ಸೋಮವಾರಪೇಟೆ, ಆ.೨೨: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಪಟ್ಟಣ ಪಂಚಾಯಿತಿ ಎಂಬ ಖ್ಯಾತಿಗೆ ಭಾಜನವಾಗಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿ; ಬಾಡಿಗೆ ಸಂಗ್ರಹ ವಿಷಯದಲ್ಲಿ ಮಾತ್ರ ಅಪಖ್ಯಾತಿಗೆ ಅಂಟಿಕೊAಡಿದೆ! ಪ.ಪಂ.ನಿAದ ನೀಡಿರುವ ಅಂಗಡಿ ಮಳಿಗೆಗಳ ಬಾಡಿಗೆ ಕಳೆದ ಮಾರ್ಚ್ ಅಂತ್ಯಕ್ಕೆ ಬರೋಬ್ಬರಿ ೨೨,೯೧,೨೬೮ ರೂಪಾಯಿ ಉಳಿಕೆಯಾಗಿದೆ. ಇದರೊಂದಿಗೆ ಮನೆ, ನೀರು ಸೇರಿದಂತೆ ಇತರ ತೆರಿಗೆಗಳೂ ಸಹ ೨೦ ಲಕ್ಷಕ್ಕೂ ಅಧಿಕ ಬಾಕಿಯಿದ್ದು, ಪಂಚಾಯಿತಿಯ ಅಭಿವೃದ್ಧಿಗೆ ತೊಡಕಾಗಿದೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ವಾಣಿಜ್ಯ ಮಳಿಗೆಗಳು ನಿರ್ಮಾಣಗೊಂಡಿವೆ. ಜಿಲ್ಲೆಯ ಕುಶಾಲನಗರ ಹಾಗೂ ವೀರಾಜಪೇಟೆಗೆ ಹೋಲಿಸಿದರೆ ಹೆಚ್ಚಿನ ವಾಣಿಜ್ಯ ಸಂಕೀರ್ಣಗಳು ಸೋಮವಾರಪೇಟೆ ಪ.ಪಂ. ಒಳಗೊಂಡಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಗಳಿಸುವಲ್ಲಿ ಪಂಚಾಯಿತಿ ವಿಫಲತೆ ಕಾಣುತ್ತಿದೆ.
ಇಲ್ಲಿನ ಕ್ಲಬ್ ರಸ್ತೆಯಲ್ಲಿ ೧೨ನೇ ಹಣಕಾಸು ಯೋಜನೆಯಡಿ ಒಟ್ಟು ೨೩ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ಕೊಡಲಾಗಿದ್ದು, ಇದರಲ್ಲಿ ೨,೮೧,೪೩೩ ರೂಪಾಯಿ ಬಾಡಿಗೆ ಸಂಗ್ರಹಕ್ಕೆ ಬಾಕಿ ಇದೆ. ಪಟ್ಟಣದ ಜೇಸೀ ವೇದಿಕೆ ಮತ್ತು ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಎಸ್ಎಫ್ಸಿ ಅನುದಾನದಡಿ ೨೮ ಮಳಿಗೆಗಳನ್ನು ನಿರ್ಮಿಸಿದ್ದು, ಇದರಲ್ಲಿ ೨,೯೯,೩೦೩ ರೂಪಾಯಿ ಬಾಡಿಗೆ ಸಂಗ್ರಹವಾಗಬೇಕಿದೆ.
ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ಮುನ್ಸಿಪಲ್ ಫಂಡ್ನಿAದ ೧೮ ಮಳಿಗೆಗಳನ್ನು ಬಾಡಿಗೆ ನೀಡಲಾಗಿದ್ದು, ೫,೬೫,೭೩೧ ರೂಪಾಯಿ ವಸೂಲಾಗಬೇಕಿದೆ. ಎಸ್ಎಫ್ಸಿ ಅನುದಾನದಡಿ ಪುಷ್ಪಗಿರಿ ಕಾಂಪ್ಲೆಕ್ಸ್ನಲ್ಲಿ ೧೮ ಮಳಿಗೆಗಳನ್ನು ಬಾಡಿಗೆ ನೀಡಿದ್ದು, ಇದರಲ್ಲಿ ೨,೪೮,೯೧೧ ರೂಪಾಯಿ ಬಾಡಿಗೆ ಬಾಕಿಯಾಗಿದೆ.
ಕಾವೇರಿ ಕಾಂಪ್ಲೆಕ್ಸ್ನಲ್ಲಿ ಎಸ್ಎಫ್ಸಿ ಅನುದಾನದಡಿ ಒಟ್ಟು ೨೪ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗಿದ್ದು, ಇದರಲ್ಲಿ ೨,೦೮,೦೮೯ ರೂಪಾಯಿ ಬಾಡಿಗೆ ಪಾವತಿಗೆ ಉಳಿದಿದೆ. ಸಿ.ಕೆ. ಸುಬ್ಬಯ್ಯ ರಸ್ತೆಯ ನೂತನ ವಾಣಿಜ್ಯ ಸಂಕೀರ್ಣದಲ್ಲಿ ೯ ಮಳಿಗೆಗಳಿದ್ದು, ಇದರಲ್ಲಿ ೩,೮೭,೮೦೧ ಬಾಡಿಗೆ ಬಾಕಿಯಿದೆ.
(ಮೊದಲ ಪುಟದಿಂದ) ಒಟ್ಟಾರೆ ಮಾರ್ಚ್ ಅಂತ್ಯಕ್ಕೆ ಪಟ್ಟಣ ಪಂಚಾಯಿತಿಗೆ ೨೨,೯೧,೨೬೮ ರೂಪಾಯಿಯಷ್ಟು ಬಾಡಿಗೆ ಪಾವತಿಯಾಗಬೇಕಿದ್ದು, ನಿರೀಕ್ಷಿತ ಮಟ್ಟದಲ್ಲಿ ಬಾಡಿಗೆ ಪಾವತಿಯಾಗುತ್ತಿಲ್ಲ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. ಕೊರೊನಾ ಲಾಕ್ಡೌನ್ನಿಂದಾಗಿ ಕೆಲ ತಿಂಗಳುಗಳ ಕಾಲ ವ್ಯಾಪಾರ ವಹಿವಾಟು ನಡೆದಿಲ್ಲ. ಮುಂದಿನ ದಿನಗಳಲ್ಲಿ ಪಾವತಿಸುತ್ತೇವೆ ಎಂಬ ಸಬೂಬು ಕೆಲ ವರ್ತಕರಿಂದ ಕೇಳಿಬರುತ್ತಿದೆ.
ಲಾಕ್ಡೌನ್ ಸಂದರ್ಭವೂ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳು ನಿಗದಿತ ಸಮಯದಲ್ಲಿ ತೆರೆದು ವ್ಯಾಪಾರ ವಹಿವಾಟು ನಡೆಸಿದ್ದವು. ಈ ಅಂಗಡಿಗಳ ಬಾಡಿಗೆಯೂ ಬಾಕಿಯಾಗಿದೆ. ಕೆಲವರು ಐದಾರು ತಿಂಗಳಿನಿAದ ಬಾಡಿಗೆ ಉಳಿಸಿಕೊಂಡಿದ್ದರೆ, ಇನ್ನು ಕೆಲವರು ವರ್ಷಗಟ್ಟಲೆ ಬಾಡಿಗೆಯನ್ನೇ ಪಾವತಿಸದಿರುವುದು ಕಂಡುಬAದಿದೆ.
ಕ್ಲಬ್ ರಸ್ತೆಯ ೨೩ ಮಳಿಗೆಗಳ ಪೈಕಿ ೧೧ ಮಳಿಗೆಗಳು ಈವರೆಗೆ ಬಾಡಿಗೆ ಪಾವತಿಸಿವೆ. ಬಹುತೇಕ ಮಳಿಗೆಗಳನ್ನು ಮಾಸಿಕ ಬಾಡಿಗೆ ರೂ.೨೪೨೦ಕ್ಕೆ ನೀಡಲಾಗಿದೆ. ಇದರಲ್ಲಿ ಒಂದು ಮಳಿಗೆಯನ್ನು ಮಾಸಿಕ ಬಾಡಿಗೆ ೭೫೦ ನಿಗದಿ ಪಡಿಸಿದ್ದು, ಇದರ ಬಾಡಿಗೆ ೧೯೫೭೫ ರೂಪಾಯಿ ಉಳಿಕೆಯಾಗಿದೆ!
ಈ ವಾಣಿಜ್ಯ ಸಂಕೀರ್ಣದಲ್ಲಿ ಒಂದು ಮಳಿಗೆ ಅತೀ ಹೆಚ್ಚು ಅಂದರೆ ೬೧,೨೩೬ ರೂಪಾಯಿ ಬಾಡಿಗೆ ಉಳಿಸಿಕೊಂಡಿದೆ. ಜೇಸೀ ವೇದಿಕೆ ಮುಂಭಾಗ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಒಟ್ಟು ೨೯ ಮಳಿಗೆಗಳ ಪೈಕಿ ೧೩ ಅಂಗಡಿಗಳು ಬಾಡಿಗೆ ಪಾವತಿಸಿವೆ. ಉಳಿದ ೧೬ ಮಳಿಗೆಗಳು ನಿಗದಿತ ಸಮಯದಲ್ಲಿ ಬಾಡಿಗೆ ಪಾವತಿಸಿಲ್ಲ. ಇದರಲ್ಲಿ ಒಂದು ಮಳಿಗೆ ಬರೋಬ್ಬರಿ ೭೮,೭೬೪ ರೂಪಾಯಿ ಬಾಡಿಗೆ ಉಳಿಸಿಕೊಂಡಿದೆ.
ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ೧೮ ಮಳಿಗೆಗಳ ಪೈಕಿ ೩ ಮಳಿಗೆಗಳನ್ನು ಹೊರತುಪಡಿಸಿದರೆ ಉಳಿದ ೧೫ ಮಳಿಗೆಗಳೂ ಬಾಡಿಗೆ ಉಳಿಸಿಕೊಂಡಿವೆ. ಇದರಲ್ಲಿ ಒಂದು ಮಳಿಗೆ ೧ಲಕ್ಷಕ್ಕೂ ಅಧಿಕ ಬಾಡಿಗೆ ಪಾವತಿಸಬೇಕಿದೆ. ನಂತರದ ಸ್ಥಾನದಲ್ಲಿ ೮೫,೪೦೦ ರೂಪಾಯಿ ಉಳಿಸಿಕೊಂಡಿರುವ ಮಳಿಗೆಯಿದೆ.
ಪುಷ್ಪಗಿರಿ ವಾಣಿಜ್ಯ ಸಂಕೀರ್ಣದಲ್ಲಿ ೧೮ ಮಳಿಗೆಗಳಿದ್ದು, ೬ ಮಳಿಗೆಗಳು ಮಾತ್ರ ಬಾಡಿಗೆ ಪಾವತಿಸಿವೆ. ಕಾವೇರಿ ಕಾಂಪ್ಲೆಕ್ಸ್ನಲ್ಲಿನ ೨೪ ಮಳಿಗೆಗಳ ಪೈಕಿ ೧೨ ಮಳಿಗೆಗಳು ಬಾಡಿಗೆ ಉಳಿಸಿಕೊಂಡಿವೆ. ಸಿ.ಕೆ. ಸುಬ್ಬಯ್ಯ ರಸ್ತೆಯ ನೂತನ ವಾಣಿಜ್ಯ ಮಳಿಗೆಯಲ್ಲಿನ ೧೨ ಮಳಿಗೆಗಳ ಪೈಕಿ ೪ ಮಳಿಗೆ ಬಾಡಿಗೆ ಪಾವತಿಸಿದ್ದರೆ, ಇದರಲ್ಲಿರುವ ಮೂರು ಮಳಿಗೆಗಳು ಕ್ರಮವಾಗಿ ೧,೫೯,೬೦೦-೩,೧೪,೨೪೧-೭೭,೦೦೦ ಬಾಡಿಗೆ ಉಳಿಸಿಕೊಂಡಿವೆ.
ಮಳಿಗೆಗಳನ್ನು ಹರಾಜು ಮಾಡುವ ಸಂದರ್ಭ ಹಲವು ನಿಬಂಧನೆಗಳನ್ನು ವಿಧಿಸಿದ್ದರೂ ನಂತರದ ದಿನಗಳಲ್ಲಿ ಇವುಗಳನ್ನು ಪಟ್ಟಣ ಪಂಚಾಯಿತಿಯೇ ಗಾಳಿಗೆ ತೂರಿದ್ದರ ಪರಿಣಾಮ ಲಕ್ಷಾನುಗಟ್ಟಲೆ ಹಣ ಇಂದಿಗೂ ಬಾಕಿಯಾಗಿದೆ. ಯಾವುದೇ ಮಳಿಗೆ ೬ ತಿಂಗಳ ಕಾಲ ಬಾಡಿಗೆ ಪಾವತಿಸದಿದ್ದರೆ, ಬಾಡಿಗೆ ಕರಾರನ್ನು ರದ್ದು ಮಾಡಿ ಮಳಿಗೆಯನ್ನು ಪಂಚಾಯಿತಿ ವಶಕ್ಕೆ ಪಡೆಯುವ ಅವಕಾಶವಿದೆ.
ಆದರೆ ಪಂಚಾಯಿತಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿರುವ ಪರಿಣಾಮ ಪಂಚಾಯಿತಿಯ ಆದಾಯಕ್ಕೆ ಪೆಟ್ಟು ಬಿದ್ದಿದೆ. ೫೦ ಸಾವಿರದಿಂದ ಹಿಡಿದು ೩ ಲಕ್ಷದವರೆಗೂ ಬಾಡಿಗೆ ಪಾವತಿಸಲು ಬಾಕಿಯಿರುವ ಅಂಗಡಿಗಳ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದೇ ಪಂಚಾಯಿತಿ ಕೈಕಟ್ಟಿ ಕುಳಿತಿದೆ.
ಬಾಡಿಗೆ ಕೇಳಲು ತೆರಳಿದರೆ ಇನ್ನಿಲ್ಲದ ಸಬೂಬು ನೀಡುತ್ತಿದ್ದಾರೆ. ರಾಜಕೀಯ ಮುಖಂಡರ ಹೆಸರಿನಲ್ಲಿ ನಮ್ಮ ಬಾಯಿ ಮುಚ್ಚಿಸುತ್ತಿದ್ದಾರೆ. ಮಳಿಗೆಯಲ್ಲಿ ಶೌಚಾಲಯವಿಲ್ಲ ಅದನ್ನು ಮಾಡಿಕೊಡಿ ನಂತರ ಬಾಡಿಗೆ ಕಟ್ಟುತ್ತೇವೆ ಎಂದು ವಿಷಯಾಂತರ ಮಾಡುತ್ತಾರೆ. ಕೆಲವರು ಧಮಕಿ ಹಾಕುತ್ತಾರೆ ಎಂದು ಪಂಚಾಯಿತಿಯ ಸಿಬ್ಬಂದಿಗಳು ಸಾಮಾನ್ಯ ಸಭೆಯಲ್ಲಿ ಅಸಹಾಯಕತೆ ತೋಡಿಕೊಂಡಿದ್ದಾರೆ.
ಒಟ್ಟಾರೆ ಪಟ್ಟಣ ಪಂಚಾಯಿತಿಗೆ ಕಳೆದ ಮಾರ್ಚ್ ಅಂತ್ಯಕ್ಕೆ ೨೨ ಲಕ್ಷಕ್ಕೂ ಅಧಿಕ ಬಾಡಿಗೆ ಹಣ ಬರಲು ಬಾಕಿಯಿದೆ. ಇದರೊಂದಿಗೆ ಮನೆ ಕಂದಾಯ, ನೀರಿನ ತೆರಿಗೆಯೂ ಬಾಕಿಯಿದೆ. ಪಂಚಾಯಿತಿಗೆ ತೆರಿಗೆ/ಬಾಡಿಗೆ ರೂಪದಲ್ಲಿಯೇ ಸುಮಾರು ೪೦ ಲಕ್ಷಕ್ಕೂ ಅಧಿಕ ಹಣ ಪಾವತಿಗೆ ಬಾಕಿ ಉಳಿದಿದೆ.
ಇದನ್ನು ವಸೂಲಿ ಮಾಡಿದರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನಷ್ಟು ಮೂಲಭೂತ ಸೌಕರ್ಯ ಒದಗಿಸುವುದರೊಂದಿಗೆ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಈ ಬಗ್ಗೆ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗ ಗಮನಹರಿಸಬೇಕಿದೆ. ೬ ತಿಂಗಳಿಗಿAತಲೂ ಹೆಚ್ಚು ಬಾಡಿಗೆ ಉಳಿಸಿಕೊಂಡಿರುವ ಅಂಗಡಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕಿದೆ. - ವಿಜಯ್ ಹಾನಗಲ್