ಗೋಣಿಕೊಪ್ಪ ವರದಿ, ಆ. ೧೯: ಸ್ಥಳೀಯರ ಒತ್ತಾಯಕ್ಕೆ ಮಣಿದು ತಿತಿಮತಿಯಲ್ಲಿ ಅಪಾಯಕ್ಕೆ ಕಾರಣವಾಗಿದ್ದ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ.
ರಸ್ತೆಯ ಎರಡು ಬದಿಗಳಲ್ಲಿ ಅಗಲೀಕರಣ ಮಾಡಲಾಗುತ್ತಿದೆ. ಗುಂಡಿಗೆ ಮಣ್ಣು ಹಾಕಿ ಮುಚ್ಚಲಾಗಿದೆ. ಜೆಲ್ಲಿ ಕಲ್ಲು, ಕಲ್ಲಿನ ಪುಡಿ ಹಾಕಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇಲಾಖೆ ಸ್ಪಂದಿಸದ ಕಾರಣ, ಸೋಮವಾರ ಸ್ಥಳೀಯರು ಅಪಘಾತ ತಡೆಯಲು, ಗುಂಡಿ ಇರುವ ರಸ್ತೆಗೆ ಕೆಂಪು ಪಟ್ಟಿ ಕಟ್ಟಿ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದರು.
ವಿನಾಯಕ ನಗರದ ಎದುರು ರಸ್ತೆಯ ಇಕ್ಕೆಲ ಗುಂಡಿ ಬಿದ್ದು, ಅಪಾಯಕ್ಕೆ ಎಡೆಮಾಡಿಕೊಟ್ಟಿತ್ತು. ಈ ಬಗ್ಗೆ ಸ್ಥಳೀಯ ವಿನಾಯಕ ಸೇವಾ ಸಮಿತಿ ವತಿಯಿಂದ ಇತ್ತೀಚೆಗೆ ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆಗೆ ರಸ್ತೆ ಸರಿಪಡಿಸಿಕೊಡುವಂತೆ ಒತ್ತಾಯಿಸಿತ್ತು. ರಸ್ತೆ ದುಸ್ಥಿತಿಯಿಂದ ಈಗಾಗಲೇ ವಾಹನ ಅಪಘಾತದಲ್ಲಿ ಎರಡು ಸವಾರರು ಸಾವಿಗೀಡಾಗಿರುವುದು, ಸಾಕಷ್ಟು ದ್ವಿಚಕ್ರ ಸವಾರರು ಗುಂಡಿ ತಿಳಿಯದೆ ಬಿದ್ದು ಗಾಯಗೊಂಡಿರುವ ಬಗ್ಗೆ ಕೂಡ ಇಲಾಖೆಗಳ ಗಮನ ಸೆಳೆದಿತ್ತು. ಇದೀಗ ಸ್ಪಂದನ ದೊರೆತಿರುವುದು ಸ್ಥಳಿಯರಿಗೆ ಸಂತಸ ತಂದಿದೆ. ಸಮಿತಿಯ ಪ್ರಮುಖರಾದ ರಾಘವ ನಾಯಕ, ಪರ್ವಿಶ್, ಸತೀಶ್, ಸಿದ್ದಯ್ಯ, ಸೋಜಿಲ್ ಕಾಮಗಾರಿ ನಡೆಯುತ್ತಿರುವ ಸಂದರ್ಭ ಸ್ಥಳದಲ್ಲಿ ಭಾಗವಹಿಸಿ ಗುಣಮಟ್ಟದ ಕೆಲಸ ಮಾಡಿಸಲು ಮುತುವರ್ಜಿ ವಹಿಸಿಕೊಂಡರು.