ನಾಪೋಕ್ಲು, ಸೆ. ೧: ನಾಪೋಕ್ಲು ಪಟ್ಟಣದಲ್ಲಿ ದಿನಪತ್ರಿಕೆ ವಿತರಕರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ತನ್ನ ಅಂಗಡಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರುಳಿ ನಿವಾಸಿ ಹರೀಶ್ (೩೬) ಮೃತ ವ್ಯಕ್ತಿ. ಇವರು ‘ಶಕ್ತಿ’ ದಿನಪತ್ರಿಕೆ ಸೇರಿದಂತೆ ಇತರ ಪತ್ರಿಕೆಗಳನ್ನು ಪಟ್ಟಣದಲ್ಲಿ ವಿತರಣೆ ಮಾಡುತ್ತಿದ್ದರು. ಬುಧವಾರ ಎಂದಿನAತೆ ಪತ್ರಿಕೆ ವಿತರಿಸಲು ಪಟ್ಟಣಕ್ಕೆ ಆಗಮಿಸಿದ ಹರೀಶ್ ತನ್ನ ಅಂಗಡಿ ಬಾಗಿಲು ತೆರೆದು ಕೆಲವು ಅಂಗಡಿಗಳಿಗೆ ಪತ್ರಿಕೆ ಹಾಕಿರುವದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಂತರ ಅಂಗಡಿಗೆ ಮರಳಿದ ಅವರು ಅಂಗಡಿಯ ಶೆಟರ್ಸ್ ಅರ್ಧಕ್ಕೆ ಇಳಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಆರ್.ಕಿರಣ್ ಮತ್ತು ಸಿಬ್ಬಂದಿ ಭೇಟಿ ನೀಡಿ ಕಾನೂನು ಕ್ರಮಕೈಗೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ. ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ವರ್ಗಾಯಿಸಲಾಯಿತು. ಅಂತ್ಯಕ್ರಿಯೆ ನಾಪೋಕ್ಲು ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರು ತಾಯಿ, ಪತ್ನಿ, ಓರ್ವ ಪುತ್ರ ಹಾಗೂ ಒಂದು ವರ್ಷದ ಪುತ್ರಿಯನ್ನು ಅಗಲಿದ್ದಾರೆ.
ಸಂತಾಪ: ಮೃತರ ಗೌರವಾರ್ಥ ನಾಪೋಕ್ಲು ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಅಪರಾಹ್ನ ೨ ಗಂಟೆಯಿAದ ೨.೩೦ ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸೂಚಿಸಲಾಯಿತು.