ಕೂಡಿಗೆ, ಆ.೨೯: ಕೂಡಿಗೆ ಗ್ರಾಮ ಪಂಚಾಯಿತಿ ಜೇನುಕಲ್ಲು ಬೆಟ್ಟದ ವ್ಯಾಪ್ತಿಯ ಕೆಲ ರೈತರ ಜಮೀನಿನಲ್ಲಿ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೇನುಕಲ್ಲು ಬೆಟ್ಟದ ಚಂದ್ರ ಎಂಬವರ ಜಮೀನಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ ಚಿರತೆಯ ಸೆರೆಗಾಗಿ ಪಂಜರ ಇರಿಸಲಾಗಿದೆ.

ರೈತರ ಮನವಿಯ ಮೇರೆಗೆ ಹೆಬ್ಬಾಲೆ ಉಪ ವಲಯ ಅರಣ್ಯ ಅಧಿಕಾರಿ ಭರತ್ ಮೇಲಾಧಿಕಾರಿಗಳ ಅನುಮತಿ ಮೇರೆಗೆ ರಾತ್ರಿ ಸಮಯದಲ್ಲಿ ಪಂಜರ ಇರಿಸಲಾಗಿದ್ದು, ರಾತ್ರಿ ಸಮಯದಲ್ಲಿ ಪಂಜರದಲ್ಲಿ

(ಮೊದಲ ಪುಟದಿಂದ) ನಾಯಿಯನ್ನು ಕಟ್ಟಲಾಗುತ್ತದೆ ಎಂದು ತಿಳಿಸಿದ್ದಾರೆ. ಚಿರತೆಯು ಕಳೆದ ಒಂದು ವಾರದಿಂದ ಸೀಗೆಹೊಸೂರು ವ್ಯಾಪ್ತಿಯ ಉಪ ಗ್ರಾಮಗಳಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕಾಡಿನಂಚಿನ ಜಮೀನಿನಲ್ಲಿ ಹೆಚ್ಚು ಗುರುತು ಪತ್ತೆಯಾಗಿರುವುದರಿಂದ ಪಂಜರ ಇರಿಸಲಾಗಿದೆ. ಈ ಭಾಗದ ಗ್ರಾಮಸ್ಥರು ಭಯಭೀತರಾಗಿದ್ದು, ಅರಣ್ಯ ಇಲಾಖೆಯವರು ಗ್ರಾಮಸ್ಥರ ಸಹಕಾರದೊಂದಿಗೆ ಚಿರತೆಯ ಸುಳಿವಿಗಾಗಿ ಪ್ರಯತ್ನ ಮಾಡುತ್ತಿದ್ದಾರೆ.