ಗೋಣಿಕೊಪ್ಪಲು, ಆ. ೧೯: ತಾನು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮುಂದೆ ನೇಣು ಹಾಕಿಕೊಂಡು ಮೃತಪಟ್ಟ ಘಟನೆ ತಿತಿಮತಿ ಸಮೀಪದ ಮತ್ತಿಗೋಡಿನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಬಾಳೆಲೆ ಹೋಬಳಿಯ ದೇವನೂರು, ರಾಜಪುರ ಗ್ರಾಮದ ಹೆಚ್.ಆರ್. ದಿಲೀಶ್ (೨೭) ಎಂದು ತಿಳಿದು ಬಂದಿದೆ. ದಿಲೀಶ್ ಬುಧವಾರ ರಾತ್ರಿ ಪಾಳೆಯದ ಕೆಲಸ ನಿರ್ವಹಿಸಲು ಮತ್ತಿಗೋಡುವಿನಲ್ಲಿರುವ ವನ್ಯಜೀವಿ ವಿಭಾಗದ ಅರಣ್ಯ ಕಚೇರಿಗೆ ಆಗಮಿಸಿದ್ದ.

ಗುರುವಾರ ಮುಂಜಾನೆಯ ವೇಳೆ ಇತರ ಸಿಬ್ಬಂದಿಗಳು ದೈನಂದಿನ ಕೆಲಸಕ್ಕೆ ಕಚೇರಿಗೆ ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ರಾಜು, ವೀಣಾ ಎಂಬವರ ಮೊದಲನೆಯ ಪುತ್ರ ದಿಲೀಶ್ ಅವಿವಾಹಿತನಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಸೇವೆಗೆ ಸೇರಿದ್ದ. ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ವಿಶ್ವಾಸ ಗಳಿಸಿದ್ದ. ಅಧಿಕಾರಿಗಳು ನೀಡುವ ಕೆಲಸವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ. ಇದರಿಂದಾಗಿ ದಿಲೀಶ್ ಸಹಜವಾಗಿಯೇ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ.

ಸುದ್ದಿ ತಿಳಿದ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಂ, ಠಾಣಾಧಿಕಾರಿ ಸುಬ್ಬಯ್ಯ, ಎಸಿಎಫ್ ಸತೀಶ್ ಹಾಗೂ ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

(ಮೊದಲ ಪುಟದಿಂದ) ನಂತರ ಮರಣೋತ್ತರ ಪರೀಕ್ಷೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು.

ಅರಣ್ಯ ಇಲಾಖೆಯ ಇತರ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕೆಲಸವನ್ನು ನಿಲ್ಲಿಸಿ ಆಗಮಿಸಿದ್ದರು. ಸಮಾಜ ಸೇವಕ, ಮಾಜಿ ಜಿ.ಪಂ. ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಆಗಮಿಸಿ ಮೃತರ ಕುಟುಂಬದ ಕಷ್ಟಕ್ಕೆ ಸ್ಪಂದಿಸುವ ಕೆಲಸ ನಿರ್ವಹಿಸಿದರು.

ಕಚೇರಿಯಲ್ಲಿ ರಾತ್ರಿ ಪಾಳೆಯದಲ್ಲಿ ಕೆಲಸ ನಿರ್ವಹಿಸುವ ಸಂದರ್ಭ ದಿಲೀಶ್ ತನ್ನ ಕಾಲಿಗೆ ಗಂಬೂಟು ಧರಿಸಿದ್ದ. ಅಲ್ಲದೆ ಗಂಬೂಟುವಿನಲ್ಲಿ ನೀರು ತುಂಬಿದ್ದು ಕಚೇರಿಯನ್ನು ಕಾವಲು ಕಾಯುವ ವೇಳೆ ಗಂಬೂಟು ಧರಿಸಲು ಕಾರಣವೇನು? ಈತನ ವಿರೋಧಿಗಳು ಯಾರಾದರೂ ನಡುರಾತ್ರಿಯಲ್ಲಿ ಆಗಮಿಸಿ, ಈತನನ್ನು ಬೇರೆಡೆಗೆ ಕರೆದೊಯ್ದು ಕೊಲೆ ಮಾಡಿ ನಂತರ ಇಲ್ಲಿಗೆ ತಂದು ನೇಣು ಹಾಕಿದರೇ?

ರಾತ್ರಿ ತನ್ನ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಖುಷಿಯಲ್ಲಿದ್ದ ಯುವಕ ನೇಣು ಯಾಕಾಗಿ ಹಾಕಿಕೊಂಡ ಎಂಬ ಬಗ್ಗೆ ಸಂಶಯಮೂಡಿದ್ದು, ಮನೆಯವರ ದೂರಿನ ಅನ್ವಯ ಪೊಲೀಸರು ಮುಂದಿನ ತನಿಖೆ ಕೈಗೊಳ್ಳಬೇಕಾಗಿದೆ. -ಹೆಚ್.ಕೆ. ಜಗದೀಶ್