ಮಡಿಕೇರಿ, ಆ. ೨೧: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿರುವ ಸೋಮವಾರಪೇಟೆ ಮಂಡಲ ಬಿಜೆಪಿ ಎಸ್ಸಿ ಮೋರ್ಚಾ ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋರ್ಚಾದ ಅಧ್ಯಕ್ಷ ರಾಮಕೃಷ್ಣ, ಅಪ್ಪಚ್ಚುರಂಜನ್ ಅನುಭವಿ ಶಾಸಕರಾಗಿದ್ದು, ಎಲ್ಲಾ ವರ್ಗದ ಜನರಿಗೂ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಇಲ್ಲವಾದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು.
ಕಾಂಗ್ರೆಸ್ ಸರ್ಕಾರವಿದ್ದಾಗ ಕೊಡಗಿಗೆ ಮೂರು ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಬಿಜೆಪಿ ಒಂದು ಸಚಿವ ಸ್ಥಾನವನ್ನೂ ನೀಡದಿರುವುದು ವಿಷಾದನೀಯ ಎಂದರಲ್ಲದೆ ಸೇನೆಗೆ ತನ್ನದೆ ಆದ ಕೊಡುಗೆ ನೀಡಿರುವ ಕೊಡಗಿಗೆ ಸಚಿವ ಸ್ಥಾನ ಸಿಗುವಂತಾಗಬೇಕೆAದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್, ನಂದಕುಮಾರ್, ಉಪಾಧ್ಯಕ್ಷ ಹೆಚ್.ಡಿ. ಗಣೇಶ್, ಕಾರ್ಯದರ್ಶಿ ಜಿ.ಸಿ. ಯೋಗೇಶ್ ಉಪಸ್ಥಿತರಿದ್ದರು.