ಮಡಿಕೇರಿ, ಆ. ೨೭: ಮಾತೃಭಾಷೆ ಉಳಿದರೆ ಮಾತ್ರ ಆಯಾ ಜನಾಂಗದ ಸಂಸ್ಕೃತಿ, ಸಂಪ್ರದಾಯ ಜೀವಂತ ವಾಗಿರುತ್ತದೆ. ಈ ನಿಟ್ಟಿನಲ್ಲಿ ಭಾಷಾಭಿಮಾನ ಮೈಗೂಡಿಸಿ ಕೊಳ್ಳುವಂತೆ ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಚಿವ ಎಸ್. ಅಂಗಾರ ಕರೆ ನೀಡಿದರು.
ನಗರದ ಗೌಡಸಮಾಜದಲ್ಲಿ ಆಯೋಜಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ದಶವರ್ಷ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರೆಭಾಷೆ ಅಕಾಡೆಮಿ ಕಳೆದ ೧೦ ವರ್ಷಗಳಿಂದ ಉತ್ತಮ ಕಾರ್ಯಚಟುವಟಿಕೆ ನಡೆಸುತ್ತಿದೆ. ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಯತ್ನದಿಂದ ಅಕಾಡೆಮಿ ಸ್ಥಾಪನೆಯಾಗಿದೆ. ಭಾಷಾಭಿವೃದ್ಧಿ, ಸಂಸ್ಕೃತಿ ಉಳಿವಿಗೆ ಅಕಾಡೆಮಿ ಕೊಂಡಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಎಲ್ಲಾ ಭಾಷೆಗಳಿಗೆ ಒಂದೆ ರೀತಿಯ ಭಾವನೆಗಳಿವೆ. ತುಳು ಭಾಷೆಗೆ ಲಿಪಿ ಇದ್ದರೂ ಕೂಡ ಭಾಷೆಯನ್ನು ಉಳಿಸಬೇಕಾದ ಪರಿಸ್ಥಿತಿ ಬಂದಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.
ಅಕಾಡೆಮಿ ಆಯೋಜಿಸುವ ಕಾರ್ಯಕ್ರಮದಿಂದ ಭಾಷೆ ಬೆಳವಣಿಗೆ, ಸಂಸ್ಕೃತಿ ಉಳಿವು ಸಾಧ್ಯ. ಸಾಹಿತ್ಯ ಚಟುವಟಿಕೆಗಳು ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಸಂಸ್ಕೃತಿ ಉಳಿವು ಅತ್ಯಂತ ಮಹತ್ವಪೂರ್ಣ ಕೆಲಸವಾಗಿದೆ ಎಂದ ಅವರು, ಟೋಕಿಯೊದಲ್ಲಿ ನಡೆದ ಒಲಂಪಿಕ್ಸ್ನಲ್ಲಿ ಭಾರತ ಹಾಕಿ ತಂಡದ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ ಕೊಡಗಿನ ಅಂಕಿತಾ ಸುರೇಶ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ)
ಸAಸ್ಕೃತಿಯನ್ನು ಗೌರವಿಸಿ - ಕೆ.ಜಿ.ಬಿ.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೊಂಬಾರನ ಜಿ. ಬೋಪಯ್ಯ ಮಾತನಾಡಿ, ಅರೆಭಾಷಿಕರು ಹಳ್ಳಿಯಿಂದ ದಿಲ್ಲಿಯ ತನಕ ಇದ್ದಾರೆ. ಅಲ್ಲಿಯೂ ಭಾಷೆ, ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವಾಗಬೇಕು. ನಮ್ಮ ತನವನ್ನು ಮರೆಯದೆ ಉಳಿಸುವ ಕೆಲಸವಾಗಬೇಕು. ಜೊತೆಗೆ ಇತರ ಜಾತಿ, ಜನಾಂಗದವರ ಸಂಸ್ಕೃತಿಯನ್ನು ಗೌರವಿಸಬೇಕು. ಅಕಾಡೆಮಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಅಕಾಡೆÀಮಿಗಳಿಗೆ ಸಮಚ್ಛಯ ಭವನ ನಿರ್ಮಾಣ ಇನ್ನೂ ಪೂರ್ಣವಾಗಿಲ್ಲ. ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವುದಾಗಿ ಹೇಳಿದ ಅವರು, ಸರಕಾರ ಅಕಾಡೆಮಿ ಚಟುವಟಿಕೆಗಳಿಗೆ ನೀಡಿದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ ಎಂದರು.
ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಾನು ಸಭಾಧ್ಯಕ್ಷನಾಗಿದ್ದೆ ಹಾಗೂ ಸರಕಾರದ ಕಾರ್ಯದರ್ಶಿಯಾಗಿದ್ದವರು ಅರೆಭಾಷಿಕರಾಗಿದ್ದರು. ನಾವು ಮೂವರು ಕೂಡ ಅರೆಭಾಷೆಯಲ್ಲಿ ಚರ್ಚಿಸುತ್ತಿದ್ದೆವು. ಇದನ್ನು ಗಮನಿಸಿದ ಹಲವರು ಇದು ಯಾವ ಭಾಷೆ ಎಂದು ಕೇಳುತ್ತಿದ್ದರು. ಭಾಷೆಯ ಬಳಕೆಯಿಂದ ಭಾಷೆಯ ಬೆಳವಣಿಗೆ ಸಾಧ್ಯ ಎಂದು ಈ ಸಂದರ್ಭ ಬೋಪಯ್ಯ ಸ್ಮರಿಸಿದರು.
ಉತ್ತಮ ಸಮಾಜ ನಿರ್ಮಾಣ ಮಾಡೋಣ : ರಂಜನ್
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಎಲ್ಲಾ ಸಮುದಾಯಗಳು ಸಮಾಜದಲ್ಲಿ ಒಂದಾಗಿರಬೇಕು. ಸಮಾಜಕ್ಕೆ ಮಾರಕವಾದ ಕೆಲಸ ಮಾಡದೆ ಪೂರಕವಾದ ಕೆಲಸ ಮಾಡಬೇಕು. ಸದೃಢ, ಆರೋಗ್ಯವಂತ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿವೆೆ. ಇದನ್ನು ಅರಿತು ಬದುಕಬೇಕು. ವಿವಿಧತೆಯಲ್ಲಿ ಏಕತೆ ಇರುವ ಭಾರತ ಒಗ್ಗಟ್ಟಾಗಿರಬೇಕು ಎಂದ ಅವರು, ೧೯೯೬ರಲ್ಲಿ ಮಡಿಕೇರಿಯಲ್ಲಿ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆ ನಿರ್ಮಿಸುವ ಸಲುವಾಗಿ ಸದನದಲ್ಲಿ ಪ್ರಶ್ನಿಸಿದ್ದೆ ಎಂದು ನೆನೆದರು.
ಕೊಡವ, ಅರೆಭಾಷೆ ನಿಗಮ ಸ್ಥಾಪನೆಯಾಗಲಿ - ವೀಣಾ
ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಅಕಾಡೆಮಿಗಳ ಸ್ಥಾಪನೆ ಬಳಿಕ ಭಾಷೆ, ಸಾಹಿತ್ಯ ಉಳಿವಿಗೆ ಆಗಬೇಕಾದ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ. ಸರಕಾರ ಅರೆಭಾಷೆ ಹಾಗೂ ಕೊಡವ ಭಾಷಾ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಈ ಮೂಲಕ ನೆಲ, ಜಲ ಸಂರಕ್ಷಣೆಗೆ ಕಾರ್ಯಕ್ರಮ ರೂಪಿಸಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸದನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದರು. ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಯುವಜನಾಂಗ ಸಂಸ್ಕೃತಿಯನ್ನು ಮರೆಯುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಜನಾಂಗವನ್ನು ಪ್ರೀತಿಸುವ ಜೊತೆಗೆ ಪೋಷಿಸುವ ಕೆಲಸವಾಗಬೇಕು ಎಂದರು.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಭಾಷಿಕರು ಒಂದಾಗಿ ಬದುಕುತ್ತಿದ್ದೇವೆ. ಗ್ರಾಮೀಣ ಸೊಗಡು ಉಳಿದರೆ ಮಾತ್ರ ಭಾಷೆ, ಸಂಸ್ಕೃತಿ ಉಳಿಯುತ್ತವೆ. ವಿದೇಶದಲ್ಲಿ ಅರೆಭಾಷೆ ಸಂಸ್ಕೃತಿ ಪರಿಚಯಿಸುವ ಕೆಲಸವಾಗಲಿ. ಅದರೊಂದಿಗೆ ಎಲ್ಲಾ ಅಕಾಡೆಮಿಗಳು ಒಂದಾಗಿ ಕಾರ್ಯಕ್ರಮ ಮಾಡಬೇಕು. ಕ್ಷÄಲ್ಲಕ ಕಾರಣಕ್ಕೆ ಒಗ್ಗಟ್ಟು ಒಡೆಯಬಾರದು ಎಂದರು.
ಅಕಾಡೆಮಿಯ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿ, ೨೦೧೧ರಲ್ಲಿ ಸ್ಥಾಪನೆಯಾದ ಅರೆಭಾಷೆ ಅಕಾಡೆಮಿ ಭಾಷೆ, ಆಚಾರ-ವಿಚಾರ ಉಳಿವಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಡಿ.ವಿ. ಸದಾನಂದಗೌಡ ಹಾಗೂ ಕೆ.ಜಿ. ಬೋಪಯ್ಯ ಅವರ ಪ್ರಯತ್ನದ ಫಲವಾಗಿ ಅಕಾಡೆಮಿ ಸ್ಥಾಪನೆಯಾಯಿತು. ಇದುವರೆಗೂ ಅಧ್ಯಕ್ಷರಾಗಿ ಕೆಲಸ ಮಾಡಿದವರು ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅಂರ್ರಾಷ್ಟಿçÃಯ ಮಟ್ಟದಲ್ಲಿ ಭಾಷೆಗೆ ಮನ್ನಣೆ ತಂದುಕೊಟ್ಟಿದ್ದಾರೆ. ನಮ್ಮ ಅವಧಿಯಲ್ಲಿ ೧೭ ಕಡೆ ಅರೆಭಾಷೆ ನಾಟಕ ಪ್ರದರ್ಶನ ಮಾಡಲಾಗಿದೆ. ಇದನ್ನು ಸಾವಿರಾರೂ ಮಂದಿ ವೀಕ್ಷಿಸಿದ್ದಾರೆ. ಪ್ರಥಮ ಬಾರಿಗೆ ಅರೆಭಾಷೆ ಯಕ್ಷಗಾನ ರೂಪಿಸಿದ ಹೆಗ್ಗಳಿಕೆ ಇದೆ. ಸಾಕ್ಷö್ಯಚಿತ್ರ, ಗಮಕ, ಸಾಹಿತ್ಯ ರಚನೆ, ರಾಗಸಂಯೋಜನೆ, ಸಂಸ್ಕೃತಿ ಉಳಿವಿಗೆ ಶಿಬಿರಗಳು ಸೇರಿದಂತೆ ನಾನಾ ಯಶಸ್ವಿ ಕಾರ್ಯಕ್ರಮ ರೂಪಿಸಿ ಇಂದಿನ ಯುವಜನಾಂಗಕ್ಕೆ ಡಿಜಿಟಲ್ ಮೂಲಕ ಹತ್ತಿರವಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಅರೆಭಾಷೆ ಡಿಜಿಟಲ್ ಪುಸ್ತಕ, ಅನಿಲ್ ಎಚ್.ಟಿ. ನಿರ್ದೇಶನದ ಕೊಡಗು ಗೌಡ ವಿದ್ಯಾಸಂಘದ ಸಾಕ್ಷö್ಯಚಿತ್ರ, ದುರ್ಗಾಕುಮಾರ್ ನಾಯರ್ಕೆರೆ ನಿರ್ದೇಶನದ ಎನ್.ಎಸ್. ದೇವಿಪ್ರಸಾದ್ ಅವರ ಸಾಕ್ಷö್ಯಚಿತ್ರ, ಪೂಜಾರೀರ ಮಾದಪ್ಪ ಅವರ ನಿರ್ದೇಶನದ ಹರಿಸೇವೆ ಸಾಕ್ಷö್ಯಚಿತ್ರ ಕೆ.ಆರ್. ಗೋಪಾಲಕೃಷ್ಣ ರಾಗ ಸಂಯೋಜನೆಯ ಅರೆಭಾಷೆ ಹಾಡುಗಳ ಸಿಡಿ, ಅಕಾಡೆಮಿಯ ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭ ವಾದ್ಯ ಪರಿಕರಗಳನ್ನು ವಾಲಗ ತಂಡಕ್ಕೆ ವಿತರಿಸಲಾಯಿತು.
ಅಂಕಿತಾ ಸುರೇಶ್ಗೆ ಸನ್ಮಾನ
ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ ಕೊಡಗಿನ ಹೊನ್ನಂಪಾಡಿ ಅಂಕಿತಾ ಸುರೇಶ್ ಅವರನ್ನು ಅರೆಭಾಷೆ ಅಕಾಡೆಮಿ ಹಾಗೂ ಫೆಡರೇಷನ್ ಆಫ್ ಗೌಡ ಸಮಾಜ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಕಿತಾ ಸುರೇಶ್, ನನ್ನನ್ನು ಗುರುತಿಸಿ ಸನ್ಮಾನಿಸಿರುವುದು ಹೆಮ್ಮೆ ತಂದಿದೆ. ಹುಟ್ಟಿದ ಜನಾಂಗವನ್ನು ಅದರ ಸಂಸ್ಕೃತಿಗೆ ಬೆಲೆ ನೀಡಬೇಕು. ಯುವಜನಾಂಗ ಸಂಸ್ಕೃತಿ ಮರೆಯುತ್ತಿರುವುದು ವಿಷಾದನೀಯ. ಜಿಲ್ಲೆಯಿಂದ ಇನ್ನೂ ಹೆಚ್ಚಿನ ಕ್ರೀಡಾಪಟುಗಳು ರಾಷ್ಟçಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು ಎಂದರು.
ಸ್ಪರ್ಧೆಯ ವಿಜೇತರು
ಅರೆಭಾಷೆ ಕವನ ರಚನೆ ಸ್ಪರ್ಧೆಯಲ್ಲಿ ಕುಡೆಕಲ್ ಮನೋಜ್ ಅವರ ‘ಹೆಸರಿಲ್ಲದ ಒಂಟಿ ಜೋಡಿ’ ಕವನಕ್ಕೆ ಪ್ರಥಮ, ವಿಶ್ವನಾಥ್ ಎಡಿಕೇರಿ ಅವರ ‘ಶುದ್ಧಾತ್ಮನ ಚಿಂತನೆ’ ಕವನಕ್ಕೆ ದ್ವಿತೀಯ, ಕುಕ್ಕನೂರು ರೇಷ್ಮ ಮನೋಜ್ ಅವರ ‘ಅವ್ವನ ಗ್ಯಾನಾದೆ’ ಕವನ ತೃತೀಯ ಬಹುಮಾನ ಪಡೆದುಕೊಂಡಿತು.
ಕಥಾ ಸ್ಪರ್ಧೆಯಲ್ಲಿ ಡಾ. ಪುನೀತ್ ರಾಘವೇಂದ್ರ ಅವರ ‘ಕಿನ್ನಿರಿ ಬೊಳ್ಳಿ ಮತ್ತೆ ತೊಟಿಗಿಲ್’ ಕಥೆ ಪ್ರಥಮ, ‘ಕತೆ ಹೇಳಂವನೆ ಕತೆ ಆಕನ’ ಎಂಬ ಕತೆಗೆ ಕಾರ್ತಿಕ್ ಪದೇಲ ದ್ವಿತೀಯ, ಮನೋಜ್ ಕುಡೆಕಲ್ ರಚನೆಯ ‘ದೇವ್ರು ಮಾಡ್ದ ನೇರಳೆ ಕಾಡ್’ ಕತೆಗೆ ತೃತೀಯ ಸ್ಥಾನ ಲಭಿಸಿತು.
ಅರೆಭಾಷೆ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಕೊಟ್ಟಕೇರಿಯನ ಲೀಲಾ ದಯಾನಂದ ಅವರ ‘ಕಡೇ ಕಾಲದ ಕಾಳಜಿ’ ಪ್ರಬಂಧ ಪ್ರಥಮ, ವಿಶ್ವನಾಥ್ ಎಡಿಕೇರಿ ರಚನೆಯ ‘ಚಾಂಪ-ಚಾAಪವ್ವ ಮತ್ತು ಪಿಳ್ಳಿಕ’ ಪ್ರಬಂಧ ದ್ವಿತೀಯ, ಕವಿತಾ ಅವರ ‘ನೋಡಿಕೆ ಹೋದುಲೆನಾ’, ಲೀಲಾ ದಾಮೋದರ್ ಅವರ ‘ರೊಟ್ಟಿ ಸುಟ್ಟಾತ್’ ಪ್ರಬಂಧ ತೃತೀಯ ಸ್ಥಾನ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಕೊಲ್ಯದ ಗಿರೀಶ್, ಪಿ.ಸಿ. ಜಯರಾಮ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್. ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಅಕಾಡೆಮಿಯ ನಿರ್ದೇಶಕರುಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಧನಂಜಯ ಅಗೋಳಿಕಜೆ, ದಂಬೆಕೋಡಿ ಎಸ್. ಆನಂದ, ಕೂಡಕಂಡಿ ದಯಾನಂದ, ಎ.ಟಿ. ಕುಸುಮಾಧರ, ವಿಶ್ವನಾಥ ಬದಿಕಾನ, ಪುರುಷೋತ್ತಮ ಕಿರ್ಲಾಯ, ಜಯಪ್ರಕಾಶ್ ಮೋಂಟಡ್ಕ ಬಿಳಿನೆಲೆ, ಡಾ. ಪುರುಷೋತ್ತಮ, ಕಿರಣ್ ಕುಂಬಳಚೇರಿ, ಭರತೇಶ್ ಅಲಸಂಡೆಮಜಲು ಹಾಜರಿದ್ದರು.
ಕೆ.ಆರ್. ಗೋಪಾಲಕೃಷ್ಣ ಪ್ರಾರ್ಥಿಸಿ, ಕೂಡಕಂಡಿ ಡಾ. ದಯಾನಂದ್ ಸ್ವಾಗತಿಸಿ, ಧನಂಜಯ ಅಗೋಳಿಕಜೆ ನಿರೂಪಿಸಿ, ರಿಜಿಸ್ಟಾçರ್ ಚಿನ್ನಸ್ವಾಮಿ ವಂದಿಸಿದರು.