ಮಡಿಕೇರಿ, ಸೆ. ೨: ಹಲವಷ್ಟು ಹೊಸ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಕುರಿತ ಸರಣಿ ಉಪನ್ಯಾಸ ಕಾರ್ಯಕ್ರಮ ಸಾಹಿತ್ಯ ಲೋಕದ ದಿಗ್ಗಜರ ನೆನಪು ಮಾಡಿಕೊಳ್ಳುವ ಕಾರ್ಯಕ್ರಮವಾಗಿದೆ ಎಂದು ಅರಮೇರಿ - ಕಳಂಚೇರಿ ಮಠದ ಅಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.

ಕಸಾಪ ಕೊಡಗು ಘಟಕದ ವತಿಯಿಂದ ಕಳೆದ ಹತ್ತು ದಿನಗಳಿಂದ ಅಂತರ್ಜಾಲ ಮೂಲಕ ಆಯೋಜಿಸಿದ್ದ ಸಮ್ಮೇಳನಾಧ್ಯಕ್ಷರ ಕುರಿತ ಸರಣಿ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಲ್ಲಿನ ಬಾಲಭವನದಲ್ಲಿ ನಡೆಯಿತು.

ಅಂತರ್ಜಾಲದ ಮೂಲಕ ಮಾತನಾಡಿದ ಸ್ವಾಮೀಜಿಗಳು, ಪರಿಷತ್ತಿನ ಅಧ್ಯಕ್ಷರಾಗಿ ಅತ್ಯಂತ ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಹೆಗ್ಗಳಿಕೆ ಲೋಕೇಶ್ ಸಾಗರ್ ಅವರಿಗೆ ಸಲ್ಲುತ್ತದೆ. ಇದೀಗ ನಡೆದ ಉಪನ್ಯಾಸ ಕಾರ್ಯಕ್ರಮ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡಿದವರಿಂದ ಪ್ರೇರಣಾ ಶಕ್ತಿಯನ್ನು ಒದಗಿಸಿಕೊಡುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಕೃಷಿ ಮಕ್ಕಳು, ಮಹಿಳೆ ಸೇರಿದಂತೆ ಶರಣರು, ದಾಸ ಸಾಹಿತ್ಯ ಸಮ್ಮೇಳನವನ್ನು ಆಯೋಜನೆ ಮಾಡಿ ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬAತೆ ಅಧ್ಯಕ್ಷರು ತಮ್ಮ ದೂರದೃಷ್ಟಿತ್ವದಿಂದ ಚೇತೋಹಾರಿಯಾಗಿರುವ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸಭಾಪತಿ ಬಿ.ಕೆ. ರವೀಂದ್ರ ರೈ ಮಾತನಾಡಿ; ಲೋಕೇಶ್ ಸಾಗರ್ ಅವರು ಕಳೆದ ಐದೂವರೆ ವರ್ಷದ ಅವಧಿಯಲ್ಲಿ ಆಳವಾಗಿ ತಿಳಿದು, ಜನರೊಂದಿಗೆ ಬೆರೆತು ಹಲವಾರು ಯಶಸ್ವೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರೊಂದಿಗೆ ನಾಡಿನ ಮೂಲೆ - ಮೂಲೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಉಳಿಯಬೇಕಾದರೆ ಸಾಹಿತ್ಯ ಪರಿಷತ್ತು ಅತ್ಯವಶ್ಯಕ ಎಂದು ಪ್ರತಿಪಾದಿಸಿದ ಅವರು, ಕೋವಿಡ್ ಸಂದರ್ಭದಲ್ಲೂ ಗ್ರಾಮೀಣ ಮಟ್ಟದಲ್ಲಿಯೂ ಕಾರ್ಯಕ್ರಮ ಆಯೋಜನೆ ಮಾಡಿರುವದನ್ನು ಶ್ಲಾಘಿಸಿದರು.

ವಿಶೇಷ ಆಹ್ವಾನಿತರಾಗಿದ್ದ ಜಿಲ್ಲಾ ೧೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಭಾರಧ್ವಾಜ್ ಕೆ. ಆನಂದತೀರ್ಥ ಮಾತನಾಡಿ, ಸಾಹಿತ್ಯ ಓದುವ ಜನರು ಒಂದೆಡೆಯಾದರೆ, ಸಂಘಟನಾತ್ಮಕವಾಗಿ ಕೆಲಸ ಮಾಡುವವರೇ ಬೇರೆ ಆಗಿರುತ್ತಾರೆ. ಅಂತಹವರ ಪೈಕಿ ಇರುವ ಲೋಕೇಶ್ ಸಲಹೆಗಳನ್ನು ನೀಡಿದರೆ ಅನುಷ್ಠಾನಗೊಳಿಸುತ್ತಾರೆ. ಅವರ ಎರಡನೇ ಗೆಲುವಿನ ಸಾಧ್ಯತೆ ಈಗಲೇ ಕಂಡು ಬರುತ್ತಿದೆ ಎಂದು ಹೇಳಿದರು.

೧೫ನೇ ಸಮ್ಮೇಳನಾಧ್ಯಕ್ಷರಾಗಿದ್ದ ನಾಗೇಶ್ ಕಾಲೂರ್ ಮಾತನಾಡಿ, ಕಳೆದ ಐದೂವರೆ ವರ್ಷದಲ್ಲಿ ಲೋಕೇಶ್ ಅವರ ತಂಡ ದೊಡ್ಡ ಸಾಹಸ ಮಾಡಿದೆ. ಸಾಮಾನ್ಯರಲ್ಲಿ ಸಾಮಾನ್ಯರನ್ನು ಕೂಡ ಗುರುತಿಸುವ ಕೆಲಸ ಆಗಿದೆ ಎಂದು ಹೇಳಿದರು.

೧೬ನೇ ಸಮ್ಮೇಳನದ ಅಧ್ಯಕ್ಷರಾಗಿದ್ದ ಮಂಡೇಪAಡ ಗೀತಾ ಮಂದಣ್ಣ ಮಾತನಾಡಿ; ಕೊಡಗಿನ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕಷ್ಟಪಟ್ಟು ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಧೈರ್ಯದಿಂದ ಎದುರಿಸಿದರೆ ಎಲ್ಲವನ್ನು ಸಾಧಿಸಬಹು ದೆಂಬದನ್ನು ತೋರಿಸಿಕೊಟ್ಟಿದ್ದಾರೆ ಎಂದು ಶುಭ ಹಾರೈಸಿದರು.

ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ಮಾತನಾಡಿ, ಸಂಸ್ಥೆಯ ಎಲ್ಲರನ್ನೂ ಹೊಂದಾಣಿಕೆಯಿAದ ಕರೆದೊಯ್ಯಲು ಕ್ರಿಯಾತ್ಮಕ ನಾಯಕನ ಅವಶ್ಯಕತೆ ಇರುತ್ತದೆ. ಐದು ವರ್ಷಗಳ ಕಾಲ ಎಲ್ಲರನ್ನು ಜೊತೆಯಲ್ಲಿಯೇ ಇರಿಸಿಕೊಂಡು ಮುಂದೆ ಸಾಗಲು ಸಾಮರ್ಥ್ಯ ಕೂಡ ಬೇಕಿದೆ. ಅದು ನಾಯಕನ ಲಕ್ಷಣ ಎಂದರೆ; ನಾಯಕನಲ್ಲಿ ನಮೃತೆಯಿದ್ದರೆ ಯಶಸ್ಸು ಸಾಧ್ಯವೆಂದು ಹೇಳಿದರು.

ಅಂತರ್ಜಾಲ ಸರಣಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಪನ್ಮೂಲ ವ್ಯಕ್ತಿಗಳ ಪೈಕಿ ಮಾತನಾಡಿದ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಉ.ರಾ. ನಾಗೇಶ್ ಅವರು, ೬೪ ಮಂದಿಯನ್ನು ಒಟ್ಟುಗೂಡಿಸಿ ಮಾಡಿದ ಕಾರ್ಯಕ್ರಮ ಅರ್ಥಪೂರ್ಣವಾದದು. ಇದೊಂದು ಹೊಸ ಯೋಜನೆಯಾಗಿದೆ. ಸಾಹಿತ್ಯವನ್ನು ಮತ್ತೆ ಮತ್ತೆ ಮೆಲುಕು ಹಾಕಿದಾಗ ಕೃತಿಯಾಗುತ್ತದೆ. ಇಂತಹ ಕಾರ್ಯಕ್ರಮ ತಿಂಗಳಿಗೊಮ್ಮೆ ಅರ್ಧ ಗಂಟೆ ನಡೆಯುವಂತಾಗಬೇಕೆAದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ನಮ್ಮ ಅವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ ಹಲವಷ್ಟು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಪ್ರಮುಖವಾಗಿ ರಾಜ್ಯದ ವಿವಿಧೆಡೆಗಳಿಂದ ಕನ್ನಡ ಸಾಹಿತ್ಯ ಪುಸ್ತಕಗಳನ್ನು ತಂದು ವಿವಿಧ ಶಾಲೆಗಳಿಗೆ ಕೊಡುಗೆಯಾಗಿ ನೀಡಲಾಗಿದೆ. ಜಿಲ್ಲೆಯಲ್ಲಿ ಸಾಹಿತಿಗಳ, ಕವಿಗಳ ಸಂಖ್ಯೆ ಹೆಚ್ಚಾಗುತ್ತಿರುವದು ಸಂತಸದ ವಿಚಾರವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸದರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಮಡಿಕೇರಿ ತಾಲೂಕು ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಡಾ. ಕೂಡಕಂಡಿ ದಯಾನಂದ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್.ಜೆ. ಜವರಪ್ಪ ಇದ್ದರು. ಕಡ್ಲೇರ ತುಳಸಿ ಮೋಹನ್, ಪರ್ಲಕೋಟಿ ಸುನಿತಾ ಪ್ರೀತು, ಕೇಕಡ ಇಂದುಮತಿ ರವೀಂದ್ರ, ಚೊಕ್ಕಾಡಿ ಪ್ರೇಮಾ ರಾಘವಯ್ಯ ನಾಡಗೀತೆ ಹಾಡಿದರು. ಕಸಾಪ ಜಿಲ್ಲಾ ನಿರ್ದೇಶಕಿ ತಳೂರು ಉಷಾರಾಣಿ ನಿರೂಪಿಸಿದರೆ, ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್ ಸ್ವಾಗತಿಸಿದರು. ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಅಶ್ವತ್ಥ್, ಧನಂಜಯ, ಕಚೇರಿ ಸಿಬ್ಬಂದಿ ಶ್ವೇತಾ ನಿರ್ವಹಿಸಿದರು.