-ಅನಿಲ್ ಎಚ್.ಟಿ.
ಮಡಿಕೇರಿ, ಆ. ೨೮: ಎರಡು ಗಿರಿಗಳು.. ಒಂದು ನೀಲಿ ಹೂವು... ಲಕ್ಷಾಂತರ ಪುಷ್ಪರಾಶಿ.. ಸಾವಿರಾರು ಸಂದರ್ಶಕರು.. ನಿಜಕ್ಕೂ ಕೊಡಗಿನ ಪಾಲಿಗೆ ಇದೊಂದು ಅಪೂರ್ವ ಸಂದರ್ಭ.
ಹೌದು. ಮಡಿಕೇರಿ ಬಳಿಯ ಮಾಂದಲಪಟ್ಟಿ ಮತ್ತು ಕೋಟೆಬೆಟ್ಟಗಳಲ್ಲಿ ಅರಳಿನಿಂತಿರುವ ಅಪರೂಪದ ನೀಲಕುರಂಜಿ ಪುಷ್ಟ ರಾಶಿಯನ್ನು ವೀಕ್ಷಿಸಲು ಈ ಗಿರಿಗಳಿಗೆ ತಂಡೋಪತAಡವಾಗಿ ಜನ ಧಾವಿಸುತ್ತಿದ್ದಾರೆ. ನೀಲಕುರಂಜಿ ಎಂಬ ಅಪೂರ್ವ ಪುಷ್ಪರಾಶಿ ಈಗ ಕೊಡಗಿನ ಪಾಲಿಗೆ ಜನಾಕರ್ಷಣೆಯ ಪುಷ್ಪವಾಗಿ ಪರಿಣಮಿಸಿದೆ. ಅರಳಿ ನಿಂತ ಸೊಬಗಿನ ಬೆಟ್ಟದ ಹೂವು ಮಾಂದಲಪಟ್ಟಿ ತಪ್ಪಲಿನ ಗ್ರಾಮಸ್ಥರು ಮಾತ್ರವಲ್ಲ, ಮಡಿಕೇರಿ, ಕುಶಾಲನಗರ ಸೇರಿದಂತೆ ಕೊಡಗಿನ ಹಲವು ಪಟ್ಟಣಗಳಿಗೆ ಆರ್ಥಿಕ ಚೈತನ್ಯ ನೀಡಿದೆ. ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್ ಲಾಕ್ ಡೌನ್‌ನಿಂದ ಆರ್ಥಿಕ ಹಾಗೂ ಮಾನಸಿಕವಾಗಿಯೂ ಬೇಸತ್ತು ಹೋಗಿದ್ದ ಕೊಡಗಿನ ಜನತೆಯ ಪಾಲಿಗೆ ನೀಲಕುರಂಜಿ ಎಂಬ ಬೆಟ್ಟದ ಹೂವು ಯಾರೂ ನಿರೀಕ್ಷಿಸದ ರೀತಿಯಲ್ಲಿ ನವಚೈತನ್ಯ, ಮನೋಲ್ಲಾಸ ನೀಡಿದೆ.
ನೀಲಕುರಂಜಿ ಜನರ ಪಾಲಿಗೆ ಸಂಭ್ರಮದ ನವೋಲ್ಲಾಸಕ್ಕೆ ಕಾರಣವಾಗಿದೆ..
ಪುಷ್ಪಗಳಿಗೆ ಪ್ರತೀಯೋರ್ವರ ಮನಸ್ಸನ್ನೂ ಚಿತೋಹಾರಿಗೊಳಿಸುವ ಶಕ್ತಿಯಿದೆ. ಹೀಗಾಗಿಯೇ ಮನೆಯಲ್ಲಿ ಪುಷೆÇ್ಪÃದ್ಯಾನವನ್ನು ಜಿಲ್ಲೆಯ ಬಹುತೇಕ ಜನ ಆಸಕ್ತಿಯಿಂದ ಕೈಗೊಳ್ಳುತ್ತಾ ಬರುತ್ತಿದ್ದಾರೆ. ಇದೀಗ ಕೊಡಗಿನ ಎರಡು ಬೆಟ್ಟಗಳಲ್ಲಿ ಅರಳಿ ಕಂಗೊಳಿಸುತ್ತಿರುವ ನೀಲಿ ವರ್ಣದ ಕುರಂಜಿ ಹೂವುಗಳು ಅಂಥಹದ್ದೇ ಸಂಭ್ರಮವನ್ನು ಜನತೆಯಲ್ಲಿ ತಂದಿದೆ. ೧೨ ವರ್ಷಕ್ಕೊಮ್ಮೆ ಅರಳುವ ಪುಷ್ಪ ಪವಾಡವನ್ನೇ ಕೊಡಗಿನ ಬೆಟ್ಟದಲ್ಲಿ ಸೃಷ್ಟಿಸಿದೆ.
ಮಾಂದಲಪಟ್ಟಿ ತಪ್ಪಲಿನ ಕಾಲೂರು, ಸೂರ್ಲಬ್ಬಿ, ನಂದಿಮೊಟ್ಟೆ, ಗಾಳಿಬೀಡು, ಹಮ್ಮಿಯಾಲ ಮತ್ತಿತರ ಗ್ರಾಮಗಳ ಯುವಕರು ಕೆಲವು ವಷ೯ಗಳಿಂದ ಪ್ರವಾಸೀ ತಾಣವಾದ ಮಾಂದಲಪಟ್ಟಿಗೆ ತಾವು ಹೊಂದಿರುವ ಜೀಪಿನಲ್ಲಿ ಜನರನ್ನು ಕರೆದೊಯ್ದು ಒಂದಿಷ್ಟು ವರಮಾನ ಸಂಪಾದಿಸುತ್ತಿದ್ದರು.
ಆದರೆ ೨೦೧೮ ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಬಳಿಕ ಮಾಂದಲಪಟ್ಟಿಗೆ ಜನರನ್ನು ಕರೆದೊಯ್ಯುವ ಜೀಪು ಮಾಲೀಕರು, ಚಾಲಕರಿಗೂ ಸಂಕಷ್ಟ ಪ್ರಾರಂಭವಾಯಿತು. ಜೀಪುಗಳ ನಡುವಿನ ಅಹಿತಕರ ಪೈಪೋಟಿ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಕೈಗೊಂಡಿತ್ತು. ಅನೇಕ ತಿಂಗಳು ಮಾಂದಲಪಟ್ಟಿಗೆ ಬಾಡಿಗೆ
(ಮೊದಲ ಪುಟದಿಂದ) ಜೀಪುಗಳನ್ನೇ ನಿಷೇಧಿಸಲಾಗಿತ್ತು. ನಂತರ ೨೦೨೦ರ ಮಾರ್ಚ್ ಬಳಿಕ ಕೋವಿಡ್ ಲಾಕ್ ಡೌನ್‌ನಿಂದಾಗಿ ಕೊಡಗಿಗೆ ಪ್ರವಾಸಿಗರ ಆಗಮನವೂ ಕುಂಠಿತಗೊAಡಿತು. ಎಲ್ಲರೂ ಮನೆಗೇ ಸೀಮಿತರಾದಾಗ ಜೀಪು ಮಾಲೀಕರು ಕೂಡ ಮನೆಯೊಳಗೇ ಕೂರುವಂತಾಯಿತು.
ಅಂತೆಯೇ ಮಡಿಕೇರಿ-ಮಾಂದಲಪಟ್ಟಿಯ ೧೬ ಕಿ.ಮೀ. ಅಂತರದ ನಡುವೇ ಬೆಟ್ಟಕ್ಕೆ ತೆರಳುವ ಸಂದರ್ಶಕರನ್ನೇ ಅವಲಂಭಿಸಿದ್ದ ಅನೇಕ ಅಂಗಡಿಗಳಿಗೂ ಲಾಕ್‌ಡೌನ್ ಹೊಡೆತದ ಬಿಸಿ ತಟ್ಟಿ ಅವುಗಳು ಕೂಡ ಬಾಗಿಲು ಮುಚ್ಚಿದ್ದವು. ಸದಾ ವಾಹನ ಸಂಚಾರದಿAದ ಕೂಡಿರುತ್ತಿದ್ದ ಮಾಂದಲಪಟ್ಟಿ ಬೆಟ್ಟ ಮಾರ್ಗ ವಾಹನಗಳೇ ಇಲ್ಲದೇ ಬಿಕೋ ಎನ್ನತೊಡಗಿತು.
ಪ್ರವಾಸೋದ್ಯಮವನ್ನೇ ನಂಬಿಕೊAಡಿದ್ದ ಈ ವ್ಯಾಪ್ತಿಯ ಗ್ರಾಮಸ್ಥರಲ್ಲಿ ನಿರಾಶೆಯ ಕಾರ್ಮೋಡ ಕವಿದು ಆರ್ಥಿಕತೆಯ ಎಲ್ಲಾ ಮಾರ್ಗಗಳು ಬಂದ್ ಆದವು ಎಂಬAತಿದ್ದಾಗ...
ಸಂಭವಿಸಿದ್ದೇ ಸೋಜಿಗ..
ಬೆಟ್ಟದಲ್ಲಿ ಅರಳಿತ್ತು ನೀಲಕುರಂಜಿ.. ಗ್ರಾಮಸ್ಥರ ಜೀವನದಲ್ಲಿ ಮತ್ತೆ ಹೊಸ ಕನಸುಗಳು ಕೂಡ ಅರಳಿನಿಲ್ಲಲು ಅಪರೂಪದ ಈ ಹೂವುಗಳು ಕಾರಣವಾದವು.
ಕಳೆದ ೨೦ ದಿನಗಳಿಂದ ಮತ್ತೆ ಮಾಂದಲಪಟ್ಟಿಯಲ್ಲಿ ಹೂವಿನಂತೆಯೇ ಜೀವಚೈತನ್ಯ ಕೂಡ ಕಂಗೊಳಿಸುತ್ತಿದೆ. ದಿನಕ್ಕೆ ಏನಿಲ್ಲ ಎಂದರೂ ೪ ರಿಂದ ೫ ಸಾವಿರ ಸಂದರ್ಶಕರು ಮಾಂದಲಪಟ್ಟಿಗೆ ಭೇಟಿ ನೀಡುತ್ತಿದ್ದಾರೆ. ಮಡಿಕೇರಿ, ನಂದಿಮೊಟ್ಟೆಯಿAದ ಮಾಂದಲಪಟ್ಟಿಗೆ ೧೧೦ ಜೀಪುಗಳು ಸಂದರ್ಶಕರನ್ನು ಕರೆದೊಯ್ಯುತ್ತಿವೆ. ಜೀಪು ಬಾಡಿಗೆಯನ್ನೇ ನಂಬಿಕೊAಡಿದ್ದ ಗ್ರಾಮದ ಅನೇಕರ ಮೊಗದಲ್ಲಿ ಮತ್ತೆ ಸಂಭ್ರಮ ಕಂಡುಬAದಿದೆ. ಈ ವ್ಯಾಪ್ತಿಯ ಹೋಂಸ್ಟೇಗಳು, ಹೊಟೇಲ್‌ಗಳು ಮತ್ತೆ ಬಾಗಿಲು ತೆರೆದುಕೊಂಡಿವೆೆ.
ಎಲ್ಲಕ್ಕಿಂತ ಗಮನಾರ್ಹ ಎಂದರೆ, ಪ್ರವಾಸಿಗರಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನ ಮೂಲೆಮೂಲೆಗಳ ಜನರು ನೀಲಕುರಂಜಿ ವೀಕ್ಷಿಸಲು ಬೆಟ್ಟಕ್ಕೆ ತೆರಳುತ್ತಿದ್ದಾರೆ.
ನೀವಿನ್ನೂ ನೀಲಕುರಂಜಿ ನೋಡಲಿಲ್ಲವೇ.. ಛೇ.. ಹೋಗಿಬನ್ನಿ.. ನೋಡೋದಕ್ಕೆ ಎರಡು ಕಣ್ಣು ಸಾಲದು ಎಂಬ ವರ್ಣನೆಯ ಮಾತು ಎಲ್ಲೆಲ್ಲೂ ಕೇಳಿಬರುತ್ತಿದೆ. ಲಾಕ್ ಡೌನ್‌ನಿಂದಾಗಿ ೧೫ ತಿಂಗಳು ಹೊರಗಡೆ ತಿರುಗಾಡಲೂ ಅಸಾಧ್ಯವಾದ ಪರಿಸ್ಥಿತಿಯಲ್ಲಿದ್ದ ಜನರ ಪಾಲಿಗೆ ಬೆಟ್ಟದ ಹೂವು ಹೊಸ ಹುಮ್ಮಸ್ಸು ನೀಡಿದೆ.
ಮಾಂದಲಪಟ್ಟಿಗೆ ಸಂದರ್ಶಕರನ್ನು ಕರೆದೊಯ್ಯಲು ೧೬೦೦ ರೂ. ಜೀಪು ಬಾಡಿಗೆಯಿದೆ. ದಿನಕ್ಕೆ ಕನಿಷ್ಟ ೨ ಬಾರಿ ಮಾಂದಲಪಟ್ಟಿಗೆ ೧ ಜೀಪು ಸಂಚರಿಸುತ್ತದೆ. ಸಂದರ್ಶಕರಿAದ ಹೊಟೇಲ್, ಅಂಗಡಿಗಳಿಗೆ ವಹಿವಾಟು ದೊರಕುತ್ತಿದೆ. ಜತೆಗೇ ನೀಲಕುರಂಜಿ ವೀಕ್ಷಿಸಲು ಹೊರ ಜಿಲ್ಲೆಗಳಿಂದಲೂ ಪ್ರವಾಸಿಗರು ಬರುತ್ತಿರುವುದರಿಂದಾಗಿ ಮಡಿಕೇರಿ, ಕುಶಾಲನಗರ ವ್ಯಾಪ್ತಿಯ ರೆಸ್ಟೋರೆಂಟ್, ಅಂಗಡಿಗಳಿಗೂ ವಹಿವಾಟು ಚೇತರಿಕೆ ಕಂಡಿದೆ. ಸರ್ಕಾರದ ಉನ್ನತಾಧಿಕಾರಿಗಳು, ಸಂಸದೆ ಸುಮಲತಾ ಅವರಂತಹ ಗಣ್ಯರು ಕೂಡ ನೀಲಕುರಂಜಿ ವೀಕ್ಷಿಸಲು ಕೊಡಗಿಗೆ ಬಂದಿದ್ದಾರೆ.
ಬೆಟ್ಟ ನೋಡಲು ಕಳೆದ ೧೨ ದಿನಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಮರುಭೂಮಿಯಲ್ಲಿ ಓಯಸಿಸ್ ದೊರಕಿದಂತಾಗಿದೆ. ಮಳೆಗಾಲದಲ್ಲಿ ಕೂಡ ಈ ವರ್ಷ ಸ್ವಲ್ಪ ಮಟ್ಟಿನ ಚೇತರಿಕೆಗೆ ನೀಲಕುರಂಜಿ ಹೂ ಕಾರಣವಾಗಿದೆ. ಹೂವಿನಿಂದಾಗಿ ಪ್ರವಾಸೋದ್ಯಮಿಗಳು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ ಎಂದು ಹೇಳಿದರು ಮಡಿಕೇರಿಯ ಹೊಟೇಲ್ ಉದ್ಯಮಿ ಜಯಂತ್ ಪೂಜಾರಿ.
ಜೀಪುಗಳನ್ನು ಮನೆಯಂಗಳದಲ್ಲಿ ನಿಲ್ಲಿಸಿ ಬಿಟ್ಟಿದ್ದೆವು. ಮಳೆ, ಕೋವಿಡ್, ಜಿಲ್ಲಾಡಳಿತದ ಕಠಿಣ ನಿಲುವುಗಳಿಂದಾಗಿ ಬೇಸತ್ತಿದ್ದೆವು. ಅನೇಕರು ಜೀಪ್ ಸ್ಟೇರಿಂಗ್ ಬಿಟ್ಟು ಕಾಫಿ ತೋಟದಲ್ಲಿ ಗುದ್ದಲಿ ಹಿಡಿದಿದ್ದರು. ಆದರೆ ಈಗ ನೀಲಕುರಂಜಿ ಅರಳಿರುವುದು ನಮ್ಮೆಲ್ಲರಲ್ಲೂ ಹೊಸ ಸಂಭ್ರಮ ತಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂದರ್ಶಕರು ಹೂವು ನೋಡಲು ಬರುತ್ತಾರೆ ಎಂಬ ವಿಶ್ವಾಸ ಮೂಡಿದೆ ಎಂದು ಭರವಸೆ ವ್ಯಕ್ತಪಡಿಸಿದವರು ಜೀಪು ಮಾಲೀಕ ಪಾಂಡೀರ ಅಯ್ಯಪ್ಪ ಶರಣ್.
ನಮ್ಮ ಜಿಲ್ಲೆಯ ನಿಸರ್ಗ ಸೌಂದರ್ಯದ ತಾಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿರುವುದು ನಿಜಕ್ಕೂ ಹೆಮ್ಮೆ. ಅಪರೂಪಕ್ಕೆ ಅರಳಿರುವ ನೀಲಕುರಂಜಿಯನ್ನು ಈಗ ನೋಡದೇ ಹೋದರೆ ಮುಂದೆ ೧೨ ವರ್ಷಗಳವರೆಗೆ ಹೂ ಅರಳಲು ಕಾಯಬೇಕಲ್ಲ ಎಂದು ಮಕ್ಕಳೊಂದಿಗೆ ಬಂದೆ. ವಿದೇಶವೂ ಬೇಡ, ಹೊರರಾಜ್ಯಗಳೂ ಬೇಡ.. ಕೊಡಗಿನಲ್ಲಿಯೇ ಮಾಂದಲಪಟ್ಟಿಯAತಹ ಅಪೂರ್ವ ತಾಣ ವೀಕ್ಷಣೆಗೆ ದೊರಕಿರುವುದು ಭಾಗ್ಯ ಎಂದು ಶನಿವಾರಸಂತೆಯ ಕಾಫಿ ಬೆಳೆಗಾರ ವಸಂತ್ ಕುಮಾರ್ ನುಡಿದರು.
ಮಾಂದಲಪಟ್ಟಿ, ಕೋಟೆಬೆಟ್ಟಗಳಲ್ಲಿ ಅರಳಿ ನಿಂತಿರುವ ಪುಷ್ಪರಾಶಿ ಕೊಡಗಿನಲ್ಲಿ ಮತ್ತೊಂದು ಹೊಸ ಅವಕಾಶದ ಬಾಗಿಲು ತೆರೆದಿದೆ. ಹೆಲಿ ಪ್ರವಾಸೋದ್ಯಮಕ್ಕೆ ನೀಲಕುರಂಜಿ ಅವಕಾಶ ಕಲ್ಪಿಸಿದೆ. ಮಾಂದಲಪಟ್ಟಿ, ಕೋಟೆಬೆಟ್ಟಗಳಲ್ಲಿ ಅರಳಿರುವ ಪುಷ್ಪರಾಶಿಯನ್ನು ಹೆಲಿರೈಡ್ ಮೂಲಕ ವೀಕ್ಷಿಸುವ ಹೊಸದೊಂದು ಪ್ರಯತ್ನ ಈಗ ನಡೆದಿದೆ. ಆದರೆ ಇದಕ್ಕೆ ಪರಿಸರಪ್ರೇಮಿಗಳಿಂದ ಆಕ್ಷೇಪ ಕೂಡ ವ್ಯಕ್ತವಾಗಿದೆ.
ಕಳೆದ ೩ ವರ್ಷಗಳ ಹಿಂದೆ ತಡಿಯಂಡಮೋಳ್ ಬೆಟ್ಟದಲ್ಲಿಯೂ ೧೨ ವರ್ಷಗಳಿಗೊಮ್ಮೆ ಅರಳುವ ನೀಲಕುರಂಜಿ ಪುಷÀ್ಪ ಕಂಗೊಳಿಸಿತ್ತು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರಚಾರ ದೊರಕದೇ ಇರುವುದು ಮತ್ತು ಬೆಟ್ಟದ ಮೇಲೆ ಚಾರಣ ಮಾಡಬೇಕಾಗಿದ್ದದ್ದು ಕೂಡ ಇಷ್ಟೊಂದು ಸಂದರ್ಶಕರನ್ನು ತಡಿಯಂಡಮೋಳ್ ಸೆಳೆಯದಿರಲು ಕಾರಣವಾಗಿತ್ತು.
ಏನೇ ಇರಲಿ. ಪ್ರಾಕೃತಿಕ ವಿಕೋಪ, ಕೋವಿಡ್ ಲಾಕ್ ಡೌನ್‌ಗಳಿಂದ ಜಡ್ಡುಗಟ್ಟಿದ್ದ ಮನಸ್ಥಿತಿ ಮತ್ತು ಆರ್ಥಿಕತೆಗೆ ಹೊಸ ಚೈತನ್ಯದಾಯಿನಿ ರೂಪದಲ್ಲಿ ನೀಲಕುರಂಜಿ ಪುಷ್ಪ ಕಾರಣವಾಗಿದೆ.
ರಸ್ತೆ ದುಸ್ಥಿತಿಯ ನಡುವೇ ಜೀಪುಗಳು ಧೂಳೆಬ್ಬಿಸುತ್ತಾ ತಂಡೋಪತAಡವಾಗಿ ಸಂದರ್ಶಕರನ್ನು ಮಾಂದಲಪಟ್ಟಿಗೆ ಕರೆದೊಯ್ಯುತ್ತಿದ್ದರೆ, ಗ್ರಾಮಸ್ಥರ ನಿಗಾದಲ್ಲಿ ಕೋಟೆಬೆಟ್ಟಕ್ಕೂ ಸಂದರ್ಶಕರು ಹೂರಾಶಿ ವೀಕ್ಷಿಸಲು ತೆರಳುತ್ತಿದ್ದಾರೆ.
ವೀಕ್‌ಎಂಡ್ ಕರ್ಫ್ಯೂವಿನಿಂದಾಗಿ ವಾರಾಂತ್ಯಗಳಲ್ಲಿ ಜನ ಹೆಚ್ಚಾಗಿ ಬರಲು ಸಾಧ್ಯವಾಗುತ್ತಿಲ್ಲ.. ಲಾಕ್‌ಡೌನ್ ಇಲ್ಲದೇ ಹೋಗಿದ್ದರೆ ಸಾವಿರಾರು ಮಂದಿ ಕೊಡಗಿನ ಹಲವೆಡೆಗಳಿಂದ ಮತ್ತು ಹೊರಜಿಲ್ಲೆಗಳಿಂದ ಹೂ ವೀಕ್ಷಿಸಲು ಬರುತ್ತಿದ್ದರು ಎಂಬ ಅಭಿಪ್ರಾಯವೂ ಸ್ಥಳೀಯ ವರ್ತಕರಿಂದ ವ್ಯಕ್ತವಾಗಿದೆ.
ಏನೇ ಇರಲಿ, ಕೊಡಗಿನ ಬೆಟ್ಟಗಳಲ್ಲಿ ಕಂಗೊಳಿಸುತ್ತಿರುವ ಹೂವುಗಳ ರಾಶಿ ಅನೇಕರ ಜೀವನಕ್ಕೆ ಚೈತನ್ಯ ನೀಡಿದ್ದು ವಿಶೇಷ, ಅನಿರೀಕ್ಷಿತ!!