ಮಡಿಕೇರಿ, ಸೆ.೨ : ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ನಗರದ ಕುರಿ, ಕೋಳಿ ಮತ್ತು ಮೀನು ಮಾರಾಟಗಾರರ ಜೊತೆ ಪೌರಾಯುಕ್ತÀ ಎಸ್.ವಿ.ರಾಮದಾಸ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ನಗರಸಭೆಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಹೆಚ್ಚು ತ್ಯಾಜ್ಯ ಮಾಂಸದ ಅಂಗಡಿಗಳಲ್ಲಿ ಉತ್ಪಾದನೆಯಾಗುತ್ತದೆ. ಆ ನಿಟ್ಟಿನಲ್ಲಿ ನಗರಸಭೆ ಕಸದ ವಾಹನಕ್ಕೆ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡಬೇಕಿದೆ ಎಂದು ಪೌರಾಯುಕ್ತರು ತಿಳಿಸಿದರು.

ಎಲ್ಲೆಂದರಲ್ಲಿ ಕಸವನ್ನು ಸುರಿಯಬಾರದು. ಈಗಾಗಲೇ ತಿಳಿಸಲಾಗಿರುವಂತೆ ಭಾನುವಾರ, ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರಗಳಂದು ಹಸಿ ಕಸ ಮತ್ತು ಬುಧವಾರ ಮತ್ತು ಶನಿವಾರದಂದು ಒಣಕಸವನ್ನು ನಗರಸಭೆಯ ಕಸದ ವಾಹನಕ್ಕೆ ಒದಗಿಸುವಂತೆ ಪೌರಾಯುಕ್ತರು ಮನವಿ ಮಾಡಿದರು.

ಪ್ರತೀ ನಿತ್ಯ ನಗರಸಭೆಯ ಪೌರ ಕಾರ್ಮಿಕರು ಕಸ ಸಂಗ್ರಹಿಸುವ ಸಂದರ್ಭದಲ್ಲಿ ಕಸವನ್ನು ಬೇರ್ಪಡಿಸಿ ನೀಡಬೇಕು. ನಿಯಮ ಉಲ್ಲಂಘಿಸಿದರೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಸ್.ವಿ.ರಾಮದಾಸ್ ಅವರು ಎಚ್ಚರಿಸಿದರು. ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುತ್ತಿರುವ ಅಂಗಡಿ ಮಾಲಿಕರೊಬ್ಬರಾದ ಬಸೀರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಗರಸಭೆಯ ಆರೋಗ್ಯ ವಿಭಾಗದ ಎಇಇ ಸೌಮ್ಯ, ಆರೋಗ್ಯ ನಿರೀಕ್ಷಕರಾದ ಹರಿಣಿ, ಮಂಜುನಾಥ್ ಇತರರು ಇದ್ದರು.