ಮಡಿಕೇರಿ, ಸೆ. ೭ : ಜೇನಿನ ಗೂಡು ಎಂದೇ ಖ್ಯಾತಿ ಗಳಿಸಿದ್ದ ಕೊಡಗಿನಲ್ಲಿ ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿರುವ ಜೇನು ಕೃಷಿ ವಿಭಾಗ ಇದೀಗ ಅವನತಿಯತ್ತ ಮುಖ ಮಾಡಿದೆ. ಸರ್ಕಾರದ ಇಚ್ಛಾಶಕ್ತಿಯ ಕೊರತೆ ಮತ್ತು ಸ್ಥಳೀಯ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಈ ವಿಭಾಗವೇ ಮುಚ್ಚುವ ಹಂತಕ್ಕೆ ಬಂದು ತಲುಪಿದೆ.
ಕೊಡಗಿನಲ್ಲಿ ಜೇನಿನ ಉತ್ಪಾದನೆ ಹೆಚ್ಚಾಗಿದ್ದ ಕಾಲದಲ್ಲಿ ಜೇನು ಕೃಷಿ ವಿಭಾಗ ಪ್ರತ್ಯೇಕ ಇಲಾಖೆಯಾಗಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಕೂರ್ಗ್ “ಸಿ”ರಾಜ್ಯವಿದ್ದಾಗಲೇ ಅಸ್ತಿತ್ವದಲ್ಲಿದ್ದ ಜೇನು ಕೃಷಿ ವಿಭಾಗ ಜೇನಿನ ಉತ್ಪಾದನೆಗೆ ಉತ್ತೇಜನ ನೀಡುತ್ತಿತ್ತು. ನಂತರದ ದಿನಗಳಲ್ಲಿ ಕೈಗಾರಿಕಾ ಇಲಾಖೆಯೊಂದಿಗೆ ಗುರುತಿಸಿಕೊಂಡ ಈ ಜೇನು ವಿಭಾಗ ೨೦೧೧ ರಲ್ಲಿ ತೋಟಗಾರಿಕಾ ಇಲಾಖೆಯೊಂದಿಗೆ ವಿಲೀನ ಗೊಂಡಿತು. ಜೇನು ನೊಣಗಳು ಪ್ರಕೃತಿ ಯೊಂದಿಗೆ ಹೆಚ್ಚು ಹೊಂದಿ ಕೊಂಡು ಪರಾಗಸ್ಪರ್ಷದಂತಹ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತವೆ ಎನ್ನುವ ಕಾರಣಕ್ಕೆ ಜೇನು ಕೃಷಿ ವಿಭಾಗವನ್ನು ತೋಟಗಾರಿಕಾ ಇಲಾಖೆಯ ಅಂಗವ ನ್ನಾಗಿ ಅಧಿಕೃತ ಗೊಳಿಸಲಾಯಿತು.
ಆರಂಭದ ದಿನಗಳಲ್ಲಿ ಜೇನು ಕೃಷಿ ಕೃಷಿಕರ ಕೈ ಹಿಡಿಯಿತಲ್ಲದೆ, ಇತರರಿಗೂ ಸ್ಫೂರ್ತಿಯನ್ನು ತುಂಬಿತು. ಆದರೆ ದಿನ ಕಳೆದಂತೆ ಪ್ರಕೃತಿ ಸಹಜ ಸೋಂಕಿನಿAದಾಗಿ ಜೇನು ಕೃಷಿ ಕ್ಷೀಣಿಸಲು ಆರಂಭ ವಾಯಿತು. ಅತಿ ಚಟುವಟಿಕೆಯಿಂದಿದ್ದ ಜೇನು ಕೃಷಿ ವಿಭಾಗ ಕಳೆಗುಂದಿತು. ಅಲ್ಲದೆ ಸರ್ಕಾರಕ್ಕೂ ಈ ವಿಭಾಗದ ಮೇಲಿನ ಆಸಕ್ತಿ ಕಡಿಮೆಯಾಯಿತು. ಇದರ ಪರಿಣಾಮ
(ಮೊದಲ ಪುಟದಿಂದ) ಇಂದು ರಾಜ್ಯವ್ಯಾಪಿ ಇರುವ ಕಚೇರಿಗಳಲ್ಲಿ ಉಳಿದಿರುವ ಸಿಬ್ಬಂದಿಗಳ ಸಂಖ್ಯೆ ಒಟ್ಟು ೭ ಮಾತ್ರ. ಕೊಡಗು ಜಿಲ್ಲೆಯಲ್ಲಿ ಒಬ್ಬ ಅಧಿಕಾರಿ ಸೇರಿ ಕೇವಲ ನಾಲ್ವರು ಸಿಬ್ಬಂದಿಗಳಿದ್ದಾರೆ.
೪೨ ಎಕರೆ ಆಸ್ತಿ
ಮಧುವನ ಯೋಜನೆಯಡಿ ಜಿಲ್ಲೆಯಾದ್ಯಂತ ಜೇನು ಕೃಷಿ ವಿಭಾಗÀಕ್ಕೆ ಸೇರಿದ ೪೨ ಎಕರೆಯಷ್ಟು ಭೂಮಿ ಇದೆ. ಆದರೆ ಸಿಬ್ಬಂದಿಗಳ ಕೊರತೆಯಿಂದಾಗಿ ಉದ್ದೇಶಿತ ಯೋಜನೆಗಳಾದ ಮಧುವನ, ಹನಿಪಾರ್ಕ್ ಮತ್ತು ತರಬೇತಿ ಕೇಂದ್ರಗಳ ಚಟುವಟಿಕೆ ಕ್ಷೀಣಿಸಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಕೊಡಗು ಜಿಲ್ಲೆಯ ಜೇನು ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವ ಕಾರಣಕ್ಕೆ ಉತ್ಪಾದನೆಯನ್ನು ಹೆಚ್ಚು ಮಾಡಲು ಮತ್ತು ಕೃಷಿಗೆ ಉತ್ತೇಜನವನ್ನು ನೀಡಲು ಈ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿತು. ಇದರ ಅನುಷ್ಠಾನ ನಿರೀಕ್ಷಿತ ಮಟ್ಟಕ್ಕೆ ತಲುಪದೇ ಇರುವುದಕ್ಕೆ ಸಿಬ್ಬಂದಿಗಳನ್ನು ನೇಮಕ ಮಾಡದೆ ಇರುವುದೇ ಪ್ರಮುಖ ಕಾರಣವಾಗಿದೆ.
ಭಾಗಮಂಡಲ, ಕೋರಂಗಾಲ, ಗಾಳಿಬೀಡು, ಮಾದಾಪುರ, ಜಗ್ಗನಹಳ್ಳಿ, ಶಾಂತಳ್ಳಿ, ಬಿರುನಾಣಿ, ಕೆದಮಳ್ಳೂರು, ಬಿ.ಶೆಟ್ಟಿಗೇರಿ ಮತ್ತು ಕರಿಕೆಯಲ್ಲಿ ಮಧುವನಗಳಿವೆ. ಇಲ್ಲಿ ಜೇನು ಕೃಷಿ ಪ್ರಾತ್ಯಕ್ಷಿಕೆ, ತರಬೇತಿ ಸೇರಿದಂತೆ ಜೇನು ಉತ್ಪಾದನೆಗೆ ಪೂರಕವಾದ ಪ್ರಕ್ರಿಯೆಗಳು ನಡೆಯುತ್ತವೆ. ಬೆರಳೆಣಿಕೆಯಷ್ಟು ಸಿಬ್ಬಂದಿಗಳನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆಯಾದರೂ ಇದರಿಂದ ಜೇನು ಕೃಷಿ ಉತ್ತೇಜನದ ಗುರಿ ಸಾಕಾರಗೊಳ್ಳುತ್ತಿಲ್ಲ. ಆದರೆ ಅತ್ಯಂತ ನಿರೀಕ್ಷೆಯಿಂದ ಬಂದ ರಾಜ್ಯ ಮತ್ತು ಹೊರ ರಾಜ್ಯದ ಕೆಲವು ವಿದ್ಯಾರ್ಥಿಗಳು ಭಾಗಮಂಡಲದ ತರಬೇತಿ ಕೇಂದ್ರದಲ್ಲಿ ಸ್ವಯಂ ಆಸಕ್ತಿಯಿಂದ ತೊಡಗಿಸಿಕೊಂಡು ಜೇನು ನೊಣ ಮತ್ತು ಜೇನು ಉತ್ಪಾದನೆಯ ಬಗ್ಗೆ ಅಧ್ಯಯನ ನಡೆಸಿ ಪಿಹೆಚ್ಡಿ ಪಡೆದ ಉದಾಹರಣೆಗಳಿವೆ. ಈ ಆಸ್ತಿಯನ್ನು ಉಳಿಸಿ, ಬೆಳೆಸುವ ಅಗತ್ಯತೆ ಇದೆ ಎನ್ನುವ ಅಂಶ ಇಲ್ಲಿ ಸ್ಪಷ್ಟವಾಗುತ್ತಿದೆ.
ಮುಚ್ಚುವ ಚಿಂತನೆ
ಜೇನು ಕೃಷಿ ವಿಭಾಗದಲ್ಲಿರುವ ಸರ್ಕಾರಿ ನೌಕರರಿಗೆ ಇಲ್ಲಿಯವರೆಗೆ ಸರ್ಕಾರ ಭಡ್ತಿಯನ್ನೇ ನೀಡಿಲ್ಲ. ಇರುವ ಹುದ್ದೆಯಲ್ಲೇ ನಿವೃತ್ತಿ ಹೊಂದುತ್ತಿರುವ ಮಂದಿಗೆ ನಾವು ಮೂಲೆ ಗುಂಪಾದೆವು ಎನ್ನುವ ನೋವಿದೆ.
ರಾಜ್ಯದ ವಿವಿಧೆಡೆ ಉಳಿದಿರುವ ೭ ನೌಕರರು ನಿವೃತ್ತಿಯಾದ ನಂತರ ಜೇನು ಕೃಷಿ ವಿಭಾಗವನ್ನು ಮುಚ್ಚುವ ಚಿಂತನೆ ಸರ್ಕಾರದ ಮುಂದಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹೀಗಾದಲ್ಲಿ ಜೇನಿನ ಗೂಡಿನಂತಿರುವ ಕೊಡಗಿಗೆ ಅನ್ಯಾಯ ಮಾಡಿದಂತೆ ಎಂದು ಜೇನು ಕೃಷಿಕರು ಅಭಿಪ್ರಾಯಪಡುತ್ತಾರೆ.
ಇದು ಪಶ್ಚಿಮಘಟ್ಟ ಪ್ರದೇಶವಾಗಿರುವುದರಿಂದ ನೂರಾರು ಜಾತಿಯ ಪುಷ್ಪ ರಾಶಿಗಳಿಗೆ ಇಲ್ಲಿ ಕೊರತೆ ಇಲ್ಲ. ಜೇನು ನೊಣ ಪರಾಗವಿಲ್ಲವೆಂದು ಕೊರಗುವಂತಿಲ್ಲ. ಪ್ರಕೃತಿಯ ವರದಾನದಂತಿರುವ ಹೂಬನಗಳಿಂದ ಜೇನು ಹೀರಲು ಬರುವ ನೊಣಗಳಿಗೆ ಅದನ್ನು ಸಂಗ್ರಹಿಸಿಡಲು ಉತ್ತಮ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ. ಕೊಡಗು ಜಿಲ್ಲೆಗೆ ವಾರ್ಷಿಕ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ, ಜೇನಿನ ಸವಿಗೆ ಮಾರು ಹೋಗುತ್ತಾರೆ. ದಿನದಿಂದ ದಿನಕ್ಕೆ ಜೇನಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ, ಆದರೆ ಉತ್ಪಾದನೆ ಕುಸಿಯುತ್ತಿದೆ. ಹೊರ ರಾಜ್ಯದಿಂದ ಜೇನು ತಂದು ಕೊಡಗಿನ ಜೇನು ಎಂದು ಹಣೆಪಟ್ಟಿ ಕಟ್ಟಿ ಮಾರಾಟ ಮಾಡಬೇಕಾದ ದುರಾದೃಷ್ಟ ಈ ಜಿಲ್ಲೆಗೆ ಬಂದಿದೆ.
ಅತಿವೃಷ್ಟಿ, ವನ್ಯಜೀವಿಗಳ ದಾಳಿ ಮತ್ತಿತರ ಕಾರಣ ನೀಡಿ ನಷ್ಟದ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಬೆಳೆಗಾರರಿಗೆ ಜೇನುಕೃಷಿ ಅತ್ಯಂತ ಲಾಭದಾಯಕ ಕಸುಬಾಗಿದ್ದು, ಇದನ್ನು ಉತ್ತೇಜಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಾಗಿದೆ. ಪ್ರವಾಸೋದ್ಯಮ ಬೆಳೆಯುತ್ತಿರುವ ಬೆನ್ನಲ್ಲೇ ಔಷಧೀಯ ಗುಣ ಹೊಂದಿರುವ ಕೊಡಗಿನ ಜೇನಿನ ಉತ್ಪಾದನೆಗೂ ಪ್ರೋತ್ಸಾಹ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕು. ಜೇನು ಕ್ಷೇತ್ರಕ್ಕೆ ಒಂದೇ ಒಂದು ಕೊಂಡಿಯಾಗಿರುವ ಜೇನು ಕೃಷಿ ವಿಭಾಗವನ್ನು ಮುಚ್ಚುವುದರಿಂದ ಜಿಲ್ಲೆಗೆ ದೊಡ್ಡ ನಷ್ಟವಾಗಲಿದೆ.
ಜಿಲ್ಲೆಗೆ ವಾರ್ಷಿಕ ೫೦ ಲಕ್ಷದಿಂದ ೭೫ ಲಕ್ಷ ರೂ.ಗಳ ವರೆಗೆ ಅನುದಾನ ಮೀಸಲಿಡಲಾಗುತ್ತಿದ್ದು, ಜೇನು ಪೆಟ್ಟಿಗೆ, ತರಬೇತಿ, ಸಹಾಯಧನ ವಿತರಣೆ, ಮಧುವನಗಳ ನಿರ್ವಹಣೆ ಮತ್ತಿತರ ಕಾರ್ಯಗಳಿಗೆ ಖರ್ಚು ಮಾಡಲಾಗುತ್ತಿದೆ. ಕೊಡಗಿನ ಜೇನಿಗೆ ದೇಶ, ವಿದೇಶಗಳಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಈ ದಿನಗಳಲ್ಲಿ ಸರ್ಕಾರ ಅಲ್ಪಪ್ರಮಾಣದ ಅನುದಾನ ನೀಡಿ ಕೈತೊಳೆದುಕೊಂಡರೆ ಸಂಸ್ಕೃತಿಯ ಒಂದು ಭಾಗವಾಗಿರುವ ಜೇನು ಕೃಷಿಯಿಂದ ಗ್ರಾಮೀಣರು ದೂರ ಸರಿಯುವ ದಿನಗಳು ದೂರವಿಲ್ಲ.
ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು ೧೨ ಸಾವಿರ ಮಂದಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ೬೫ ಸಾವಿರ ಜೇನು ಪೆಟ್ಟಿಗೆಗಳಲ್ಲಿ ಜೇನು ಸಾಕಣೆ ಮಾಡಲಾಗುತ್ತಿದೆ. ಈ ಸಂಖ್ಯೆಯನ್ನು ನಾಲ್ಕು ಪಟ್ಟು ಹೆಚ್ಚು ಮಾಡುವ ಶಕ್ತಿ ಜೇನು ಕೃಷಿಗೆ ಇದೆ. ಕಾಫಿ, ಏಲಕ್ಕಿ, ಕಾಳುಮೆಣಸು, ಕಿತ್ತಳೆಯೊಂದಿಗೆ ಜೇನು ಕೃಷಿಗೆ ಕೂಡ ಮತ್ತಷ್ಟು ಪ್ರೋತ್ಸಾಹವನ್ನು ನೀಡಲು ವಿನೂತನ ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಕೊಡಗಿನಲ್ಲಿ ಲಾಭದಾಯಕ ಕೃಷಿಯಾಗಿ ಜೇನು ಸಾಕಾಣಿಕೆ ಯಶಸ್ಸು ಕಂಡರೆ ಯುವ ಸಮೂಹ ತಮ್ಮ ತಾಯ್ನಾಡಿನಲ್ಲೇ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದಾಗಿದೆ.
-ಬೊಳ್ಳಜಿರ ಬಿ. ಅಯ್ಯಪ್ಪ