ಮಡಿಕೇರಿ, ಆ. ೩೦: ಈಶಾ ಫೌಂಡೇಶನ್‌ನ ಕಾವೇರಿ ಕೂಗು ಅಭಿಯಾನದ ಅಂಗವಾಗಿ ನಡೆಯುತ್ತಿರುವ ಮರ ಆಧಾರಿತ ಕೃಷಿ ಉತ್ತೇಜನ ಜಾಗೃತಿ ಕಾರ್ಯಕ್ರಮ ಜಿಲ್ಲೆಯ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸ್ವಯಂ ಸೇವಕ ನಕುಲ್ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ಮರ ಬೆಳೆಸುವ ಉದ್ದೇಶದಿಂದ ಹಾಗೂ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೊಳಿಸುವ ನಿಟ್ಟಿನಲ್ಲಿ ರೂಪುಗೊಂಡಿರುವ ಅಭಿಯಾನ ಜಿಲ್ಲೆಯಲ್ಲಿ ಈಗಾಗಲೇ ಆರಂಭಗೊAಡಿದೆ. ಮಡಿಕೇರಿ ತಾಲೂಕಿನ ೨೪, ಸೋಮವಾರಪೇಟೆ ತಾಲೂಕಿನ ೩೫, ವೀರಾಜಪೇಟೆ ತಾಲೂಕಿನ ೨೦ ಗ್ರಾ.ಪಂ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು, ಮರಮಿತ್ರರು ಕಾರ್ಯಕ್ರಮದ ಉದ್ದೇಶವನ್ನು ಅಲ್ಲಿನ ರೈತರಿಗೆ ವಿವರಿಸಿದ್ದಾರೆ. ರೈತರು ಸಲ್ಲಿಸುವ ಗಿಡಗಳ ಬೇಡಿಕೆಯನ್ನು ಫೌಂಡೇಶನ್ ಸರಕಾರಕ್ಕೆ ಮುಟ್ಟಿಸಿ ಉಚಿತವಾಗಿ ಸಸಿಗಳನ್ನು ವಿತರಿಸುವ ಕೆಲಸ ಮಾಡಲಿದೆ ಎಂದರು.

ಮಡಿಕೇರಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಶೇಖರ್ ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಮರ ಬೇಸಾಯ ಸಹಕಾರಿಯಾಗಿದೆ. ಸುಮಾರು ೫೦೦ಕ್ಕೂ ಹೆಚ್ಚು ರೈತರು ಮರ ಬೇಸಾಯಕ್ಕೆ ಆಸಕ್ತಿ ತೋರಿದ್ದು, ಅವರ ಬೇಡಿಕೆಯನ್ನು ಸರಕಾರಕ್ಕೆ ಮುಂದಿನ ಮಳೆಗಾಲದೊಳಗೆ ಸಸಿ ಪೂರೈಕೆಗೆ ಕ್ರಮವಹಿಸಲಾಗುವುದು ಎಂದರು.

ಆರ್.ಎಫ್.ಓ. ಮಯೂರ್ ಮಾತನಾಡಿ, ಅರಣ್ಯ ಇಲಾಖೆ ವ್ಯಾಪ್ತಿಯ ನರ್ಸರಿಗಳಲ್ಲಿ ಬೇಡಿಕೆ ಸಲ್ಲಿಸಿದ ಗಿಡಗಳನ್ನು ಬೆಳೆಸಲಾಗುವುದು. ಒಂದು ವರ್ಷದ ಬಳಿಕ ಅದನ್ನು ರೈತರಿಗೆ ವಿತರಿಸಲಾಗುತ್ತದೆ ಎಂದರು. ಗೋಷ್ಠಿಯಲ್ಲಿ ಫೌಂಡೇಶನ್‌ನ ಸ್ವಯಂ ಸೇವಕ ಅಭಿಲಾಷ್ ಇದ್ದರು.