ಸೋಮವಾರಪೇಟೆ, ಆ. ೧: ಜಿಲ್ಲೆಯ ಸಣ್ಣ ಕಾಫಿ ಬೆಳೆಗಾರರು ಬಳಸುತ್ತಿರುವ ೧೦ ಹೆಚ್.ಪಿ. ಬೋರ್‌ವೆಲ್‌ಗೆ ಕಲ್ಪಿಸಿರುವ ವಿದ್ಯುತ್ ಅನ್ನು ಸ್ಥಗಿತಗೊಳಿಸಲು ಇಲಾಖೆ ಮುಂದಾದರೆ ಹೋರಾಟ ಸಂಘಟಿಸಲಾಗುವುದು ಎಂದು ಗೋಣಿಮರೂರು ರೈತರ ಬೋರ್‌ವೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ನಿರ್ದೇಶಕ ನಾಪಂಡ ಮುತ್ತಪ್ಪ ಅವರು, ರಾಜ್ಯ ಸರಕಾರವು ಕೊಡಗು ಮತ್ತು ಮಲೆನಾಡು ಭಾಗದ ರೈತರು ಹಾಗೂ ಕಾಫಿ ಬೆಳೆಗಾರರನ್ನು ನಿರಂತರ ಶೋಷಣೆ ಮಾಡುತ್ತಿದೆ. ಸಣ್ಣ ಬೆಳೆಗಾರರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿದರು.

ಕೊಡಗು ಜಿಲ್ಲೆಯಲ್ಲಿ ರೈತರೇ ಕಾಫಿಯನ್ನು ಬೆಳೆಯುತ್ತಿದ್ದಾರೆ. ಕಾಫಿ ಬೆಳೆಗಾರರಿಗೆ ೧೦ಎಚ್.ಪಿ. ವಿದ್ಯುತ್‌ಚಾಲಿತ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಇಡಲಾಗಿದೆ. ಸರ್ಕಾರ ಸೌಲಭ್ಯ ನೀಡದೆ ಸತಾಯಿಸುತ್ತಿದೆ. ಈ ಕಾರಣದಿಂದ ಎಲ್ಲಾ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಈಗ ಸೆಸ್ಕ್ನವರು ಬಿಲ್ ಕಟ್ಟದ ಬೆಳೆಗಾರಿಗೆ ನೋಟೀಸ್ ನೀಡಿ, ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿ ದ್ದಾರೆ. ಉಚಿತ ವಿದ್ಯುತ್ ಕಲ್ಪಿಸದಿದ್ದರೆ ರೈತ ವಿರೋಧಿ ಸರ್ಕಾರದ ವಿರುದ್ಧ ರೈತ ಹೋರಾಟವನ್ನು ಸಂಘಟಿಸ ಲಾಗುವುದು ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಜಿ.ಎಸ್. ಚಂದ್ರಶೇಖರ್ ಮಾತನಾಡಿ, ಕಾಫಿ, ಕಾಳುಮೆಣಸನ್ನು ಕೃಷಿ ಬೆಳೆ ಎಂದು ಘೋಷಿಸಿ, ಸರ್ಕಾರ ಉಚಿತ ವಿದ್ಯುತ್ ನೀಡಬೇಕು. ಕಾಫಿ ಬೆಳೆಗಾರರು ವಾರ್ಷಿಕವಾಗಿ ಮೂರು ತಿಂಗಳು ಮಾತ್ರ ವಿದ್ಯುತ್ ಪಂಪ್‌ಸೆಟ್‌ಗಳನ್ನು ಉಪಯೋಗಿಸುತ್ತಾರೆ. ಅಕಾಲಿಕ ಮಳೆ, ಕಾಫಿಗೆ ತಗುಲುವ ರೋಗಬಾಧೆ, ಅಧಿಕ ಕೂಲಿ, ಗಗನಕ್ಕೇರಿರುವ ರಾಸಾಯನಿಕ ಗೊಬ್ಬರ ಬೆಲೆ, ವೈಜ್ಞಾನಿಕ ಬೆಲೆ ಹಾಗು ಬೆಂಬಲಬೆಲೆ ಇಲ್ಲದಿರುವುದರಿಂದ ಬೆಳೆಗಾರರು ಸಾಲಗಾರರಾಗಿದ್ದಾರೆ. ಈ ನಡುವೆ ಸರ್ಕಾರದ ಮಲತಾಯಿ ಧೋರಣೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳೆಗಾರರ ಪಂಪ್‌ಸೆಟ್‌ಗಳ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಬೇಕು. ಉಚಿತ ವಿದ್ಯುತ್ ನೀಡಬೇಕು. ತಪ್ಪಿದಲ್ಲಿ ಜಿಲ್ಲೆಯ ರೈತರು, ಕಾಫಿ ಬೆಳೆಗಾರರು ಟ್ರಾö್ಯಕ್ಟರ್, ಬೈಕ್‌ನೊಂದಿಗೆ ದೆಹಲಿ ಮಾದರಿಯ ರೈತ ಹೋರಾಟವನ್ನು ಸಂಘಟಿಸಿ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಜಿ.ಎಂ. ಮೋಹನ್, ಪದಾಧಿಕಾರಿಗಳಾದ ರೇವಣ್ಣ ಬಾಣಾವರ, ಜಿ.ಸಿ. ಮೋಹನ್ ಉಪಸ್ಥಿತರಿದ್ದರು.