ಮಡಿಕೇರಿ, ಆ. ೧೮: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೊಡವ ಹಕ್ಕೊತ್ತಾಯಗಳ ಕುರಿತು ತಾ. ೨೦ ರಂದು (ನಾಳೆ) ಮೂರ್ನಾಡಿನ ಕಾಫಿಕ್ಯಾಸಲ್ ರೆಸಾರ್ಟ್ನಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೊಡವರ ಎಸ್‌ಟಿ ಟ್ಯಾಗ್ ಮತ್ತು ಬಂದೂಕು ವಿನಾಯಿಸಿ ಕುರಿತು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಿಎನ್‌ಸಿ ಪರವಾಗಿ ಪರಿಣಾಮಕಾರಿಯಾಗಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಲಾಗುವುದು.

೨೦೧೬ರ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ಮೂಲಕ ಕೊಡವ ತಕ್ಕನ್ನು ೮ನೇ ಶೆಡ್ಯೂಲ್‌ಗೆ ಸೇರಿಸುವ ಪ್ರಯತ್ನ ನಡೆಸಿದ್ದಲ್ಲದೆ ೨೦೧೯ರಲ್ಲಿ ಎಸ್‌ಸಿ ಎಮೆಂಡ್‌ಮೆAಟ್ ಚರ್ಚೆಯ ಸಂದರ್ಭ ಕೊಡವರನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕೆಂಬ ವಿಚಾರವನ್ನು ಸಂಸತ್‌ನಲ್ಲಿ ದಾಖಲಿಸಿದ ವಿಧಾನ ಪರಿಷತ್ ಸದಸ್ಯ, ಮಾಜಿ ರಾಜ್ಯ ಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಗೆ ಗೌರವಾರ್ಪಣೆ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್, ಕರ್ನಾಟಕ ರಾಜ್ಯ ಬುಡಕಟ್ಟು ಕುರುಬ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಲಕ್ಕವಳ್ಳಿ ಮಂಜುನಾಥ್, ಬೆಂಗಳೂರಿನ ಸೈಂಟ್ ಜೋಸೆಫ್ಸ್ ಕಾಲೇಜಿನ ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಪರದಂಡ ಈ. ಸೋಮಯ್ಯ ಪಾಲ್ಗೊಳ್ಳಲಿದ್ದಾರೆ. ವಿಚಾರ ಸಂಕಿರಣದಲ್ಲಿ ಕೊಡವಲ್ಯಾಂಡ್ ಸ್ವಾಯತ್ತತೆ ಸೇರಿದಂತೆ ಕೊಡವರ ಹಕ್ಕುಗಳ ಕುರಿತಾದ ಮಹತ್ವದ ನಿರ್ಣಯವನ್ನು ಅಂಗೀಕರಿಸ ಲಾಗುವುದು ಎಂದು ನಾಚಪ್ಪ ಮಾಹಿತಿ ನೀಡಿದರು.