ರಾಜ್ಯದಲ್ಲಿ ಸಾವಿರಕ್ಕಿಂತ ಕಡಿಮೆ ಸೋಂಕು ಪತ್ತೆ

ಬೆಂಗಳೂರು, ಆ. ೩೦: ಕೊರೊನಾ ಎರಡನೇ ಅಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಬಂದಿದೆ. ಇಂದು ೯೭೩ ಕೊರೊನಾ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ ೨೯,೪೮,೨೨೮ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೧೫ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೭,೨೯೩ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಇಂದು ೨೬೪ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೩೭,೫೫೦ಕ್ಕೆ ಏರಿಕೆಯಾಗಿದೆ. ನಗರದಲ್ಲಿ ೩ ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಂದು ೧,೩೨೪ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೮,೯೨,೫೧೭ಕ್ಕೆ ಏರಿಕೆಯಾಗಿದೆ. ಇನ್ನು ೧೮,೩೯೨ ಸಕ್ರೀಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೫೧,೨೧೯ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೯೭೩ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೦.೬೪ಕ್ಕೆ ಇಳಿದಿದೆ. ಇನ್ನು ರಾಜ್ಯದ ಜಿಲ್ಲೆಗಳಾದ ಬಾಗಲಕೋಟೆ, ಬೀದರ್, ರಾಯಚೂರು ಮತ್ತು ವಿಜಯಪುರದಲ್ಲಿ ಶೂನ್ಯ ಪ್ರಕರಣ ಪತ್ತೆಯಾಗಿದೆ.

ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

ಟೋಕಿಯೊ, ಆ. ೩೦: ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಭಾರತದ ಸುಮಿತ್ ಅಂತಿಲ್ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಜಾವಲಿನ್ ಥ್ರೋನಲ್ಲಿ ಭಾರತದಿಂದ ಸುಮಿತ್ ಅಂತಿಲ್ ಮತ್ತು ಸಂದೀಪ್ ಭಾಗವಹಿಸಿದ್ದರು. ಆದರೆ ಸುಮಿತ್ ಅಂತಿಲ್ ೬೮.೫೫ ಮೀಟರ್ ದೂರಕ್ಕೆ ಥ್ರೋ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಇನ್ನು ಸಂದೀಪ್ ೬೨.೨೦ ಮೀಟರ್ ದೂರಕ್ಕೆ ಥ್ರೋ ಎಸೆಯುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ೭ ಪದಕಗಳು ಬಂದಿವೆ. ೨ ಚಿನ್ನ, ೪ ಬೆಳ್ಳಿ ಮತ್ತು ೧ ಕಂಚಿನ ಪದಕ ಸೇರಿದೆ.

೨೮ ಮಂದಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು

ಕೋಲಾರ, ಆ. ೩೦: ಕೆಲವೇ ಕೋವಿಡ್-ಪಾಸಿಟಿವ್ ಪ್ರಕರಣಗಳನ್ನು ಕಂಡಿದ್ದ ಕೋಲಾರ ಜಿಲ್ಲೆಯಲ್ಲಿ ಕೊರೊನಾ ಸಾಂಕ್ರಾಮಿಕ ದಿಢೀರ್ ಸದ್ದು ಮಾಡುತ್ತಿದ್ದು, ಏಕಕಾಲದಲ್ಲಿ ೨೮ ಮಂದಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗಲಿರುವುದು ವರದಿಯಾಗಿದೆ. ಇವರ ಸಂಪರ್ಕಕ್ಕೆ ಬಂದಿದ್ದ ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಉಪ ಆಯುಕ್ತರಾದ ಡಾ. ಸೆಲ್ವಮಣಿ ಅವರು, ಕಾಲೇಜಿನ ಎಲ್ಲಾ ೩೭೫ ವಿದ್ಯಾರ್ಥಿಗಳನ್ನು ಪರೀಕ್ಷಿಸಲು ನಿರ್ದೇಶನ ನೀಡಲಾಗಿದೆ. ವಿದ್ಯಾರ್ಥಿಗಳ ಕೋವಿಡ್ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಲು ಆರೋಗ್ಯ ಕಾರ್ಯಕರ್ತರ ತಂಡವನ್ನು ಕೆಜಿಎಫ್ ನ ಆಂಡರ್ಸನ್ ಪೇಟೆಯ ನೂರುನ್ನೀಸಾ ಕಾಲೇಜ್ ಆಫ್ ನರ್ಸಿಂಗ್‌ಗೆ ನಿಯೋಜಿಸಲಾಗಿದೆ ಎಂದು ಮೂಲಗಳ ಪ್ರಕಾರ ವಿದ್ಯಾರ್ಥಿಗಳು ಕೇರಳದಿಂದ ಬಂದಿದ್ದರು. ತಹಶೀಲ್ದಾರ್ ಮತ್ತು ಆರೋಗ್ಯ ಅಧಿಕಾರಿಗಳಿಗೆ ಅವರ ಆಗಮನ, ಆರ್‌ಟಿಪಿಸಿಆರ್ ವರದಿಗಳು ಮತ್ತು ಇತರ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ತಕ್ಷಣವೇ ಸಲ್ಲಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.