ಸೋಮವಾರಪೇಟೆ, ಆ.೩೦: ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ಊರುಡುವೆ ಜಾಗದಲ್ಲಿ ಮನೆ ಕಟ್ಟಿಕೊಂಡು ಈವರೆಗೂ ಹಕ್ಕುಪತ್ರ ಪಡೆಯದ ೨೯೮ ಮಂದಿಗೆ ಶೀಘ್ರದಲ್ಲೇ ಹಕ್ಕು ಪತ್ರ ವಿತರಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.

ಕೊರೊನಾ ಸೋಂಕಿಗೆ ಒಳಗಾಗಿದ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೯೩ ಕುಟುಂಬಗಳಿಗೆ ಬಜೆಗುಂಡಿ ಗ್ರಾಮದ ಸಮುದಾಯ ಭವನದಲ್ಲಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಮುಂದಿನ ಕೆಲವೇ ದಿನಗಳಲ್ಲಿ ಬಜೆಗುಂಡಿ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಕಳೆದ ೪ ದಶಕಗಳಿಂದಲೂ ಊರುಡುವೆ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿರುವ ಬಜೆಗುಂಡಿ ಗ್ರಾಮಸ್ಥರಿಗೆ ಹಕ್ಕುಪತ್ರವಿಲ್ಲದೇ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ಸರ್ಕಾರದ ಆದೇಶದಂತೆ ಅರಣ್ಯ ಹಕ್ಕು ಸಮಿತಿಗಳನ್ನು ರಚಿಸಿ, ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಹಕ್ಕುಪತ್ರಗಳನ್ನು ವಿತರಿಸಲು ಕ್ರಮವಹಿಸಲಾಗಿದೆ. ಮುಂದಿನ ೧೫ ದಿನಗಳ ಒಳಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಎಲ್ಲರೂ ಕಡ್ಡಾಯವಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಡ ಕೂಲಿ ಕಾರ್ಮಿಕ ಕುಟುಂಬಗಳು ಕೋವಿಡ್‌ಗೆ ತುತ್ತಾಗಿ ಸಂಕಷ್ಟ ಎದುರಿಸಿದ್ದು, ಇವರುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತನ್ನಿಂದ ಆದ ಸಹಾಯ ಹಸ್ತ ನೀಡುತ್ತಿರುವುದಾಗಿ ರಂಜನ್ ಹೇಳಿದರು.

ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಮಡಿಕೇರಿ ಕ್ಷೇತ್ರದಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಕೋವಿಡ್‌ಗೆ ತುತ್ತಾದ ಬಡ ಕುಟುಂಬಗಳು, ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ವಿವಿಧ ವರ್ಗದ ಮಂದಿಗೆ ಶಾಸಕರು ೨೨ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕಿಟ್ ವಿತರಿಸಿರುವುದು ಶ್ಲಾಘನೀಯ ಎಂದರು.

ತಾ.ಪA. ಮಾಜಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ನಗರಾಧ್ಯಕ್ಷ ಎಸ್.ಸೋಮೇಶ್, ಗ್ರಾ.ಪಂ. ಅಧ್ಯಕ್ಷ ಬಿ.ಎಂ. ಪ್ರಶಾಂತ್ ಅವರುಗಳು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ್ ಗಣೇಶ್ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಸುಜಾತ, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಹಾಗೂ ಗ್ರಾ.ಪಂ. ಸದಸ್ಯ ತಿಮ್ಮಪ್ಪ ನಾಯ್ಕ್, ಪಿಡಿಓ, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ಬೇಳೂರು ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ಕರ್ಕಳ್ಳಿ ಗ್ರಾಮದಲ್ಲಿ ೧೨ ಏಕರೆ ಪೈಸಾರಿ ಜಾಗವಿದ್ದು, ಇದನ್ನು ಕೆಲವೊಂದು ಜಾತಿಗಳಿಗೆ ಮೀಸಲಿಟ್ಟು ಸ್ಮಶಾನ ಜಾಗವನ್ನಾಗಿ ಪರಿವರ್ತಿಸಿ ದಾಖಲೆ ನೀಡಲಾಗುತ್ತಿದೆ. ತಹಶೀಲ್ದಾರ್‌ರು ಪಂಚಾಯಿತಿಯ ಗಮನಕ್ಕೆ ತಾರದೇ ಸಮುದಾಯಗಳಿಗೆ ಜಾಗ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪಿಸಿದರು.

ಸರ್ಕಾರಿ ಜಾಗವನ್ನು ಜಾತಿಗಳ ಸ್ಮಶಾನಕ್ಕೆ ನೀಡದೇ, ಸಾರ್ವಜನಿಕ ಸ್ಮಶಾನಕ್ಕೆ ಮಾತ್ರ ಬಳಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ೪೦೦ಕ್ಕೂ ಅಧಿಕ ಕುಟುಂಬಗಳಿಗೆ ನಿವೇಶನವಿಲ್ಲ. ಕಾಟಿಕೆರೆ ಬಳಿಯಲ್ಲೂ ಪೈಸಾರಿ ಜಾಗವಿದ್ದು, ಇದನ್ನು ನಿವೇಶನ ರಹಿತರಿಗೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು.

ಬೇಳೂರು-ಕಾರೇಕೊಪ್ಪ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ ಇಲ್ಲದಿರುವುದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗೂ ಅಡಚಣೆಯಾಗಿದ್ದು, ಈ ಭಾಗದಲ್ಲಿ ಟವರ್ ನಿರ್ಮಾಣಕ್ಕೆ ಕ್ರಮವಹಿಸುವಂತೆ ರಂಜನ್ ಅವರಲ್ಲಿ ಮನವಿ ಮಾಡಿದರು.