ಕೊಡಗಿನಲ್ಲಿ ವೀಕೆಂಡ್ ಕರ್ಫ್ಯೂ ಸರ್ಕಾರದ ಆದೇಶದಂತೆ ಜಾರಿಯಲ್ಲಿದೆ. ತಾ. ೩೦ ರವರೆಗೂ ಇದು ಮುಂದುವರಿಯಲಿದ್ದು, ಬಳಿಕ ಸರ್ಕಾರ ಹೊರಡಿಸುವ ಮಾರ್ಗಸೂಚಿ ಅನ್ವಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ‘ಶಕ್ತಿ’ಗೆ ತಿಳಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಕೈ ಬಿಡುವಂತೆ ಜಿಲ್ಲೆಯಲ್ಲಿ ಆಗ್ರಹಗಳು ಕೇಳಿಬರುತ್ತಿವೆಯಾದರೂ ವೀಕೆಂಡ್ ಕರ್ಫ್ಯೂ ಜಿಲ್ಲಾಧಿಕಾರಿ ತೆಗೆದುಕೊಂಡ ತೀರ್ಮಾನವಲ್ಲ; ಅದು ಸರ್ಕಾರದ ತೀರ್ಮಾನ. ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಕೊರೊನಾ ಪಾಸಿಟಿವಿಟಿ ದರ ಶೇ. ೨ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಈಗಾಗಲೇ ನಿರ್ದೇಶನ ನೀಡಿದೆ. ಅದರಂತೆ ಕೊಡಗಿನಲ್ಲಿ ಪಾಸಿಟಿವಿಟಿ ದರ ಶೇ. ೨ಕ್ಕಿಂತ ಕಡಿಮೆ ಕಂಡು ಬರುತ್ತಿದ್ದರೂ ಕೂಡ ಕೆಲ ದಿನಗಳವರೆಗೆ ಕಾದುನೋಡಿ ಪರಿಸ್ಥಿತಿ ಹೀಗೇ ಇದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚಾರುಲತಾ ಹೇಳಿದರು.