ಗೋಣಿಕೊಪ್ಪಲು, ಆ. ೨೨: ಕಿರುಗೂರು ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಪ್ರತ್ಯೇಕವಾಗಿ ರೈತರ ಸಾಕು ನಾಯಿಗಳನ್ನು ತಿಂದು ಹಾಕುತ್ತಿವೆ.ಅಲ್ಲದೇ ಇದರಿಂದಾಗಿ ಗ್ರಾಮದ ಜನತೆ ಭಯಭೀತರಾಗಿದ್ದಾರೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ರೈತ ಸಂಘ ಆಗ್ರಹಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್ ಮುಂದಾಳತ್ವದಲ್ಲಿ ಕಿರುಗೂರು ಭಾಗದ ರೈತರು ಹಾಗೂ ರೈತ ಸಂಘದ ಮುಖಂಡರು ಪೊನ್ನಂಪೇಟೆ ವಲಯ ಅರಣ್ಯಧಿಕಾರಿಗಳಾದ ರಾಜಪ್ಪ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದರು.

ಈ ಭಾಗದಲ್ಲಿ ನಿರಂತರ ವನ್ಯ ಪ್ರಾಣಿಗಳ ಹಾವಳಿಯಿಂದ ರೈತರು ಕಂಗೆಟ್ಟಿದ್ದಾರೆ. ಭತ್ತದ ಕೃಷಿ ಮಾಡಿದ್ದು ಕಾಡಾನೆಗಳ ದಾಳಿಯ ಆತಂಕ ಎದುರಾಗಿವೆ. ಅಲ್ಲದೇ ಚಿರತೆಗಳ ಓಡಾಟ ನಾಗರಿಕರನ್ನು ಚಿಂತೆಗೀಡು ಮಾಡಿದೆ. ಗ್ರಾಮದಲ್ಲಿ ನೆಲೆಸಿರುವ ಚಿರತೆಯನ್ನು ಶೀಘ್ರವೇ ಸೆರೆ ಹಿಡಿಯಲು ಒತ್ತಾಯ ಮಾಡಲಾಯಿತು.

ಸಾಕು ನಾಯಿ ವನ್ಯಜೀವಿ ದಾಳಿಯಿಂದ ಮೃತಪಟ್ಟಲ್ಲಿ ಅದಕ್ಕೂ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರಕ್ಕೆ ಇಲಾಖೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದರು. ರೈತ ಸಂಘದ ಬೇಡಿಕೆಯನ್ನು ಅರಣ್ಯ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಲುಪಿಸುವ ಭರವಸೆಯನ್ನು ಆರ್.ಎಪ್.ಓ. ರಾಜಪ್ಪ ತಿಳಿಸಿದರು.

ರೈತ ಸಂಘದ ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ಕಿರುಗೂರು ಅಧ್ಯಕ್ಷ ಗಾಡಂಗಡ ಸುರೇಶ್, ಹರೀಶ್, ಕೊಕ್ಕೆಂಗಡ ಹರೀಶ್, ರಮೇಶ್, ಮುತ್ತಣ್ಣಿ, ಚಪ್ಪುಡೀರ ಬೋಪಣ್ಣ, ತೀತರಮಾಡ ರಾಜ ಮುಂತಾದವರು ಉಪಸ್ಥಿತರಿದ್ದರು.