ಮಡಿಕೇರಿ, ಸೆ. ೭: ಕೊಡಗು ಜಿಲ್ಲೆಯ ಮಹಿಳಾ ಫುಟ್ಬಾಲ್ ಆಟಗಾರ್ತಿಯರಿಗೆ, ತಮ್ಮ ಪ್ರತಿಭೆಯನ್ನು ರಾಷ್ಟçಮಟ್ಟದಲ್ಲಿ ಪ್ರದರ್ಶಿಸಲು ಅತ್ಯುತ್ತಮ ವೇದಿಕೆ ಒದಗಿ ಬಂದಿದೆ.

ಜಿಲ್ಲೆಯ ಪಾಲಿಬೆಟ್ಟದ ಖ್ಯಾತ ಫುಟ್ಬಾಲ್ ಕ್ಲಬ್ ಕ್ಯಾಪ್ಟನ್ಸ್ ಇಲೆವನ್ ನಲ್ಲಿ ಆಡಿದ ಜಿಲ್ಲೆಯ ಪ್ರಖ್ಯಾತ ಆಟಗಾರ ಎಚ್.ಎಚ್ ಹರೀಶ್ ಅವರು, ಯುನೈಟೆಡ್ ಕೊಡಗು ಎಫ್.ಸಿ ತಂಡವನ್ನು ಸ್ಥಾಪಿಸಿ, ಜಿಲ್ಲೆಯ ಮಹಿಳಾ ಫುಟ್ಬಾಲ್ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಕೇವಲ ನಿಗದಿತ ಸಮಯದಲ್ಲಿ ಯುನೈಟೆಡ್ ಕೊಡಗು ಎಫ್.ಸಿ ಮಹಿಳಾ ತಂಡವನ್ನು ಸ್ಥಾಪಿಸಿ, ಯುನೈಟೆಡ್ ಕೊಡಗು ಎಫ್.ಸಿ ತಂಡದ ಸ್ಥಾಪಕ ಹಾಗೂ ಮುಖ್ಯ ಕೋಚ್ ಎಚ್.ಎಚ್.ಹರೀಶ್ ಅವರು ಜಿಲ್ಲೆಯ ಫುಟ್ಬಾಲ್ ಪ್ರೇಮಿಗಳ ಮನಗೆದ್ದಿದ್ದಾರೆ.

ಪ್ರತಿಷ್ಠಿತ "ಎ" ಡಿವಿಷನ್ ಲೀಗ್‌ನಲ್ಲಿ ಯುನೈಟೆಡ್ ಕೊಡಗು ಎಫ್.ಸಿ.

ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯಲಿರುವ ಪ್ರತಿಷ್ಠಿತ "ಎ" ಡಿವಿಷನ್ ಲೀಗ್‌ನಲ್ಲಿ ಕೊಡಗು ಯುನೈಟೆಡ್ ಎಫ್.ಸಿ ತಂಡ ನೋಂದಣಿಯಾಗಿದೆ.

"ಎ" ಡಿವಿಷನ್ ಲೀಗ್ ನಲ್ಲಿ ಒಟ್ಟು ೧೭ ತಂಡಗಳು ಭಾಗವಹಿಸಲಿವೆ. ರಾಜ್ಯಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಜಿಲ್ಲೆಯ ಮಹಿಳಾ ಫುಟ್ಬಾಲ್ ಆಟಗಾರ್ತಿ ಯರಿಗೆ ಇದೊಂದು ಸುವರ್ಣವಕಾಶವಾಗಿದೆ.

ಜಿಲ್ಲೆಯಲ್ಲಿ ಒಂದೆರಡು ಮಹಿಳಾ ಫುಟ್ಬಾಲ್ ಕ್ಲಬ್‌ಗಳು ಈಗಾಗಲೇ ಇದ್ದರೂ ಸಹಾ, ಮಹಿಳಾ ಆಟಗಾರರಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿರಲಿಲ್ಲ. ಅಲ್ಲದೇ ಕೇವಲ ಗ್ರಾಮೀಣ ಮಟ್ಟದಲ್ಲಿ ನಡೆಯುವ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಮಾತ್ರ ಭಾಗವಹಿಸಲು ಅವಕಾಶ ದೊರಕುತ್ತಿತ್ತು. ಕಳೆದ ಎರಡು-ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಮಹಿಳೆಯರ ಫುಟ್ಬಾಲ್ ತಂಡಗಳ ನಡುವೆ ಯಾವುದೇ ಪಂದ್ಯಾಟಗಳೇ ನಡೆದಿಲ್ಲ. ಆದರೆ ಇದೀಗ ಕೊಡಗು ಜಿಲ್ಲೆಯ ಫುಟ್ಬಾಲ್ ಆಟಗಾರ, ಪ್ರಸ್ತುತ ಬೆಂಗಳೂರಿನ ನಕ್ಷತ್ರ ಅಕಾಡೆಮಿಯಲ್ಲಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಎಚ್.ಎಚ್ ಹರೀಶ್ ಅವರು, ತಾವೇ ಸ್ವತಃ ಮುಂದೆ ಬಂದು ಕೊಡಗು ಯುನೈಟೆಡ್ ಎಫ್.ಸಿ ಮಹಿಳಾ ತಂಡವನ್ನು ಸ್ಥಾಪಿಸಿದ್ದು, ಜಿಲ್ಲೆಯ ಮಹಿಳಾ ಫುಟ್ಬಾಲ್ ಆಟಗಾರರಿಗೆ ಉತ್ತಮ ವೇದಿಕೆ ದೊರೆತಿದೆೆ. ಬೆಂಗಳೂರಿನ ಪ್ರತಿಷ್ಠಿತ "ಎ" ಡಿವಿಷನ್ ಲೀಗ್‌ನಲ್ಲಿ ಕೂಡ ಕ್ಲಬ್ ನೋಂದಣಿ ಆಗಿದೆ. ಜಿಲ್ಲೆಯ ಮಹಿಳಾ ಫುಟ್ಬಾಲ್ ಆಟಗಾರರು ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿ, ರಾಷ್ಟ್ರಮಟ್ಟದ ಪ್ರತಿಷ್ಠಿತ ಫುಟ್ಬಾಲ್ ಅಕಾಡೆಮಿಗಳಿಗೆ ಆಯ್ಕೆಯಾಗಲು "ಎ" ಡಿವಿಷನ್ ಲೀಗ್ ಉತ್ತಮ ವೇದಿಕೆಯಾಗಿದೆ. ಕೊಡಗು ಯುನೈಟೆಡ್ ಎಫ್.ಸಿ ತಂಡದಲ್ಲಿ ಒಟ್ಟು ೨೦ ಆಟಗಾರರಲ್ಲಿ ಇದುವರೆಗೆ ಕೊಡಗಿನಿಂದ ೨ ಮಹಿಳಾ ಆಟಗಾರರಾದ ನಿಖಿತಾ ಹಾಗೂ ಪ್ರಮೀಳಾ ಪಿ. ಮಾತ್ರ ನೋಂದಣಿ ಮಾಡಿದ್ದಾರೆ. ಮೈಸೂರು ಹಾಗೂ ರಾಜಸ್ಥಾನದಿಂದ ತಲಾ ಒಬ್ಬರು ಹಾಗೂ ಬೆಂಗಳೂರಿನಿAದ ೧೬ ಆಟಗಾರರು ಸ್ಥಾನ ಪಡೆದಿದ್ದಾರೆ.

ಯುನೈಟೆಡ್ ಕೊಡಗು ಎಫ್.ಸಿ ತಂಡದಲ್ಲಿ ,ಜಿಲ್ಲೆಯ ಮಹಿಳಾ ಆಟಗಾರರಿಗೆ ಮೊದಲ ಆದ್ಯತೆ ನೀಡಲಾಗುವುದೆಂದು ತಂಡದ ಮುಖ್ಯ ತರಬೇತುದಾರ ಎಚ್.ಎಚ್ ಹರೀಶ್ ತಿಳಿಸಿದ್ದಾರೆ. ಆಸಕ್ತ ಮಹಿಳಾ ಆಟಗಾರರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು: ೮೯೫೧೮೨೦೨೫೧.

- ಕೆ.ಎಂ. ಇಸ್ಮಾಯಿಲ್ ಕಂಡಕರೆ