ಗೋಣಿಕೊಪ್ಪಲು, ಸೆ.೧: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಬೈಪಾಸ್ ರಸ್ತೆಯಲ್ಲಿರುವ ತರಕಾರಿ ಮಳಿಗೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು ಅಂಗಡಿ ಮಳಿಗೆಯಲ್ಲಿದ್ದ ತರಕಾರಿ ಹಾಗೂ ಪೀಠೋಪಕರಣಗಳು ಅಗ್ನಿಗೆ ಅಹುತಿಯಾಗಿವೆ. ಗೋಣಿಕೊಪ್ಪ ಬಸ್ ನಿಲ್ದಾಣದ ಕೂಗಳತೆಯ ದೂರದಲ್ಲಿರುವ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಕಿಡಿಗೇಡಿಗಳು ಮುಂಜಾನೆ ೩.೩೦ರ ಸುಮಾರಿಗೆ ಬೆಂಕಿ ಇಟ್ಟಿರಬಹುದೆಂದು ಅಂದಾಜಿಸಲಾಗಿದೆ. ಮಳಿಗೆಯ ಮುಂಭಾಗದ ಬಾಗಿಲಿನ ಅಡಿ ಭಾಗದಿಂದ ಪೆಟ್ರೋಲ್ ಸುರಿದ ಕಿಡಿಗೇಡಿಗಳು ನಂತರ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ.
ಗೋಣಿಕೊಪ್ಪ ನಿವಾಸಿ ತರಕಾರಿ ಮಾರುಕಟ್ಟೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ತರಕಾರಿ ವ್ಯಾಪಾರ ನಡೆಸುತ್ತಿದ್ದ ಮುನಾಫ್ ಎಂಬವರಿಗೆ ಸೇರಿದ ಅಂಗಡಿ ಮಳಿಗೆಯಲ್ಲಿ ಘಟನೆ ನಡೆದಿದೆ. ಸುದ್ದಿ ತಿಳಿದ ಗೋಣಿಕೊಪ್ಪ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ಕಾರ್ಯ ನಡೆಸಿದ್ದಾರೆ. ಅಂಗಡಿ ಮಾಲೀಕ ಮುನಾಫ್ ರಾತ್ರಿ ೧೨.೩೦ರವರೆಗೂ ಅಂಗಡಿಯಲ್ಲಿ ತರಕಾರಿಗಳನ್ನು ಜೋಡಿಸಿಟ್ಟು ನಂತರ ಮನೆಗೆ ತೆರಳಿದ್ದರು. ಮುಂಜಾನೆ ವೇಳೆ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ.
ಗೋಣಿಕೊಪ್ಪ ಪೊಲೀಸರು ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ತಂಡ ರಚಿಸಿದ್ದು ಸುತ್ತ ಮುತ್ತಲಿನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ. ಶಾಂತಿಯುತ ನಗರದಲ್ಲಿ ಕಿಡಿಗೇಡಿಗಳು ಸಾರ್ವಜನಿಕರ ನೆಮ್ಮದಿಗೆ ಭಂಗತರುವ ನಿಟ್ಟಿನಲ್ಲಿ ಇಂತಹ ಕೃತ್ಯಗಳನ್ನು ಮಾಡಿರಬಹುದೆಂದು ನಾಗರಿಕ ವಲಯದಲ್ಲಿ ಆರೋಪ ಕೇಳಿ ಬಂದಿದೆ.
ಕಳೆದ ಮೂರು ದಿನಗಳ ಹಿಂದೆ ಬೆಂಕಿ ಕಾಣಿಸಿಕೊಂಡ ಮಳಿಗೆಯ ಯುವಕರಿಗೂ ಹಾಗೂ ಇತ್ತೀಚೆಗೆ ವೀರಾಜಪೇಟೆ, ಬಿಟ್ಟಂಗಾಲದಿAದ ಆಗಮಿಸಿ ತರಕಾರಿ ಮಳಿಗೆ ತೆರೆದಿರುವ ಯುವಕರ ನಡುವೆ ವ್ಯಾಪಾರದ ವಿಚಾರದಲ್ಲಿ ಮಾತಿಗೆ ಮಾತು ಬೆಳದು ಜಗಳವೇರ್ಪಟ್ಟಿತ್ತು. ನಂತರ ಈ ಪ್ರಕರಣವು ಠಾಣೆಯ ಮೆಟ್ಟಿಲೇರಿದ್ದು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆ ಕೈಗೊಂಡಿದ್ದು ಕಿಡಿಗೇಡಿಗಳನ್ನು ಸಧ್ಯದಲ್ಲಿಯೇ ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಂಚಾಯಿತಿಯ ಅನುಮತಿಯಿಲ್ಲದೆ ಅಂಗಡಿ ಮಳಿಗೆ ತೆರೆಯಲು ಸ್ಥಳಾವಕಾಶ ನೀಡುತ್ತಿರುವ ಜಾಗದ ಮಾಲೀಕರ ಮೇಲೆ ಪಂಚಾಯಿತಿ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ಈ ಬಗ್ಗೆ ಗೋಣಿಕೊಪ್ಪ ಪಂಚಾಯಿತಿಯ ನೂತನ ಆಡಳಿತ ಮಂಡಳಿ ಯಾವ ನಿರ್ಧಾರ ಕೈಗೊಳ್ಳಲಿದೆಯೋ ಕಾದು ನೋಡಬೇಕು.
-ಹೆಚ್.ಕೆ. ಜಗದೀಶ್