ಮಡಿಕೇರಿ, ಆ. ೧೯: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. ೨೦ರಂದು (ಇಂದು) ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್‌ನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಾಹಿತಿ ಕಿಗ್ಗಾಲು ಗಿರೀಶ್ ಅವರ ‘ಒಂದು ಹಳ್ಳಿಯ ಸುತ್ತ’ ಕೃತಿಯನ್ನು ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಬಿಡುಗಡೆಗೊಳಿಸಲಿದ್ದಾರೆ. ಕೃಪಾ ದೇವರಾಜ್ ಅವರ ‘ಮರ್ಮರ’ ಕೃತಿಯನ್ನು ಮಡಿಕೇರಿ ಫೀ.ಮಾ. ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ್ ಹೆಗಡೆ ಬಿಡುಗಡೆಗೊಳಿಸಲಿದ್ದಾರೆ. ಮಧ್ಯಾಹ್ನ ೨.೩೦ ಗಂಟೆಗೆ ಲಿಟಲ್ ಫ್ಲವರ್ ವಿದ್ಯಾಸಂಸ್ಥೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಕುಶಾಲನಗರ ತಾಲೂಕು ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ವೀರಾಜಪೇಟೆ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಡಾ. ಕೆ.ಎನ್. ಚಂದ್ರಶೇಖರ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್.ಜೆ. ಜವರಪ್ಪ ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ. ಅಧ್ಯಕ್ಷತೆಯನ್ನು ಬಿ.ಎಸ್. ಲೋಕೇಶ್ ಸಾಗರ್ ವಹಿಸಲಿದ್ದಾರೆ ಎಂದು ತಿಳಿಸಿದರು.

ಇದುವರೆಗಿನ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಕುರಿತಾದ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ತಾ. ೨೨ರಿಂದ ೧೬ ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಗೂಗಲ್‌ಮೀಟ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಾ. ೨೨ರ ಸಂಜೆ ೬ ಗಂಟೆಗೆ ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಅವರು ಚಾಲನೆ ನೀಡಲಿದ್ದಾರೆ. ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಕೆ.ಸಿ. ದಯಾನಂದ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ತಾ. ೨೩ರಂದು ಡಾ. ಕೆ. ಶಿವರಾಮ ಕಾರಂತ ಅವರ ಕುರಿತಾದ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿಗಳಾದ ಸುನಿತಾ, ಸ್ಮಿತಾ ಅಮೃತರಾಜ್ ಪಾಲ್ಗೊಳ್ಳಲಿದ್ದಾರೆ. ತಾ. ೨೪ರಂದು ಡಾ. ಸಿದ್ದಯ್ಯ ಪುರಾಣಿಕ್ ಅವರ ಕುರಿತಾದ ಉಪನ್ಯಾಸದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧೀಕ್ಷಕರಾದ ಎನ್.ಎಲ್. ದಯಾನಂದ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕೋರನ ಸರಸ್ವತಿ ಪ್ರಕಾಶ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ತಾ. ೨೫ರಂದು ಡಾ. ಹಾ.ಮಾ. ನಾಯಕ್ ಅವರ ಕುರಿತಾದ ಉಪನ್ಯಾಸಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಮೂರ್ನಾಡು ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್, ಫೀ.ಮಾ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶ್ರೀಧರ್ ಹೆಗಡೆ ಪಾಲ್ಗೊಳ್ಳಲಿದ್ದಾರೆ. ತಾ. ೨೬ರಂದು ವಿ.ಎಸ್. ರಾಮಕೃಷ್ಣ ಅವರ ಕುರಿತಾದ ಉಪನ್ಯಾಸಕ್ಕೆ ಶಿಕ್ಷಕರಾದ ಮಾಲಾದೇವಿ, ಮೆ.ನಾ. ವೆಂಕಟನಾಯ್ಕ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ತಾ. ೨೭ರಂದು ಜಿ.ಟಿ. ನಾರಾಯಣ ರಾವ್ ಕುರಿತಾದ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪತ್ರಕರ್ತ ಅನಿಲ್ ಎಚ್.ಟಿ., ‘ಶಕ್ತಿ’ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ ಪಾಲ್ಗೊಳ್ಳಲಿದ್ದಾರೆ. ತಾ. ೨೮ರಂದು ಎದುರ್ಕಳ ಶಂಕರನಾರಾಯಣ ಭಟ್ ಕುರಿತಾದ ಉಪನ್ಯಾಸದಲ್ಲಿ ಡಾ. ಕೆ.ಸಿ. ದಯಾನಂದ್, ಭಾಗಮಂಡಲ ಕಾವೇರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಕೆ.ಜೆ. ದಿವಾಕರ್ ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ. ತಾ. ೨೯ರಂದು ಡಾ. ಎಂ.ಜಿ. ನಾಗರಾಜ್ ಅವರ ಕುರಿತ ಉಪನ್ಯಾಸದಲ್ಲಿ ಉಪನ್ಯಾಸಕರಾದ ಈಶ, ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವ ಪಲ್ಲೇದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಾರೆ. ತಾ. ೩೦ರಂದು ಡಾ. ಪದ್ಮಶೇಖರ್ ಕುರಿತ ಉಪನ್ಯಾಸಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ನಾಪೋಕ್ಲು ಸ.ಪ್ರ.ದ ಕಾಲೇಜಿನ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್, ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ರೇಖಾ ವಸಂತ್ ಭಾಗವಹಿಸಲಿದ್ದಾರೆ. ತಾ. ೩೧ರಂದು ವೇದಬ್ರಹ್ಮ ವಿಷ್ಣುಭಟ್ ಕುರಿತ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಸಾಹಿತಿ ತೀರ್ಥ ಕುಮಾರ್ ಭಾಗವಹಿಸಲಿದ್ದಾರೆ. ಸೆ. ೧ರಂದು ಮಹಾಬಲೇಶ್ವರ ಭಟ್ ಕುರಿತಾದ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮರಗೋಡು ಭಾರತಿ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ರವಿಕೃಷ್ಣ, ಮೂರ್ನಾಡು ಪದವಿ ಕಾಲೇಜಿನ ಉಪನ್ಯಾಸಕ ಹರೀಶ್ ಕಿಗ್ಗಾಲು ಪಾಲ್ಗೊಳ್ಳಲಿದ್ದಾರೆ. ತಾ. ೨ರಂದು ಎಸ್.ಪಿ. ರಾಜಶೇಖರ್ ಅವರ ಕುರಿತಾದ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪ್ರಾಂಶುಪಾಲ ಸಿ.ಎಂ. ಪುಟ್ಟಸ್ವಾಮಿ, ಪತ್ರಕರ್ತ ವಿಜಯ್ ಹಾನಗಲ್ ಭಾಗವಹಿಸಲಿದ್ದಾರೆ. ತಾ. ೩ರಂದು ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಅವರ ಕುರಿತ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಸುಶೀಲ ಸುಬ್ರಮಣಿ, ಗೋಣಿಕೊಪ್ಪ ಕಾವೇರಿ ಕಾಲೇಜು ಉಪಸ್ಯಾಸಕಿ ಡಾ. ರೇವತಿ ಪೂವಯ್ಯ ಪಾಲ್ಗೊಳ್ಳಲಿದ್ದಾರೆ. ತಾ. ೪ರಂದು ಭಾರಧ್ವಜ ಕೆ. ಆನಂದ ತೀರ್ಥ ಅವರ ಕುರಿತ ಉಪನ್ಯಾಸದಲ್ಲಿ ಸಾಹಿತಿ ಸಂಗೀತ ರವಿರಾಜ್, ಕಲಾಶಿಕ್ಷಕ ಉ.ರ. ನಾಗೇಶ್, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ತಾ. ೫ರಂದು ವಿಜಯವಿಷ್ಣು ಭಟ್ ಕುರಿತಾದ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿ ಶರ್ಮಿಳಾ ರಮೇಶ್, ಶಿಕ್ಷಕಿ ರಾಣಿ ರವೀಂದ್ರ ಭಾಗವಹಿಸಲಿದ್ದಾರೆ. ತಾ. ೬ರಂದು ನಾಗೇಶ್ ಕಾಲೂರು ಕುರಿತಾದ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಕಾಶವಾಣಿ ಉದ್ಘೋಷಕಿ ದಿವ್ಯ ಮಂದಪ್ಪ, ಶಿಕ್ಷಕಿ ಸ್ನೇಹ ಬಸಮ್ಮ ಪಾಲ್ಗೊಳ್ಳಲಿದ್ದಾರೆ. ತಾ. ೭ರಂದು ಮಂಡೇಪAಡ ಗೀತಾ ಮಂದಣ್ಣ ಕುರಿತ ಉಪನ್ಯಾಸದಲ್ಲಿ ಶಿಕ್ಷಕಿ ತುಳಸಿ ಸುಬ್ರಮಣಿ, ಕವಿ ಕೃಪಾ ದೇವರಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಉಪನ್ಯಾಸ ಕಾರ್ಯಕ್ರಮ ಸಂಜೆ ೬ರಿಂದ ೭ ಗಂಟೆಯವರೆಗೆ ನಡೆಯಲಿದೆ ಎಂದು ಲೋಕೇಶ್ ಸಾಗರ್ ವಿವರಿಸಿದರು.

ತಾ. ೨೨ರಂದು ಸೋಮವಾರಪೇಟೆಯಲ್ಲಿ ಕವಿಗೋಷ್ಠಿ, ತಾ. ೨೩ರಂದು ಸೋಮವಾರಪೇಟೆಯಲ್ಲಿ ಇತ್ತೀಚೆಗೆ ಅಗಲಿದ ಕವಿ, ಸಾಹಿತಿಗಳಿಗೆ ನುಡಿನಮನ, ತಾ. ೨೭ರಂದು ರಾಜ್ಯ ಲೇಖಕಿಯರ ಸಂಘದ ಕೊಡಗು ಘಟಕ ಉದ್ಘಾಟನೆ ನೆರವೇರಲಿದೆ ಎಂದು ಲೋಕೇಶ್ ಸಾಗರ್ ತಿಳಿಸಿದರು.

ಗೋಷ್ಠಿಯಲ್ಲಿ ಕಸಾಪ ಕಾರ್ಯದರ್ಶಿ ಡಾ. ಕೆ.ಸಿ. ದಯಾನಂದ್, ನಿರ್ದೇಶಕರುಗಳಾದ ಧನಂಜಯ, ಉಷಾರಾಣಿ, ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಉಪಸ್ಥಿತರಿದ್ದರು.