ಇಂದು ಕ್ರೀಡಾದಿನ
‘ಶರೀರ ಮಾದ್ಮಂ ಖಲು ಧರ್ಮ ಸಾಧನಂ’ ಎಂಬುದೊAದು ಪ್ರಾಚೀನ ಮಾತು. ಶರೀರದ ಸಂಪೂರ್ಣ ಆರೋಗ್ಯವು ಸಾಧನೆಯ ಮೆಟ್ಟಿಲುಗಳು. ಮೈ ಮತ್ತು ಮನಸ್ಸುಗಳನ್ನು ಹಗುರಾಗಿಸುವ ಮಾಧ್ಯಮವೇ ಕ್ರೀಡೆ. ಕ್ರೀಡೆ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಾನಸಿಕ ಹಾಗೂ ದೈಹಿಕ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕ್ರೀಡೆಯು ವ್ಯಾಯಾಮದ ಉತ್ತಮ ಹಾಗೂ ಉಚಿತ ಸಾಧನವಾಗಿದೆ. ವ್ಯಕ್ತಿಯೊಬ್ಬನ ಪರಿಪೂರ್ಣ ಉನ್ನತಿಗೆ ಕ್ರೀಡಾ ಚಟುವಟಿಕೆಗಳು ಹೆಚ್ಚು ಉತ್ತೇಜನವನ್ನು ನೀಡುವುದರೊಂದಿಗೆ ಆತನ ಯಶಸ್ಸಿನ ಹಾಗೂ ನಿರಾಯಾಸ ಜೀವನದ ಭಾಗವೇ ಆಗಿದೆ.
ಕ್ರೀಡೆಗಳನ್ನು ಒಳಾಂಗಣ ಮತ್ತು ಹೊರಾಂಗಣ ಕ್ರೀಡೆ ಎಂಬುದಾಗಿ ವಿಂಗಡಿಸಲಾಗಿದೆ. ವಯಸ್ಸಿನ ಮಿತಿಯನ್ನು ಲೆಕ್ಕಿಸದೆ ಆರೋಗ್ಯದ ಸುಸ್ಥಿತಿಯನ್ನು ಕಾಪಾಡಿಕೊಳ್ಳಲು ಆಟೋಟಗಳಲ್ಲಿ ಭಾಗವಹಿಸುವುದು ಉತ್ತಮ. ಮನರಂಜನೆಯ ಕೇಂದ್ರಬಿAದುವಾಗಿರುವ ಕ್ರೀಡಾಲೋಕವು ಆರೋಗ್ಯದ ವೃದ್ಧಿಗೆ ಬಹು ಮುಖ್ಯ ಔಷಧ. ಸಾಂಪ್ರದಾಯಿಕವಾಗಿ ಹಲವಾರು ಆಟಗಳು; ಸಂಸ್ಕೃತಿ ಹಾಗೂ ಭಾವೈಕ್ಯತೆಯನ್ನು ಬಿಂಬಿಸುವ ಪ್ರತೀಕ ಎನ್ನಲಾಗಿದೆ. ಯಾವುದೇ ಭೇದವಿಲ್ಲದೆ, ನಿರ್ಬಂಧಗಳಿಲ್ಲದೆ ಸಮಾಜ ಬಾಂಧವರೆಲ್ಲರೂ ಒಗ್ಗೂಡಿಕೊಂಡು ಬೆಳೆಯುವುದಕ್ಕೆ ಕ್ರೀಡಾ ಚಟುವಟಿಕೆಗಳು ವೇದಿಕೆಯಾಗಿವೆ. ಶಿಸ್ತು, ಸ್ಪರ್ಧಾತ್ಮಕ ಮನೋಭಾವನೆ, ಆತ್ಮವಿಶ್ವಾಸ, ಹೊಂದಾಣಿಕೆ, ಮುಂದಾಲೋಚನೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ನಾಯಕತ್ವದ ಗುಣಗಳನ್ನು ಹೊಂದಿ ಆರೋಗ್ಯವಂತ ವ್ಯಕ್ತಿಯೊಬ್ಬನ ವ್ಯಕ್ತಿತ್ವವನ್ನು ವಿಕಸಿಸುವುದಕ್ಕೆ ಕ್ರೀಡೆ ಸಹಕಾರಿಯಾಗಿದೆ. ಹಲವಾರು ಕ್ರೀಡೆಗಳು ಆಯಾಯ ಪರಿಸರದಲ್ಲಿ ಅಲ್ಲಿನ ಪದ್ಧತಿಗಳಿಗೆ ಅನುಸರಿಸಿಕೊಂಡು ಪ್ರಚಲಿತಗೊಂಡಿದೆ. ಅಂತಹ ಕ್ರೀಡಾ ವಿಭಾಗಗಳಲ್ಲಿ ಜನಪದ ಕ್ರೀಡೆಗಳಿಗೂ ಮಹತ್ತರ ಸ್ಥಾನವಿದೆ.
ಗ್ರಾಮೀಣವಾಗಿ ರಚಿಸಲ್ಪಟ್ಟ ಈ ಚಟುವಟಿಕೆಗಳು ಮನುಷ್ಯನ ಮತ್ತು ಸಮಾಜದ ಸರ್ವಾಂಗೀಣ ಪ್ರಗತಿಗೆ ಕಾರಣವಾಗಿವೆ. ಇಂತಹ ಕೆಲವು ಆಟಗಳೇ ಲಗೋರಿ, ಕುಂಟೆ ಬಿಲ್ಲೆ, ಮರಕೋತಿಯಾಟ, ಚಿನ್ನಿ ದಾಂಡು, ಬುಗುರಿ, ಕಣ್ಣಾಮುಚ್ಚಾಲೆ, ಅಳ್ಳು ಮನೆ, ಆಣೆ ಕಲ್ಲು, ಹಗ್ಗ-ಜಗ್ಗಾಟ, ಚೆನ್ನಮಣೆ, ಜುಬುಲಿ, ಗೋಲಿ ಆಟ, ತಪ್ಪಂಗಾಯಿ, ತೂಟೆದಾರ, ನದಿ-ದಡ, ಕೆಸರು ಗದ್ದೆ ಓಟ, ಕಾಗೆ-ಗಿಳಿ, ಹುಲಿ-ದನ,ನಿಂಬೆ ಹಣ್ಣಿನ ಓಟ, ಕಪ್ಪೆ-ಗುಪ್ಪಾಟ, ಕುದುರೆ ಆಟ, ಕುಟ್ಟಿ ದೊಣ್ಣೆ,ಡೊಂಕ ಹಾಕುವುದು,ಬೀಸು ಹೊಡೆತ,ತೋಳ ತೊಟ್ಟಿಲಾಟ,ಏಳು ಗುಳಿಯ ಆಟ, ಪಗಡೆ, ಕಂಬಳ, ಕೋಳಿ ಅಂಕ ಹೀಗೆ ಹತ್ತು ಹಲವು ಜನಪದೀಯ ಆಟಗಳು ಮನರಂಜನೆಯೊAದಿಗೆ ವ್ಯಕ್ತಿ-ವ್ಯಕ್ತಿ ನಡುವಿನ ಸೌಹಾರ್ದತೆ, ವಿವಿಧತೆಯಲ್ಲಿನ ವೈವಿಧ್ಯತೆ, ಧ್ಯಾನ ಚಿಂತನೆ, ಸಾಮಾನ್ಯ ಜ್ಞಾನ, ಸಮಯಪ್ರಜ್ಞೆಯನ್ನು ಬಿತ್ತರಿಸಿ ಹಿರಿಯ-ಕಿರಿಯರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಅಪರೂಪದ ಕ್ರೀಡಾ ವಿಭಾಗವಾಗಿದೆ.
ಇತಿಹಾಸದ ಪುಟ ತಿರುವಿದಾಗ ಮಹಾಭಾರತ,ರಾಮಾಯಣ ಹಾಗೂ ಇನ್ನಿತರ ಪೌರಾಣಿಕ ಕಾಲದಲ್ಲಿಯೂ ಉಲ್ಲೇಖವಾಗಿರುವ ಈ ಆಟಗಳು, ಇಂದು ಗ್ರಾಮ್ಯ ಪರಿಸರಕ್ಕೆ ಹೆಚ್ಚು ಸೀಮಿತವಾಗಿರುವುದರಿಂದ ಹಾಗೂ ಸಮಾಜವು ಹೊಸ ವಿದ್ಯುನ್ಮಾನಗಳ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿರುವ ಕಾರಣದಿಂದಾಗಿ ಜನಪದ ಆಟಗಳು ಕಣ್ಮರೆಯಾಗುತ್ತಿರುವುದು ಖೇದಕರ ಸಂಗತಿ.
ಮಕ್ಕಳು ಆಡುವ ಆಟ, ಅವುಗಳಿಂದ ಕಲಿಯುವ ಮೌಲ್ಯ ಪಾಠಗಳು ಸತ್-ಚಿಂತನೆಯುಳ್ಳ ವಿದ್ಯಾರ್ಥಿ ಜೀವನವನ್ನು ಇನ್ನಷ್ಟು ಚಂದವಾಗಿಸುತ್ತವೆ. ನಾವು ಸದಾ ನೆನಪಿಸಿಕೊಳ್ಳಲೇಬೇಕಾದ ಸಂಸ್ಕೃತಿಯ ಪರಿಚಯವನ್ನು, ಸೋಲನ್ನು ಸ್ವೀಕರಿಸುವ ಮನೋಭಾವವನ್ನು, ಪರಿಸರದ ಬಗೆಗಿನ ಕಾಳಜಿಯನ್ನು, ಹಿರಿಯರೊಂದಿಗೆ ಬೆರೆಯುವ ಅವಕಾಶವನ್ನು ಆಟಗಳು ಕಲ್ಪಿಸಿ ಕೊಡುತ್ತವೆ. ಜಾನಪದ ಕ್ರೀಡೆಗಳು ಸಂಸ್ಕಾರದ ದ್ಯೋತಕವಾಗಿ ಇಂದಿಗೂ ಉಳಿದಿರುವುದು ಇಂದಿನ ತಲೆಮಾರಿನವರ ಅದೃಷ್ಟವೇ ಸರಿ. ಹಲವಾರು ಪ್ರದೇಶಗಳಲ್ಲಿ ಈ ಆಟಗಳು ಆಚರಣೆಯ ರೂಪದಲ್ಲಿ ಇರುವುದೂ ಕೂಡ ಗಮನಿಸಬೇಕಾದ ಅಂಶ.
ಈ ಮೂಲಕ ಅನ್ಯೋನ್ಯತೆಯನ್ನು ತರುವ ಕ್ರಿಯಾತ್ಮಕ ವಾಹಿನಿಯಾಗಿಯೂ ಇದು ಬೆಳಕನ್ನು ಚೆಲ್ಲಿದೆ. ಕ್ರಿಯಾಶೀಲ ಹಾಗೂ ಸೃಜನಶೀಲ ಕೌಶಲ್ಯಗಳ ಬೆರಕೆ ಇರುವ ಆಟೋಟಗಳು ಹಾಗೂ ಇತರೆ ಚಟುವಟಿಕೆಗಳ ಅಳವಡಿಕೆಯು ಶಾಲೆ-ಕಾಲೇಜು ಮತ್ತು ಮನೆ-ಮನೆಗಳಲ್ಲಿಯೂ ಆಗಬೇಕಿದೆ. ಆಧುನಿಕ ಅಂತರ್ಜಾಲದ ಯುಗದಲ್ಲಿರುವ ನಾವು ಜವಾಬ್ದಾರಿಯಿಂದ ಸಮಾಜ ನಿರ್ಮಾಣ ಮಾಡಬೇಕಿದೆ. ಇದಕ್ಕೆ ಕೊಂಡಿಯAತಿರುವ ಕ್ರೀಡಾ ಜಗತ್ತಿಗೆ ಪ್ರೋತ್ಸಾಹ ನೀಡಿ ಯುವ ಶಕ್ತಿಯನ್ನು ಕ್ರೀಡೆಯೆಡೆಗೆ ಕೇಂದ್ರೀಕರಿಸುವುದರಿAದ ಸದೃಢ ಸಮೂಹದ ಅಭಿವೃದ್ಧಿಯು ಸಾಧ್ಯ.
- ಬೈಲೆ ಸಹನಾ ಚಂದನ್, ಜೀವಶಾಸ್ತç ಉಪನ್ಯಾಸಕಿ, ಮುತ್ತಾರ್ಮುಡಿ, ಮೂರ್ನಾಡು.