*ವೀರಾಜಪೇಟೆ, ಆ. ೧೯ : ವೀರಾಜಪೇಟೆ ಸಮೀಪವಿರುವ ಪೆರುಂಬಾಡಿಯ ಮ್ಯಾಗ್ನೋಲಿಯಾ ರೆಸಾರ್ಟಿನಲ್ಲಿ ಎರಡು ದಿನಗಳ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಒಂದು ಸಾವಿರ ಜನರಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮ ಇದಾಗಿದ್ದು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಜಿ ಬೋಪಯ್ಯ, ಮ್ಯಾಗ್ನೋಲಿಯಾ ರೆಸಾರ್ಟ್ ಹಾಗೂ ನಾರಾಯಣ ಹೃದಯಾಲಯದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಉಚಿತ ಲಸಿಕಾ ಅಭಿಯಾನ ಸಾಕಷ್ಟು ಜನರಿಗೆ ಲಸಿಕೆ ಪಡೆಯುವಲ್ಲಿ ಸಹಕಾರಿಯಾಗಿದೆ. ಲಸಿಕೆ ಕೊರತೆ ಎಲ್ಲಾ ಕಡೆಯಿದೆ. ನಿಜಕ್ಕೂ ಇದು ಒಳ್ಳೆಯ ಕೆಲಸ, ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ಲಸಿಕಾ ಅಭಿಯಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ತದನಂತರ ಮಾತನಾಡಿದ ವೀರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿ ಯತಿರಾಜ್ ಅವರು, ಒಂದು ಸಾವಿರ ಜನರಿಗೆ ಉಚಿತ ಲಸಿಕೆ ಕೊಡುವುದು ಬಹಳ ಮಹತ್ತರವಾದ ಕೆಲಸ. ಲಸಿಕಾ ಅಭಿಯಾನ ವೀರಾಜಪೇಟೆ ತಾಲೂಕಿನಲ್ಲಿ ಯಶಸ್ವಿ ಯಾಗುವುದರಲ್ಲಿ ಶಾಸಕರ ಪಾತ್ರ ಬಹಳವಿದೆ. ಪ್ರತಿ ಗ್ರಾಮಮಟ್ಟದಲ್ಲಿ ಮುತುವರ್ಜಿ ವಹಿಸಿ ಲಸಿಕೆ ಪಡೆದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿದರು.
ಬಳಿಕ ಮಾತನಾಡಿದ ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ವಿಶ್ವನಾಥ ಸಿಂಪಿ, ಮ್ಯಾಗ್ನೋಲಿಯಾ ರೆಸಾರ್ಟಿನ ಈ ಕಾರ್ಯ ಉತ್ತಮ ಕಾರ್ಯ, ಎಲ್ಲರೂ ಇದರ ಸದುಪಯೋಗ ಪಡೆದು, ಸರ್ಕಾರದ ಮಾರ್ಗಸೂಚಿಗಳನ್ವಯ ನಡೆದುಕೊಂಡರೆ ರೋಗವನ್ನು ಮತ್ತಷ್ಟು ಹತೋಟಿಗೆ ತರಬಹುದು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ, ನಾರಾಯಣ ಹೃದಯಾಲಯದ ವೈದ್ಯೆ ಪೂರ್ಣಿಮಾ, ಗ್ರಾ.ಪಂ. ಸದಸ್ಯ ಗಿರೀಶ್, ಪಿಡಿಒ ರಾಜೇಂದ್ರ, ಗ್ರಾ.ಪಂ. ಸದಸ್ಯ ನವೀನ್, ಬಿಜೆಪಿ ಮುಖಂಡರುಗಳಾದ ಜೋಕಿಂ ರೋಡ್ರಿಗಸ್, ಮಧು ದೇವಯ್ಯ, ಉದ್ಯಮಿ ಚುಪ್ಪ ನಾಗರಾಜ್ ಹಾಜರಿದ್ದರು.
ಮ್ಯಾಗ್ನೋಲಿಯಾ ರೆಸಾರ್ಟ್ ಮಾಲೀಕರುಗಳಾದ ಶ್ರೀಕಾಂತ್ ಮಂಚಾಲ ಮತ್ತು ಲಕ್ಷಿö್ಮ ಮಂಚಾಲ ದಂಪತಿ ದುಬೈನಲ್ಲಿ ನೆಲೆಸಿದ್ದು, ಉಚಿತವಾಗಿ ಸಾವಿರ ಲಸಿಕೆ ನೀಡಲು ತೀರ್ಮಾನಿಸಿರುವ ರೆಸಾರ್ಟ್ ವ್ಯವಸ್ಥಾಪಕ ಪ್ರವೀಣ್ ಉಸ್ತುವಾರಿ ಯಲ್ಲಿ ಲಸಿಕಾ ಶಿಬಿರ ನಡೆಯಿತು.