ಸಿದ್ದಾಪುರ, ಆ ೧೯: ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಿಗಳು ಹಾಗೂ ಅರಣ್ಯ ಸಿಬ್ಬಂದಿಗಳನ್ನೇ ಕಾಫಿ ತೋಟದೊಳಗೆ ಕಾಡಾನೆಗಳು ಸುತ್ತಾಡಿಸಿ ಸುಸ್ತುಪಡಿಸಿದೆ.
ಕುಶಾಲನಗರ ವಲಯ ಮೀನುಕೊಲ್ಲಿ ಅರಣ್ಯ ವ್ಯಾಪ್ತಿಗೆ ಒಳಪಡುವ ನೆಲ್ಯಹುದಿಕೇರಿ ಅತ್ತಿಮಂಗಲ, ವಾಲ್ನೂರು, ತ್ಯಾಗತ್ತೂರು, ಅಭ್ಯತ್ಮಂಗಲ, ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಯನ್ನು ಕೈಗೊಳ್ಳಲಾಗಿತ್ತು. ಆದರೆ, ಕಾಡಾನೆಗಳು ಮಾತ್ರ ಒಂದು ಕಾಫಿ ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆಯಿಡುತ್ತಾ, ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಸುಸ್ತುಪಡಿಸಿತು.
ಇಲ್ಲಿಗೆ ಸಮೀಪದ ಅಭ್ಯತ್ ಮಂಗಲ ವ್ಯಾಪ್ತಿಯ ಅತ್ತಿಮಂಗಲ, ನೆಲ್ಯಹುದಿಕೇರಿ, ಬೆಟ್ಟದಕಾಡು, ವಾಲ್ನೂರು ಸುತ್ತಮುತ್ತ ನಿರಂತರ ವಾಗಿ ಕಾಡಾನೆಗಳು ದಾಂಧಲೆ ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಾಡಾನೆಗಳನ್ನು ಕಾಡಿಗೆ ಅಟ್ಟುವಂತೆ ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ಸಲ್ಲಿಸಿ ಅಗತ್ಯ ಕ್ರಮಕ್ಕೆ ಒತ್ತಾಯಿಸಿದ್ದರು. ಆ ಮೇರೆಗೆ ಇಂದು ಅರಣ್ಯ ಅಧಿಕಾರಿಗಳು ೧೫ ಮಂದಿ ಸಿಬ್ಬಂದಿ ಸಹಿತ ಕಾರ್ಯಾಚರಣೆ ಕೈಗೊಂಡಾಗ ನೆಲ್ಯಹುದಿಕೇರಿಯ ಮೇರಿಲ್ಯಾಂಡ್ ಕಾಫಿ ತೋಟದ ಒಳಗೆ ಒಂದೆರಡು ಒಂಟಿ ಸಲಗ ನಾಲ್ಕು ಮರಿ ಆನೆಗಳು ಸೇರಿದಂತೆ ೧೫ಕ್ಕೂ ಅಧಿಕ ಕಾಡಾನೆಗಳು ಕಣ್ಣಿಗೆ ಎದುರಾದವು. ಈ ೧೫ ಕಾಡಾನೆಗಳ ಹಿಂಡನ್ನು ತೋಟದಿಂದ ಹೊರಗಟ್ಟುವಲ್ಲಿ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು, ಈ ಗಜಪಡೆಯು ಮರಿಯಾನೆಗಳನ್ನು ಬಿಟ್ಟು ತೋಟದಿಂದ ಹೊರಗೆ ತೆರಳು ತ್ತಿಲ್ಲ ಎಂದು ಕಾರ್ಯಾ ಚರಣೆಯ ನೇತೃತ್ವ ವಹಿಸಿರುವ ಅಧಿಕಾರಿ ಕೂಡಕಂಡಿ ಸುಬ್ರಾಯ ತಿಳಿಸಿದ್ದಾರೆ.
ಗಾಳಿಯಲ್ಲಿ ಪಟಾಕಿ ಇತ್ಯಾದಿ ಶಬ್ಧಗಳಿಗೆ ಅಂಜದ ಗಜಪಡೆ ಕಾಫಿ ತೋಟಗಳ ನಡುವೆ ಮರಗಳನ್ನು ಸುತ್ತುವರೆಯುತ್ತಾ ಒಂದೆಡೆಯಿAದ ಇನ್ನೊಂದು ಕಡೆಗೆ ಓಡಾಡುತ್ತಿವೆ. ಈ ಹಿಂಡನ್ನು ಕಾಫಿ ತೋಟದಿಂದ ಕಾವೇರಿ ಹೊಳೆ ದಾಟಿಸಿ ದುಬಾರೆ ರಕ್ಷಿತಾ ತಾಣಕ್ಕೆ ಸೇರಿಸುವ ಪ್ರಯತ್ನ ಕೈಗೂಡಲಿಲ್ಲ ಎಂದು ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಸಂಜೆಗತ್ತಲ ನಡುವೆ ಸಾಕಷ್ಟು ದಣಿದಿರುವ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ಒಂದು ವೇಳೆ ಹಗಲಿಡೀ ಈ ಕಾರ್ಯಾಚರಣೆಯಿಂದ ಬಳಲಿರುವ ಕಾಡಾನೆ ಹಿಂಡು ತಾವಾಗಿಯೇ ರಾತ್ರಿ ವೇಳೆ ಅರಣ್ಯದತ್ತ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಕಾಡಾನೆಗಳು ನದಿ ದಾಟಲು ಕೂಡ ಹಿಂದೇಟು ಹಾಕುತ್ತಿದೆ ಎಂದು ತಿಳಿದು ಬಂದಿದೆ. ಕಾಡಾನೆಗಳ ಹಾವಳಿಯಿಂದ ವಾಲ್ನೂರು ತ್ಯಾಗತ್ತೂರು ಭಾಗದ ಕೃಷಿಕರು ಹಾಗೂ ಬೆಳೆಗಾರರು ಭಯಭೀತರಾಗಿದ್ದಾರೆ. ಅಲ್ಲದೇ ಕಾಡಾನೆಗಳು ಕಾರ್ಯಾಚರಣೆ ನಡೆಸಿದ್ದರೂ ಕೂಡ ಕಾಡಿನತ್ತ ತೆರಳದೇ ಅರಣ್ಯ ಇಲಾಖಾಧಿಕಾರಿ ಗಳಿಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಡಾನೆ ಹಾವಳಿ ಯನ್ನು ಶಾಶ್ವತವಾಗಿ ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎ.ಸಿ.ಎಫ್ ನೆಹರು ಹಾಗೂ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ, ರವಿ ಉತ್ನಾಲ್, ಸಿಬ್ಬಂಧಿಗಳಾದ ಸತೀಶ್, ನವೀನ್, ಪೊನ್ನಪ್ಪ, ಅಪ್ಪಸ್ವಾಮಿ, ಜಗದೀಶ್, ಹಿರಣ್, ತಿಲಕ್, ಆಸಿಫ್, ಚಾಲಕ ವಾಸು ಪಾಲ್ಗೊಂಡಿದ್ದರು.
-ವರದಿ: ವಾಸು ಎ.ಎನ್