ಮಡಿಕೇರಿ ಆ.೧೮ : ನಗರದ ಐಟಿಐ ಕಾಲೇಜು ಹಿಂಭಾಗದಲ್ಲಿರುವ ಪೈಸಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಶೆಡ್‌ಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಒತ್ತಾಯಿಸಿ ನಗರಸಭಾ ಸದಸ್ಯೆ ಬಿ.ಪಿ.ಚಿತ್ರಾವತಿ ಹಾಗೂ ಸ್ಥಳೀಯ ನಿವಾಸಿಗಳು ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ನಗರಸಭಾ ಪೌರಾಯುಕ್ತರು, ತಹಶೀಲ್ದಾರರು ಹಾಗೂ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಪ್ರಮುಖರು ಶೀಘ್ರ ಶೆಡ್‌ಗಳನ್ನು ತೆರವುಗೊಳಿಸದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರದ ಐಟಿಐ ಕಾಲೇಜು ಹಿಂಭಾಗ, ಬ್ಲಾಕ್ ನಂ.೯ ರಲ್ಲಿರುವ ಪೈಸಾರಿ ಜಾಗದಲ್ಲಿ ಪ್ರಭಾವಿಯೊಬ್ಬರು ಸೇರಿದಂತೆ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಈಗಾಗಲೇ ಇದು ಆಡಳಿತ ವ್ಯವಸ್ಥೆಯ ಗಮನಕ್ಕೆ ಬಂದಿದ್ದರೂ ತೆರವು ಕಾರ್ಯಾಚರಣೆ ನಡೆದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕ ಉದ್ದೇಶಕ್ಕಾಗಿ ಜಿಲ್ಲಾಡಳಿತವೇ ಪೈಸಾರಿ ಜಾಗವನ್ನು ಬಳಸಿಕೊಳ್ಳಬೇಕೆ ಹೊರತು ಖಾಸಗಿ ವ್ಯಕ್ತಿಗಳು ವಶಕ್ಕೆ ಪಡೆಯುವಂತ್ತಿಲ್ಲ ಮತ್ತು ಅನಧಿಕೃತವಾಗಿ ಕಾಮಗಾರಿ ನಡೆಸುವಂತಿಲ್ಲ. ಆದರೂ ಯಾರದ್ದೋ ಕುಮ್ಮಕ್ಕಿನಿಂದ ಕೆಲವರು ಕಾನೂನು ಉಲ್ಲಂಘಿಸಿ ಶೆಡ್‌ಗಳನ್ನು ನಿರ್ಮಿಸಿದ್ದಾರೆ. ತಕ್ಷಣ ನಗರಸಭೆ ಎಚ್ಚೆತ್ತುಕೊಂಡು ಸರ್ಕಾರದ ಆಸ್ತಿಯನ್ನು ರಕ್ಷಿಸಿಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.