*ಗೋಣಿಕೊಪ್ಪ, ಆ. ೩೦: ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕುಂದ ಪೈಸಾರಿಯ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಅಳವಡಿಸಿರುವ ನೀರಿನ ಟ್ಯಾಂಕ್ ಕಳೆದ ಒಂದು ವರ್ಷಗಳಿಂದ ಉಪಯೋಗಕ್ಕೆ ಬಾರದೇ ಪಾಳುಬಿದ್ದಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
ಪಂಚಾಯಿತಿ ೧೪ ನೇ ಹಣಕಾಸು ಯೋಜನೆಯಡಿ ರೂ. ೧ ಲಕ್ಷ ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು. ಆದರೆ, ಒಂದು ವರ್ಷದಿಂದ ಸ್ಥಳೀಯರಿಗೆ ನೀರಿನ ಸಂಪರ್ಕ ಒದಗಿಸಲು ಟ್ಯಾಂಕ್ ನಿರುಪಯುಕ್ತವಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು ಗ್ರಾ.ಪಂ. ಸದಸ್ಯರ ನಿರ್ಲಕ್ಷ÷್ಯತೆಯಿಂದ ವ್ಯವಸ್ಥೆ ಸದುಪಯೋಗವಾಗುವುದನ್ನು ತಪ್ಪಿದೆ ಎಂದು ತಿಳಿಸಿದ್ದಾರೆ. ಒಂದು ವರ್ಷ ಕಳೆದರೂ ಟ್ಯಾಂಕಿಗೆ ಮೋಟಾರು ಅಳವಡಿಸಲು ಸಾಧ್ಯವಾಗಿಲ್ಲ. ವಿದ್ಯುತ್ ಸಂಪರ್ಕ ವ್ಯವಸ್ಥೆ ಇಲ್ಲದೇ ಇರುವುದರಿಂದ ನೀರಿನ ವ್ಯವಸ್ಥೆಯನ್ನು ಗ್ರಾಮಸ್ಥರಿಗೆ ಒದಗಿಸಲು ಅಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ತಕ್ಷಣ ಪಂಚಾಯಿತಿ ಅನುದಾನದಲ್ಲಿ ನಿರ್ಮಾಣವಾದ ಕುಡಿಯುವ ನೀರಿನ ಟ್ಯಾಂಕಿನ ಉಪಯೋಗವನ್ನು ಗ್ರಾಮಸ್ಥರಿಗೆ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭ ಒತ್ತಾಯಿಸಿದ್ದಾರೆ.
ಈ ಬಗ್ಗೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಸತೀಶ್ ಅವರು ಪ್ರತಿಕ್ರಿಯಿಸಿದ್ದು, ಈಗಾಗಲೇ ವಿದ್ಯುತ್ ಸಂಪರ್ಕ ಒದಗಿಸಲು ಚೆಸ್ಕಾಂ ಇಲಾಖೆಗೆ ಅರ್ಜಿ ನೀಡಲಾಗಿದೆ. ಮೂರು ಕಂಬಗಳನ್ನು ಅಳವಡಿಸಬೇಕೆಂದು ಇಲಾಖೆ ಸರ್ವೆ ನಡೆಸಿದ್ದು, ಶೀಘ್ರದಲ್ಲಿಯೇ ಟ್ಯಾಂಕ್ ನೀರು ಹಾಯಿಸಲು ಅನುಕೂಲ ಕಲ್ಪಿತವಾಗುತ್ತದೆ ಮಾಹಿತಿ ನೀಡಿದ್ದಾರೆ.