ಸಾಮೂಹಿಕ ಅತ್ಯಾಚಾರ ಪ್ರಕರಣ - ಐವರ ಬಂಧನ

ಮೈಸೂರು, ಆ. ೨೮: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದಲ್ಲಿ ತಾ. ೨೪ ರಂದು ಸಂಜೆ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರು ೮೫ ಗಂಟೆಗಳಿಗೂ ಹೆಚ್ಚು ಕಾಲ ಸತತ ಕಾರ್ಯಾಚರಣೆ ನಡೆಸಿ ಶನಿವಾರ ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷಾö್ಯಧಾರಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ತಮಿಳುನಾಡಿನ ತಿರುಪುರ್ ಮೂಲದವರಾಗಿದ್ದು ಕೂಲಿ ಕಾರ್ಮಿಕರಾಗಿದ್ದು ಅವಿದ್ಯಾವಂತರು ಕೂಡ. ಚಾಲಕ, ಕಾರ್ಪೆಂಟರ್ ನಂತಹ ಕೂಲಿ ಕೆಲಸ ಮಾಡುತ್ತಿದ್ದರು. ಮೈಸೂರಿಗೆ ತರಕಾರಿ ತೆಗೆದುಕೊಂಡು ಮಂಡಿಗೆ ಬಂದು ಹೋಗುತ್ತಿದ್ದರು. ಹೀಗೆ ಮೊನ್ನೆ ಬಂದಿದ್ದವರು ಈ ಕುಕೃತ್ಯ ನಡೆಸಿದ್ದು, ಅವರಲ್ಲಿ ಬಾಲ ಆರೋಪಿ ಕೂಡ ಇದ್ದಾನೆ ಎಂದು ಮಾಹಿತಿ ನೀಡಿದರು. ಕೇಸಿನ ತ್ವರಿತ ವಿಚಾರಣೆಗೆ ನಾವು ಹೈಕೋರ್ಟ್ಗೆ ಮನವಿ ಮಾಡುತ್ತೇವೆ. ಅಗತ್ಯಬಿದ್ದರೆ ವಿಶೇಷ ಪ್ರಾಸಿಕ್ಯೂಟರ್ ನೇಮಕ ಮಾಡಿ ಸದ್ಯದಲ್ಲಿಯೇ ಆರೋಪಿಗಳನ್ನು ಜೈಲಿಗಟ್ಟುವ ಕೆಲಸ ಮಾಡುತ್ತೇವೆ. ಸಂತ್ರಸ್ತೆ ಮುಂದಿನ ದಿನಗಳಲ್ಲಿ ವಿಚಾರಣೆ ವೇಳೆ ಸಹಕಾರ ನೀಡಬಹುದು ಎಂದು ನಿರೀಕ್ಷಿಸುತ್ತೇವೆ ಎಂದು ಕೂಡ ಡಿಜಿ, ಐಜಿಪಿ ಪ್ರವೀಣ್ ಸೂದ್ ತಿಳಿಸಿದರು.