ಸವ ಆಚರಣೆಗೆ ವಿಧಿಸಿರುವ ಮಾರ್ಗಸೂಚಿ ಗಮನಿಸಿ ಕೆಲವೇ ಕೆಲವು ಮೂರ್ತಿಗಳನ್ನು ಮಾರಾಟಕ್ಕೆ ತಂದಿರುವ ದೃಶ್ಯ ಕಂಡುಬAತು. ಈ ಮೊದಲು ಕುಶಾಲನಗರದ ರಥ ಬೀದಿಯ ಬಹುತೇಕ ಕಡೆಗಳಲ್ಲಿ ಕಂಡು ಬರುತ್ತಿದ್ದ ಗಣಪತಿ ಮೂರ್ತಿಗಳ ಮಳಿಗೆಗಳು ಕೋವಿಡ್ ಪರಿಣಾಮ ಕಣ್ಮರೆಯಾಗಿವೆ.

ಸಿದ್ದಾಪುರ

ಸಿದ್ದಾಪುರ: ಸಿದ್ದಾಪುರ ಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ೧೫ಕ್ಕೂ ಅಧಿಕ ಸಮಿತಿಗಳ ವತಿಯಿಂದ ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆದಿದೆ. ಕೆಲವು ಸಮಿತಿಯವರು ಮೊದಲ ದಿನ ಇನ್ನೂ ಕೆಲವು ಸಮಿತಿಯವರು ಎರಡು ದಿನಗಳ ಬಳಿಕ ವಿಸರ್ಜನೆ ಮಾಡಲು ನಿರ್ಧರಿಸಿದ್ದಾರೆ. ಸಿದ್ದಾಪುರ, ಮಾಲ್ದಾರೆ, ಪಾಲಿಬೆಟ್ಟ, ನೆಲ್ಲಿಹುದಿಕೇರಿ ಸುತ್ತಮುತ್ತಲಿನ ಗೌರಿ-ಗಣೇಶ ಆಚರಣೆಯ ಸಮಿತಿಯವರು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಸುಂಟಿಕೊಪ್ಪ

ಸುAಟಿಕೊಪ್ಪ : ಇಲ್ಲಿನ ವಿಶ್ವಹಿಂದೂ ಪರಿಷತ್ ವತಿಯಿಂದ ೫೬ನೇ ವರ್ಷದ ಗೌರಿಗಣೇಶ ಮೂರ್ತಿಯನ್ನು ಶ್ರೀ ರಾಮಮಂದಿರದಲ್ಲಿ ತಾ. ೧೦ ರಂದು ಪ್ರತಿಷ್ಠಾಪಿಸಿ ತಾ. ೧೨ ರಂದು ಮಧ್ಯಾಹ್ನ ೩ ಗಂಟೆಗೆ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಗದ್ದೆಹಳ್ಳದ ಕೆರೆಯಲ್ಲಿ ವಿರ್ಸಜಿಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್ ತಿಳಿಸಿದ್ದಾರೆ.

ನಾರ್ಗಣಿ ಗ್ರಾಮದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಶ್ರೀ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ತಾ. ೧೦ ರಂದು ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದೇ ದಿನ ಮಧ್ಯಾಹ್ನ ೩ ಗಂಟೆಗೆ ಗ್ರಾಮದ ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಪ್ರಶಾಂತ್ ತಿಳಿಸಿದ್ದಾರೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಇನ್ನೂ ಹಲವೆಡೆ ಉತ್ಸವ ಆಚರಣೆಗೆ ಸಮಿತಿಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ.

-ವರದಿ : ಉಜ್ವಲ್‌ರಂಜಿತ್, ವಿಜಯ್ ಹಾನಗಲ್, ಉಷಾ ಪ್ರೀತಂ, ಮೂರ್ತಿ, ಸಿಂಚು, ವಾಸು, ಚನ್ನನಾಯಕ, ಜಗದೀಶ್, ರಾಜು ರೈ