ಸೋಮವಾರಪೇಟೆ, ಸೆ.೧: ಪುಷ್ಪಗಿರಿ ಬೆಟ್ಟಶ್ರೇಣಿಯ ಪಶ್ಚಿಮಘಟ್ಟಕ್ಕೆ ಒತ್ತಿಕೊಂಡAತಿರುವ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮಕ್ಕೆ ಈವರೆಗೆ ೧೯೯ ಇಂಚು ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ೪೩ ಇಂಚು ಅಧಿಕ ಮಳೆ ಸುರಿದಿದೆ.

ಕಳೆದ ವರ್ಷ ಆಗಸ್ಟ್ ಅಂತ್ಯಕ್ಕೆ ೧೫೬ ಇಂಚು ಮಳೆಯಾಗಿತ್ತು. ಈ ವರ್ಷ ಆಗಸ್ಟ್ ೩೧ಕ್ಕೆ ೧೯೯ ಇಂಚು ಮಳೆಯಾಗಿದೆ ಎಂದು ಸೂರ್ಲಬ್ಬಿಯ ನಾಣಿಯಪ್ಪ ಅವರು ತಿಳಿಸಿದ್ದಾರೆ. ವಾರ್ಷಿಕ ಹೆಚ್ಚು ಮಳೆಯಾಗುವ ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಈಗಲೂ ವಾತಾವರಣ ಶೀತದಿಂದ ಕೂಡಿದ್ದು, ಸಾಧಾರಣ ಮಳೆಯಾಗುತ್ತಲೇ ಇದೆ.

ಕಳೆದ ವಾರ ಸುರಿದ ಭಾರೀ ಮಳೆ-ಗಾಳಿಗೆ ಗ್ರಾಮದ ಎಂ.ಬಿ. ಸುಬ್ಬಯ್ಯ ಅವರಿಗೆ ಸೇರಿದ ವಾಸದ ಮನೆಯ ಹೆಂಚು, ಸಿಮೆಂಟ್ ಶೀಟ್, ಛಾವಣಿ ಹಾರಿಹೋಗಿದ್ದು, ನಷ್ಟ ಸಂಭವಿಸಿದೆ. ಇದೀಗ ಮನೆಗೆ ಟಾರ್ಪಲ್ ಹಾಕಲಾಗಿದೆ. ಕಂದಾಯ ಇಲಾಖೆಯ ಮೂಲಕ ಮನೆಗೆ ಪರಿಹಾರ ಕಲ್ಪಿಸಬೇಕೆಂದು ಸುಬ್ಬಯ್ಯ ಮನವಿ ಮಾಡಿದ್ದಾರೆ.

(ಮೊದಲ ಪುಟದಿಂದ) ಈ ವರ್ಷವೂ ಭಾರೀ ಮಳೆಯಾಗಿರುವುದರಿಂದ ಕೃಷಿ ಫಸಲು ನಷ್ಟಗೊಂಡಿದೆ. ಕಾಫಿ, ಕರಿಮೆಣಸು ಹಾಗೂ ಏಲಕ್ಕಿ ಗಿಡಗಳಿಗೆ ಕೊಳೆರೋಗ ತಲುಗಿದ್ದು, ಎಲೆಗಳು ಕೊಳೆಯಲಾರಂಭಿಸಿವೆ. ಗಿಡಗಳಲ್ಲಿ ಕಾಯಿಕಟ್ಟಿದ್ದ ಕಾಫಿ ಅತೀ ಶೀತ-ಕೊಳೆ ರೋಗಕ್ಕೆ ತುತ್ತಾಗಿ ನೆಲಕ್ಕಚ್ಚುತ್ತಿವೆ. ಕರಿಮೆಣಸು ಬಳ್ಳಿಗಳೂ ಕೊಳೆಯುತ್ತಿದ್ದು, ಫಸಲು ಈಗಾಗಲೇ ಮಣ್ಣುಪಾಲಾಗಿವೆ. ಏಲಕ್ಕಿ ಬೆಳೆಯ ಪಾಡು ಹೇಳತೀರದ್ದಾಗಿದೆ ಎಂದು ಸೂರ್ಲಬ್ಬಿಯ ಕೃಷಿಕ ನಾಣಿಯಪ್ಪ ತಿಳಿಸಿದ್ದಾರೆ.

ಕೃಷಿ, ತೋಟಗಾರಿಕೆ, ಕಂದಾಯ ಇಲಾಖಾಧಿಕಾರಿಗಳು ಖುದ್ದು ಭೇಟಿ ನೀಡಿ ಗ್ರಾಮ ವ್ಯಾಪ್ತಿಯಲ್ಲಿ ಆಗಿರುವ ಕೃಷಿ ನಷ್ಟದ ಬಗ್ಗೆ ಸಮೀಕ್ಷೆ ನಡೆಸಬೇಕು. ಆ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಈ ಭಾಗದ ಕೃಷಿಕರು ಒತ್ತಾಯಿಸಿದ್ದಾರೆ.