ಮಡಿಕೇರಿ, ಆ. ೧೯: ೧೯೬೦ ರಿಂದ ೧೯೮೬ನೇ ಇಸವಿಯ ತನಕದ ಅವಧಿಯಲ್ಲಿ ಉತ್ತುಂಗದಲ್ಲಿದ್ದು, ನಂತರದ ವರ್ಷಗಳಲ್ಲಿ ನೆನೆಗುದಿಗೆ ತುತ್ತಾಗಿರುವ, ಕೊಡಗು ಸೇರಿದಂತೆ ಇತರ ಹಲವೆಡೆಯ ಸದಸ್ಯರನ್ನು ಒಳಗೊಂಡಿರುವ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘವನ್ನು (ಎಂ.ಸಿ.ಪಿ.ಸಿ.ಎಸ್) ಪುನಶ್ಚೇತನ ಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇದಕ್ಕೆ ಹಲವು ಪ್ರಯತ್ನಗಳನ್ನು ನಡೆಸಲಾಗಿದ್ದರೂ ಸೂಕ್ತ ರೀತಿಯ ಸ್ಪಂದನ ಸಿಕ್ಕಿಲ್ಲ ಎಂಬ ವಿಷಾದ ವ್ಯಕ್ತಗೊಂಡಿದೆ. ಈ ಬಗ್ಗೆ ಸಹಕಾರ ಸಚಿವರು ಹಾಗೂ ಸಹಕಾರ ಇಲಾಖೆ ಗಮನ ಹರಿಸುವದರೊಂದಿಗೆ ಸಂಘದ ಪುನಶ್ಚೇತನಕ್ಕೆ ಅಗತ್ಯ ಕ್ರಮ ವಹಿಸುವಂತೆ ರೈತ ಸದಸ್ಯರು ಒತ್ತಾಯಿಸಿದ್ದಾರೆ. ಈ ಹಿಂದೆ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘವು ಕ್ರಿಯಾಶೀಲವಾಗಿ ನಡೆದುಕೊಂಡು ಬರುತ್ತಿತ್ತು. ಸಂಘದ ಎಲ್ಲಾ ವ್ಯವಹಾರಗಳು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮೂಲಕ ನಡೆಯುತ್ತಿತ್ತು. ಆದರೆ ನಂತರದಲ್ಲಿ ಆಡಳಿತಾತ್ಮಕವಾದ ತಪ್ಪುಗಳಿಂದಾಗಿ ಈ ಸಂಘ ಕ್ರಮೇಣ ಅವನತಿಯತ್ತ ಸಾಗಿದೆ.ಈ ಸಂಘವನ್ನು ಮತ್ತೆ ಪುನಶ್ಚೇತನಗೊಳಿಸುವಂತೆ ಕೆಲವರು ಸೇರಿ ಜಿಲ್ಲೆಯವರಾದ ಮೂಕೋಂಡ ಬೋಸ್ ದೇವಯ್ಯ ಅವರ ಸಂಚಾಲಕತ್ವದಲ್ಲಿ ಹೋರಾಟ ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿಗೆ ಸಕಲೇಶಪುರ ವಿಭಾಗದಿಂದ ಐಗೂರು ಶಂಕರೇಗೌಡ ಅವರೂ ಸಂಚಾಲಕರಾಗಿದ್ದು, ಈ ಸಮಿತಿ ಹಲವಷ್ಟು ಪ್ರಯತ್ನಗಳನ್ನು ನಡೆಸುತ್ತಾ ಬಂದಿದೆ. ಆದರೂ ಇನ್ನೂ ಪರಿಪೂರ್ಣವಾದ ಯಶಸ್ಸು ದೊರೆತಿಲ್ಲ. ಇದೀಗ ಮತ್ತೊಮ್ಮೆ ಹೋರಾಟ ಸಮಿತಿಯ ಪ್ರಮುಖರು ಈ ಬಗ್ಗೆ ಸಹಕಾರ ಸಚಿವರಲ್ಲಿ ಒತ್ತಾಯ ಪೂರ್ವಕವಾದ ಮನವಿಯ ಮೂಲಕ ಸಂಘದ ಪುನಶ್ಚೇತನಕ್ಕೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಆಡಳಿತ ಸಮಿತಿ ರಚಿಸಿ
ಈ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘಕ್ಕೆ ಆಡಳಿತ ಸಮಿತಿ ರಚಿಸಿಕೊಟ್ಟಲ್ಲಿ ಸಂಘದ ದಿವಂಗತ ಮಹಾನ್ ಚೇತನಗಳ ಆತ್ಮಕ್ಕೆ ಶಾಂತಿ ದೊರೆತಂತಾಗಲಿದೆ ಎಂದು ಬೋಸ್ ದೇವಯ್ಯ ಹಾಗೂ ಐಗೂರು ಶಂಕರೇಗೌಡ ಅವರುಗಳು ಮನವಿ ಮಾಡಿದ್ದಾರೆ. ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಶತಮಾನೋತ್ಸವ ಸಂದರ್ಭದಲ್ಲಿ ಈ ಬಗ್ಗೆ ಘೋಷಣೆ ಮಾಡಿದಲ್ಲಿ ಇದು ರೈತ ಸದಸ್ಯರಿಗೆ ಬಹುದೊಡ್ಡ ಕೊಡುಗೆಯೂ ಆಗಲಿದೆ ಎಂದು ಅವರುಗಳು ಹೇಳಿದ್ದಾರೆ.
ಈ ಕುರಿತಾಗಿ ನಾವುಗಳು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಂಘದ ಆಸ್ತಿಯನ್ನು ಮಾರಾಟ ಮಾಡಕೂಡದು ಎಂದು ಮಾತ್ರ ತಡೆಯಾಜ್ಞೆ ತಂದಿರುತ್ತೇವೆ ಹಾಗೂ ಆಡಳಿತ ಸಮಿತಿಗೆ ಚುನಾವಣೆ ನಡೆಸಲು ಕೋರಲಾಗಿದೆ.
(ಮೊದಲ ಪುಟದಿಂದ) ಆಡಳಿತ ಸಮಿತಿ ರಚನೆಯ ವಿರುದ್ಧವಾಗಿ ಮೊಕದ್ದಮೆ ಹೂಡಿಲ್ಲ. ಬದಲಿಗೆ ಸಮಾಪನಾಧಿಕಾರ ರದ್ದು ಮಾಡಿ ಆಡಳಿತ ಸಮಿತಿ ರಚಿಸಿಕೊಡಿ ಎಂಬದು ಮಾತ್ರ ಬೇಡಿಕೆಯಾಗಿದೆ ಎಂದು ಅವರುಗಳು ವಿವರಿಸಿದ್ದಾರೆ.
ಹಿಂದೆ ಏನಾಗಿತ್ತು
ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಮೈಸೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಒಳಗೊಂಡAತೆ ಈ ಸಂಘ ರಚನೆಯಾಗಿತ್ತು. ಬಿಡು ಸದಸ್ಯರೊಂದಿಗೆ ಸಹಕಾರ ಸಂಘಗಳು ಇದರ ಸದಸ್ಯತ್ವ ಪಡೆದಿದ್ದವು ಮೈಸೂರಿನಲ್ಲಿ ಬೆಲೆಬಾಳುವ ಆಸ್ತಿಯನ್ನು ಸಂಘ ಹೊಂದಿದ್ದು, ಕಾರ್ಯಚಟುವಟಿಕೆ ಉತ್ತಮವಾಗಿತ್ತು. ಆದರೆ ಕಾರಣಾಂತರಗಳಿAದ ಸಂಘದ ಬೆಳವಣಿಗೆ ಕುಂಠಿತವಾಗಿದ್ದು, ಸಮಾಪನಾಧಿಕಾರಿ ನೇಮಕದೊಂದಿಗೆ ಸಂಘ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಾಗಿತ್ತಲ್ಲದೆ ಸಾಕಷ್ಟು ಆಸ್ತಿಯೂ ಮಾರಾಟಗೊಂಡಿತ್ತು. ಈ ಬೆಳವಣಿಗೆಯ ನಡುವೆ ಹೋರಾಟ ಸಮಿತಿಯನ್ನು ರಚಿಸಿ ಉಳಿದ ಆಸ್ತಿಯನ್ನು ಉಳಿಸುವದರೊಂದಿಗೆ ಸಂಘದ ಪುನಶ್ಚೇತನದ ಪ್ರಯತ್ನವನ್ನು ಈ ಸಮಿತಿ ಮೂಲಕ ಆರಂಭಿಸಲಾಗಿತ್ತು. ಆದರೆ ಈ ಹೋರಾಟಕ್ಕೆ ಇನ್ನೂ ಪೂರ್ಣ ಯಶಸ್ಸು ಲಭಿಸಿಲ್ಲ. ಸಂಘದ ಪುನಶ್ಚೇತನಕ್ಕೆ ಕ್ರಿಯಾಯೋಜನೆ ರೂಪಿಸಿ ಎರಡು ವಿಶೇಷ ಮಹಾಸಭೆಯ ಮೂಲಕವೂ ನಿರ್ಣಯ ಕೈಗೊಳ್ಳಲಾಗಿದೆ.
ಇದರ ಎಲ್ಲಾ ಪೂರ್ವಾಪರಗಳನ್ನು ಅವಲೋಕಿಸಿ ಸಂಘವನ್ನು ಮತ್ತೆ ಈ ಹಿಂದಿನAತೆ ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ಸಹಕಾರ ಸಚಿವರು ಸ್ಪಂದಿಸಬೇಕಾಗಿದೆ ಎಂದು ರೈತ ಸದಸ್ಯರು ಆಗ್ರಹಿಸಿದ್ದಾರೆ.