ಕೂಡಿಗೆ, ಆ. ೨೧: ಕಳೆದ ಆರು ತಿಂಗಳುಗಳಿAದ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಪಾಠಗಳನ್ನು ಕೇಳಲು ಮೊಬೈಲ್ ಬಳಕೆ ಮಾಡಿದರೂ ಸಿದ್ಧಲಿಂಗಪುರ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ಈ ಭಾಗದ ವಿದ್ಯಾರ್ಥಿಗಳು ಪಾಠ ಪ್ರವಚನದಿಂದಾಗಿ ವಂಚಿತರಾಗುತ್ತಿದ್ದಾರೆ.
ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಲಿಂಗಪುರ, ಅಳುವಾರ, ಆರನೇ ಹೊಸಕೋಟೆ, ಭೈರಪ್ಪನಗುಡಿ, ದೊಡ್ಡ ಅಳುವಾರ ಸೇರಿದಂತೆ ೮ ಉಪ ಗ್ರಾಮಗಳ ವಿದ್ಯಾರ್ಥಿಗಳಿಗೆ ಸಮೀಪ ಕುಶಾಲನಗರ ಸೇರಿದಂತೆ ವಿವಿಧ ನಗರ ಪ್ರದೇಶದಲ್ಲಿ ವ್ಯಾಸಂಗ ಮಾಡಲು ಶಾಲಾ-ಕಾಲೇಜುಗಳಿಗೆ ಸೇರಿಕೊಂಡಿರುತ್ತಾರೆ. ಇದೀಗ ಆನ್ಲೈನ್ ಮೂಲಕ ತರಗತಿಗಳು ನಡೆಯುತ್ತಿದ್ದು, ನೆಟ್ವರ್ಕ್ ವ್ಯವಸ್ಥೆ ಇಲ್ಲದೆ ಮಕ್ಕಳ ಆನ್ಲೈನ್ ತರಗತಿ ಇಲ್ಲದಾಗಿದೆ.
ತಮ್ಮ ಮಕ್ಕಳ ಆನ್ಲೈನ್ ತರಗತಿಯು ಆರಂಭವಾಗುವ ಸಮಯದಲ್ಲಿ ಸಮೀಪದ ಹೆಬ್ಬಾಲೆ ಅಥವಾ ಕೂಡಿಗೆ ಭಾಗಗಳಿಗೆ ಕರೆದುಕೊಂಡು ಬಂದು ಆನ್ಲೈನ್ ತರಗತಿಯ ಪಾಠಗಳನ್ನು ಕೇಳುವಂತಹ ಪ್ರಸಂಗ ಎದುರಾಗಿದೆ. ಇದರಿಂದಾಗಿ ಈ ವ್ಯಾಪ್ತಿಯ ನಾಲ್ಕು ಗ್ರಾಮಗಳ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ. ಸಂಬAಧಿಸಿದ ಇಲಾಖೆಯವರು ಗಮನ ಹರಿಸಲು ಪೋಷಕರು ಆಗ್ರಹಿಸಿದ್ದು, ತಪ್ಪಿದ್ದಲ್ಲಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.