ಗೊಣಿಕೊಪ್ಪಲು ವರದಿ, ಆ. ೨೭: ಸಾಲ ಪಾವತಿಸದ ಬೆಳೆಗಾರರ ತೋಟವನ್ನು ಬೆಳೆಗಾರರ ಅನುಮತಿ - ಒಪ್ಪಿಗೆ ಇಲ್ಲದೆಯೂ ‘ಸರ್ಫೇಸಿ ಆ್ಯಕ್ಟ್’ನ ಪ್ರಕಾರ ಬ್ಯಾಂಕ್‌ಗಳು ಹರಾಜು ಮಾಡಬಹುದು ಎಂಬ ಅಂಶ ಕಳವಳಕಾರಿಯಾಗಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಎಸ್. ಬೋಜೇಗೌಡ ಅವರು ಆತಂಕ ವ್ಯಕ್ತ ಪಡಿಸಿದರು. ಈ ಅಂಶ ಬೆಳೆಗಾರರಿಗೆ ಪ್ರತಿಕೂಲವಾಗಲಿದೆ ಎಂದಿರುವ ಅವರು ಈ ಬಗ್ಗೆ ಈಗಾಗಲೇ ಹಲವು ಬೆಳೆಗಾರರಿಗೆ ನೋಟೀಸ್ ನೀಡ ಲಾಗಿದೆ ಎಂಬ ಮಾಹಿತಿ ದೊರೆತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಣಿಕೊಪ್ಪ ಕಾಫಿ ಮಂಡಳಿ ವಿಸ್ತರಣಾ ವಿಭಾಗ ಮತ್ತು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಶುಕ್ರವಾರ ಬಸವನಹಳ್ಳಿ - ಚೆನ್ನಂಗಿ ಗಿರಿಜನರಿಗೆ ಕರಿಮೆಣಸು ಸಸಿ ವಿತರಿಸಿ ಅವರು ಮಾತನಾಡಿದರು.
ಬ್ಯಾಂಕರ್ಸ್ ಇಂತಹ ಕಾನೂನನ್ನು ಬಿಟ್ಟು ಎನ್.ಡಿ.ಆರ್. ಎಫ್. ಮಾರ್ಗಸೂಚಿ ಅನುಷ್ಠಾನಕ್ಕೆ ಮುಂದಾಗಬೇಕಿದೆ ಎಂದು ಅವರು ಒತ್ತಾಯಿಸಿದರು.
(ಮೊದಲ ಪುಟದಿಂದ) ಕಾಫಿ ಬೆಳೆ ಅವಲಂಬಿತರಿಗೆ ಬ್ಯಾಂಕರ್ಸ್ ಕಿರುಕುಳ ಕೊಡುವುದನ್ನು ನಿಲ್ಲಿಸಿ ಪರಿಹಾರ ಕ್ರಮಕ್ಕೆ ಮುಂದಾಗಬೇಕು ಎಂದು ಅಧ್ಯಕ್ಷ ಎಂ.ಎಸ್. ಬೋಜೇಗೌಡ ಹೇಳಿದರು.
ಪ್ರಕೃತಿ ವಿಕೋಪ, ಕೋವಿಡ್ ಮಹಾಮಾರಿ ಸೋಂಕು ಮತ್ತು ಲಾಕ್‌ಡೌನ್‌ನಿಂದ ಸತತ ಮೂರು ವರ್ಷ ಕಾಫಿ ಬೆಳೆ ಅವಲಂಬಿತರು ತೊಂದರೆಯಲ್ಲಿ ಸಿಲುಕಿದ್ದಾರೆ. ಪರಿಹಾರಕ್ಕಾಗಿ ಸಾಲ ಪಡೆದ ರೈತರಿಗೆ ಮತ್ತೆ ಮರುಸಾಲ ನೀಡಬೇಕೆಂಬ ನಿಯಮ ರೂಪಿಸಿರುವ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಯೋಜನೆಯ ಅನುಷ್ಠಾನಕ್ಕೆ ಮುಂದಾಗಬೇಕಿದೆ. ಮರು ಬೆಳೆ ಸಾಲ ನೀಡಲು ಸೂಚನೆ ಇದ್ದರೂ, ಎಲ್ಲ ಬ್ಯಾಂಕ್ ಇದಕ್ಕೆ ಸ್ಪಂದನೆ ನೀಡುತ್ತಿಲ್ಲ. ಸಾಲ ಮರುಪಾವತಿಸುವಂತೆ ಬೆಳೆಗಾರರಿಗೆ ಕಿರುಕುಳ ನೀಡುತ್ತಿದೆ. ಇದನ್ನು ನಿಲ್ಲಿಸಿ, ಪ್ರಕೃತಿ ವಿಕೋಪ, ಬರಗಾಲ, ಕೋವಿಡ್ ಸಂಕಷ್ಟದ ಪರಿಹಾರ ನೀಡಲು ಮುಂದಾಗಬೇಕಿದೆ ಎಂದರು.
ದಕ್ಷಿಣ ಭಾರತದಲ್ಲಿ ಕಾಫಿ ಬೆಳೆ ಅವಲಂಬಿತರ ಪ್ರಮಾಣ ಹೆಚ್ಚಿರುವುದನ್ನು ಮನಗಂಡು ಅವಲಂಬಿತರನ್ನು ಬೀದಿಗೆ ಬೀಳದಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಶ್ಚಿಮಘಟ್ಟ ಪ್ರದೇಶದಲ್ಲಿ ಕಾಫಿ ಬೆಳೆ, ಕಾಫಿಯೊಂದಿಗೆ ಬೆಳೆಯುವ ಮಿಶ್ರ ಬೆಳೆ ಕೂಡ ಪರಿಸರದೊಂದಿಗೆ ಉಳಿದುಕೊಂಡಿದೆ. ಶೋಷಣೆಯಿಂದ ಬ್ಯಾಂಕರ್ಸ್ ಹೊರ ಬರಬೇಕು. ಗಿರಿಜನರು ಕಾಫಿ ಬೆಳೆಯೊಂದಿಗೆ ಆರ್ಥಿಕ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಹಾಸನ ಜಿಲ್ಲೆ ಕಾಫಿ ಮಂಡಳಿ ವಿಸ್ತರಣಾ ವಿಭಾಗದ ಉಪ ನಿರ್ದೇಶಕ ಜಿ. ತಿಮ್ಮರಾಜು ಮಾತನಾಡಿ, ಬೆಳೆಗಾರ ಉತ್ಪಾದನಾ ಸಂಘಗಳ ಮೂಲಕ ಗಿರಿಜನರು ಲಾಭ ಕಂಡುಕೊಳ್ಳಲು ಯೋಜನೆ ರೂಪಿಸಿಕೊಳ್ಳಬೇಕಿದೆ. ಐರೋಪ್ಯ ದೇಶದಲ್ಲಿ ಆರೋಗ್ಯ ದೃಷ್ಠಿಯಿಂದ ಸಾವಯವ ಉತ್ಪನ್ನಕ್ಕೆ ಬೇಡಿಕೆ ವ್ಯಕ್ತಪಡಿಸುತ್ತಿದೆ. ಇದರ ಲಾಭ ಪಡೆದುಕೊಳ್ಳಲು ಗುಂಪು ರಚಿಸಿಕೊಂಡು ಮುಂದುವರಿಯಬೇಕು. ಸರ್ಕಾರ ಕೂಡ ಸಹಾಯಧನ ಅವಕಾಶ ಕಲ್ಪಿಸಿದೆ. ೩೬ ಫಲಾನುಭವಿಗಳಿಗೆ ಸಸಿ ವಿತರಣೆ ಮಾಡಲಾಯಿತು. ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಗಿರಿಜನರಿಗೆ ೪೦ ಸಾವಿರ ಬಳ್ಳಿ ಸಸಿ ವಿತರಣೆ ಮಾಡಲಾಗುತ್ತಿದ್ದು, ಇದಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಸಂಶೋಧನಾ ವಿಭಾಗದ ಜಂಟಿ ನಿರ್ದೇಶಕ ಶಿವಕುಮಾರ್ ಸ್ವಾಮಿ, ಚೆಟ್ಟಳ್ಳಿ ಉಪ ನಿರ್ದೇಶಕ ಡಾ. ಜಾರ್ಜ್ ಡೇನಿಯಲ್, ಬೆಳೆಗಾರ ರಾಜೇಗೌಡ ಇದ್ದರು.