ಮಡಿಕೇರಿ, ಸೆ. ೭: ಕೋವಿಡ್ ರೋಗ ಲಕ್ಷಣಗಳನ್ನು ಹೋಲುವ ನಿಫಾ ವೈರಾಣು ಕೇರಳ ರಾಜ್ಯದಲ್ಲಿ ಪತ್ತೆಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಯಾವುದೇ ಸೋಂಕಿತರು ಪತ್ತೆಯಾಗಿಲ್ಲ. ಜಿಲ್ಲೆಯ ಜನ ಆತಂಕಪಡುವ ಅಗತ್ಯವಿಲ್ಲ. ಆದರೆ, ಮುನ್ನೆಚ್ಚರಿಕೆ ಮುಖ್ಯ ಎಂದು ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು.

ನಗರದ ಡಿ.ಹೆಚ್.ಓ. ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೯೮-೯೯ರಲ್ಲಿ ಮಲೇಷಿಯಾದಲ್ಲಿ ನಿಫಾ ವೈರಾಣು ಪತ್ತೆಯಾಯಿತು. ಇದೀಗ ಕೇರಳದ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಜನರ ಸಹಕಾರ ಕೂಡ ಮುಖ್ಯವಾಗಿದೆ ಎಂದರು.

ನಿಫಾ ಸೋಂಕು ತಗುಲಿದ್ದಲ್ಲಿ ಜ್ವರ, ತಲೆನೋವು, ವಾಂತಿ, ತಲೆ ಸುತ್ತುವಿಕೆ, ಪ್ರಜ್ಞಾಹೀನತೆ ಆಗುತ್ತದೆ. ಜೊತೆಗೆ ಜ್ವರ ಹೆಚ್ಚಾಗಿ ಮೆದುಳಿಗೆ ವ್ಯಾಪಿಸುತ್ತದೆ. ಮಾತುಗಳಲ್ಲಿ ತೊದಲುವಿಕೆ ಹಾಗೂ ಅಪಸ್ವರ ಲಕ್ಷಣಗಳು ಇರುತ್ತವೆ. ಸೂಕ್ತ ಚಿಕಿತ್ಸೆ ಸಿಗದಿದ್ದಲ್ಲಿ ಸಾವು ಸಂಭವಿಸಬಹುದು. ಆಗಾಗಿ ಸೋಂಕು ಪತ್ತೆಯಾದ ತಕ್ಷಣವೇ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆಗೆ ಒಳಗಾಗುವಂತೆ ಕರೆ ನೀಡಿದರು.

ಸೋಂಕಿತ ಬಾವಲಿಗಳ ನೇರ ಸಂಪರ್ಕದಿAದ ಹಾಗೂ ಬಾವಲಿಗಳು ಎಸೆದ ಹಣ್ಣು ಸೇವಿಸುವುದರಿಂದ ಇತರ ಪ್ರಾಣಿಗಳಿಗೆ ಸೋಂಕು ಹರಡುತ್ತದೆ. ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು, ರಕ್ತ ಇವುಗಳ ನೇರ ಸಂಪರ್ಕ ಸೋಂಕು ತಗುಲುತ್ತದೆ. ಹಣ್ಣುಗಳನ್ನು ಖರೀದಿಸುವಾಗ ಹಾಗೂ ಸೇವಿಸುವಾಗ ಜನರು ಗಮನಿಸಿ ಸೇವಿಸಬೇಕು. ಸಾಕುಪ್ರಾಣಿಗಳಿಗಳಿಂದ ಸೋಂಕು ಹರಡುವ ಹಿನ್ನೆಲೆ ಪಶುವೈದ್ಯಕೀಯ ಕೇಂದ್ರಗಳಲ್ಲಿ ಪ್ರಾಣಿಗಳನ್ನು ತಪಾಸಣೆ ಒಳಪಡಿಸುವಂತೆ ಸಲಹೆ ನೀಡಿದರು.

ಈ ವೈರಾಣುವಿಗೆ ಲಕ್ಷಣ ಆಧಾರಿತ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಲಕ್ಷಣಗಳಿದ್ದಲ್ಲಿ ಅಂತವರ ಗಂಟಲು ದ್ರವ ಪರೀಕ್ಷೆ ನಡೆಸಿ ಪುಣೆಗೆ ರವಾನಿಸಿ ವರದಿ ತರಿಸಿಕೊಳ್ಳುವುದು. ಈ ನಿಟ್ಟಿನಲ್ಲಿ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಕೇರಳ-ಕೊಡಗು ಗಡಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದರು.

ಜನರು ಮಾಸ್ಕ್ ಧರಿಸುವುದು ಮುಂದುವರೆಸಬೇಕು. ನೀರನ್ನು ಶುದ್ಧೀಕರಿಸಿ ಕುಡಿಯಬೇಕು. ಸಂಗ್ರಹಣೆ ಮಾಡಿದ ನೀರಾ (ಸೇಂದಿ) ಸೇವನೆ ಬಿಡಬೇಕು. ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಪ್ರಮಾಣ ಇನ್ನೂ ಕೆಲವೇ ದಿನಗಳಲ್ಲಿ ಇಳಿಕೆಯಾಗಲಿದೆ. ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಸಮರೋಪಾದಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದರು.