ಮಡಿಕೇರಿ, ಸೆ. ೨: ಕೊಡಗು ಪ್ರೆಸ್ ಕ್ಲಬ್ ಮಹಾಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ರಮೇಶ್ ಕುಟ್ಟಪ್ಪ ಪತ್ರಕರ್ತರು ಸಂಕಷ್ಟಕ್ಕೊಳಗಾದಾಗ ಒಬ್ಬರಿಗೊಬ್ಬರು ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಕಳೆದ ೪ ವರ್ಷಗಳ ಕ್ಲಬ್ ಅವಧಿಯಲ್ಲಿ ಸದಸ್ಯರು ಪುಸ್ತಕ ಬರೆದಾಗ ಅಗತ್ಯ ಸಹಕಾರ ನೀಡಲಾಗಿದೆ. ಆರೋಗ್ಯ ಸಮಸ್ಯೆಗೊಳಗಾದಾಗ ನೆರವು ನೀಡಲಾಗಿದೆ ಎಂದರು.

ಸಭೆಯಲ್ಲಿ ಕ್ಲಬ್‌ನ ಸದಸ್ಯರುಗಳು ಹಲವು ಸಲಹೆಗಳನ್ನು ನೀಡಿದರು. ದಿ. ಮಹಾಂತೇಶ್ ಸ್ಮರಣಾರ್ಥ ನೀಡುವ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಭಾಜನರಾದ ಅನಿಲ್ ಎಚ್.ಟಿ. ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಕಿಶೋರ್ ನಾಚಪ್ಪ, ರೆಜಿತ್‌ಕುಮಾರ್, ಅನುಕಾರ್ಯಪ್ಪ, ವಿಶ್ವ ಕುಂಬೂರು, ಹೆಚ್.ಜೆ. ರಾಕೇಶ್, ಹೆಚ್.ಕೆ. ಜಗದೀಶ್, ಆರ್ ಸುಬ್ರಮಣಿ, ಪಾರ್ಥ ಚಿಣ್ಣಪ್ಪ, ಹಿರಿಕರ ರವಿ, ಕಾಯಪಂಡ ಶಶಿ ಸೋಮಯ್ಯ, ವಿಘ್ನೇಶ್ ಭೂತನಕಾಡು, ಎ.ಎಸ್. ಮುಸ್ತಫಾ ಬೊಳ್ಳಜೀರ ಅಯ್ಯಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಯುಗ ದೇವಯ್ಯ, ಗೋಪಾಲ್ ಸೋಮಯ್ಯ, ಸಾಮಾಜಿಕ ಸಾಧನೆ ಗುರುತಿಸಿ ರೆಜಿತಾ ಕಾರ್ಯಪ್ಪ, ಎಸ್.ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ಪ್ರೆಸ್‌ಕ್ಲಬ್ ವಕೀಲ ಜೀತೆಂದ್ರ ಮತ್ತು ಚುನಾವಣಾಧಿಕಾರಿ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ಉಪನಿರ್ದೇಶಕ ಪ್ರಮೋದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೋವಿಡ್‌ನಿಂದ ಮೃತಪಟ್ಟ ಪತ್ರಕರ್ತ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ನಿಧನಕ್ಕೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ರೆಜಿತ್ ಕುಮಾರ್ ಲೆಕ್ಕಪತ್ರ ಮಂಡಿಸಿದರು.

ಹಿರಿಯ ಉಪಾಧ್ಯಕ್ಷ ಲೋಕೇಶ್ ಸಾಗರ್ ಪ್ರಾರ್ಥಿಸಿ, ಆರ್. ಸುಬ್ರಮಣಿ ಸ್ವಾಗತಿಸಿ, ಮುಬಾರಕ್ ವಂದಿಸಿದರು.