ಸೋಮವಾರಪೇಟೆ, ಆ. ೨೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮೀಪದ ಬೇಳೂರು ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ ಕಾರ್ಯಕ್ರಮ, ಕೇಳುಗರನ್ನು ಭಾವನಾ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಯಿತು.
ಹಲವಷ್ಟು ಕವಿಗಳು ಸಾಮಾಜಿಕ ಅಸಮಾನತೆ, ಕೊರೊನಾ ಸಂಕಷ್ಟ, ಜೀವನದ ಜಂಜಾಟ, ರಾಜಕಾರಣದ ಬಗ್ಗೆ ತಮ್ಮ ಭಾವನೆಗಳನ್ನು ಕವನದ ಮೂಲಕ ಹಿಡಿದಿಟ್ಟರು.
ಅಶ್ವಿನಿ ಕೃಷ್ಣಕಾಂತ್ ಅವರು ತಮ್ಮ ಕವನ 'ಸಹಬಾಳ್ವೆ'ಯಲ್ಲಿ ಬಿಗುಮಾನ ಬದಿಗಿಟ್ಟು ಮನುಜರಾಗಿ ಬಾಳೋಣ ಎಂದು ಮನವಿ ಮಾಡಿದರು. ಎನ್.ಕೆ. ಮಾಲಾದೇವಿ ಅವರು ತಮ್ಮ 'ಜಗದೊಡೆಯ' ಕವನದಲ್ಲಿ ಸೂರ್ಯನ ಪಥ-ಜಗದಲ್ಲಾಗುವ ಬದಲಾವಣೆ, ಉರಿಬಿಸಿಲು, ಸಂಜೆಯ ತಂಗಾಳಿ ತಂಪಿನ ಬಗ್ಗೆ ಬೆಳಕು ಚೆಲ್ಲಿದರು.
ಹೆಚ್.ಎಸ್. ರಾಜೇಶ್ ತನ್ನ 'ಈ ಪುಟ್ಟ ಮಗು' ಕವನದಲ್ಲಿ ಮಗುವಿನ ಮುಗ್ಧತೆ, ಬೆಳವಣಿಗೆ, ಭವಿಷ್ಯಗಳ ಬಗ್ಗೆ ವಾಚಿಸಿದರು. ಸುಶೀಲ ಹಾನಗಲ್ ಅವರು ತಮ್ಮ 'ಮಾನವೀಯ ಮೌಲ್ಯಗಳು' ಕವನದಲ್ಲಿ ನಾನು ನನ್ನದೆಂಬ ಅಹಂಕಾರದಲ್ಲಿ ಮೆರೆಯುವ ಮನುಜನ ಬಗ್ಗೆ ಸಾತ್ವಿಕ ಕೋಪ ಹೊರಹಾಕಿದರಲ್ಲದೆ, ಕೊರೊನಾದಿಂದ ಮರಣ ಸಂಭವಿಸಿ ದಾಗ ಯಾರೂ ಇರಲಿಲ್ಲ ಎಂಬ ಸತ್ಯವನ್ನು ಬಹಿರಂಗ ಪಡಿಸಿದರು.
ದೀಪಿಕಾ ಸುದರ್ಶನ್ ಅವರು ತಮ್ಮ 'ಒಂದು ಕ್ಷಣ' ಕವನದಲ್ಲಿ ತಮ್ಮ ಬದುಕಿನಲ್ಲಾದ ಆಘಾತ, ಅದರಿಂದ ಹೊರಬಂದ ಪರಿಯನ್ನು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ನಡೆಸಿದರು. ಮರುಜನ್ಮ ಪಡೆದ ಬಗ್ಗೆ ಕವನ ವಾಚಿಸುತ್ತಿದ್ದಂತೆ ಸಭಿಕರು ಮೌನಿಯಾಗಿದ್ದರು.
ಸಿ.ಪಿ. ವಿಶ್ವಾಸ್ ಅವರು 'ಮಾವುತಿಯ ಮೂಗುತಿ' ಎಂಬ ಕವನ ವಾಚಿಸಿದರು. ಶರ್ಮಿಳಾ ರಮೇಶ್ ಅವರು ತಮ್ಮ ಕವನದಲ್ಲಿ ಕೊರೊನಾ ಸಾಂಕ್ರಾಮಿಕ ವೈರಸ್ನಿಂದಾದ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದರಲ್ಲದೆ, ಈ ಕೊರೊನಾ ಭೂತಕ್ಕೆ ಕೊನೆ ಯಾವಾಗ ಎಂದು ಪ್ರಶ್ನಿಸಿದರು. ವಿದ್ಯಾರ್ಥಿನಿ ಗಾಯಿತ್ರಿ ತನ್ನ ಕವನ 'ಪರದೆ ಹಿಂದಿನ ನವಿಲಿನ ನಾಟ್ಯ'ದಲ್ಲಿ ಮಗುವಿನ ಜೀವನ, ಮುಗ್ಧತೆಗಳನ್ನು ಹಿಡಿದಿಟ್ಟಳು. ಅನಿತಾ ಶುಭಾಕರ್ ಅವರು ವರ್ತಮಾನದ ತಲ್ಲಣಗಳು' ಕವನದಲ್ಲಿ ಸಾಮಾಜಿಕ ಅಸಮಾನತೆಯ ಬಗ್ಗೆ ಕಡುಕೋಪ ವ್ಯಕ್ತಪಡಿಸಿದರು.
ಜಲಾ ಕಾಳಪ್ಪ ಅವರು ಹಬ್ಬದ ಅವಾಂತರ, ಕೆ.ಎಂ. ತಿಮ್ಮಯ್ಯ ಅವರು ‘ನೆನಪುಗಳು' ಕವನ ವಾಚಿಸಿದರು. ಜಲಜಾ ಶೇಖರ್ ಅವರು 'ಸದನ ಕದನ' ಕವನದಲ್ಲಿ ರಾಜಕೀಯ, ಚುನಾವಣೆ, ನಂತರದ ತಿರಸ್ಕಾರದ ಬಗ್ಗೆ ಮೊನಚು ಮಾತುಗಳಲ್ಲಿ ತಿವಿದರು. ರಾಚು ಶ್ಯಾಂ ಅವರು ಬಣ್ಣದ ಹಕ್ಕಿ ಹಾಗೂ ಪುಟ್ಟಣ್ಣ ಆಚಾರ್ಯ ಅವರು ತೊಗಲು ಗೊಂಬೆಗಳು ಕವನದಲ್ಲಿ ಮನುಜನ ಗೋಸುಂಬೆತನ, ಒಣ ಪ್ರತಿಷ್ಠೆಯ ಬಗ್ಗೆ ಖಂಡನೆ ವ್ಯಕ್ತಪಡಿಸಿದರು. ನ.ಲ.ವಿಜಯ ಅವರು ‘ಭ್ರಷ್ಟರು ಅಧಿಕಾರ ಹಿಡಿಯಲು ಬರುತ್ತಿದ್ದಾರೆ ದಾರಿ ಬಿಡಿ' ಎಂಬ ಕವನದಲ್ಲಿ ಭ್ರಷ್ಟ ರಾಜಕಾರಣಿ-ಅಧಿಕಾರಿಗಳ ಬಣ್ಣ ಬಯಲು ಮಾಡಿದರಲ್ಲದೆ, ಮತದಾರರ ಹಣೆಬರಹವನ್ನು ಮೂದಲಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಪಿ. ಸುದರ್ಶನ್ ಅವರು, ಎಲೆಮರೆಯಂತಿರುವ ಎಳೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕು. ಸಾಹಿತ್ಯ ಎಲ್ಲರ ಜೀವಾಳವಾಗಬೇಕು ಎಂದು ಆಶಿಸಿದರು.
ಕವಿಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಕವಿಗಳು ಕರುಳಿನ ಭಾಷೆಯಲ್ಲಿ ಮಾತನಾಡುತ್ತಾರೆ. ಇವರಲ್ಲಿ ನಿರಂತರ ಚಿಂತನೆ ಇರುತ್ತದೆ. ಕವಿ ಮನಸ್ಸುಗಳಿಗೆ ಇಡೀ ಸಮಾಜವನ್ನೇ ಬದಲಿಸುವ ಶಕ್ತಿಯಿದೆ. ಆಸಕ್ತಿಯಿದ್ದರೆ ಮಾತ್ರ ಕವಿಗಳು ರೂಪುಗೊಳ್ಳುತ್ತಾರೆ ಎಂದು ಅಭಿಪ್ರಾಯಿಸಿದರು.
ಉದ್ಟಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಹೆಚ್.ಜೆ. ಜವರ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್, ಕಸಾಪ ಮಾಜಿ ಅಧ್ಯಕ್ಷ ಜೆ.ಸಿ. ಶೇಖರ್, ಖಜಾಂಚಿ ಎ.ಪಿ. ವೀರರಾಜು, ಪ್ರಮುಖರಾದ ಶ್ರೀಕಂಠ ಅವರುಗಳು ಉಪಸ್ಥಿತರಿದ್ದರು.
ಕಸಾಪ ಪದಾಧಿಕಾರಿಗಳಾದ ಶರ್ಮಿಳಾ, ಪ್ರೇಮಾ, ಡಿ.ಪಿ. ಲೋಕೇಶ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.