ಶನಿವಾರಸಂತೆ, ಆ. ೧೭: ಸುಸ್ಥಿರ ಕೃಷಿ ಪದ್ಧತಿಯ ಭಾಗವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯವಾಗಲಿದೆ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಬೇಸಾಯ ಶಾಸ್ತçಜ್ಞ ಹಾಗೂ ಸಂಪನ್ಮೂಲ ವ್ಯಕ್ತಿ ಜಡೇಗೌಡ ಹೇಳಿದರು.

ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ನಡೆದ ೨೦೨೧-೨೨ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಸಮಗ್ರ ಕೃಷಿ ಪದ್ಧತಿ ಅಳವಡಿಕೆ, ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕ ಬಳಕೆಯ ಕುರಿತು ಮಾತನಾಡಿದರು.

ಪ್ರಸ್ತುತ ಕೊರೊನಾ ಸಂಕಷ್ಟ ಘಟ್ಟದಲ್ಲಿ ರೋಗ ನಿರೋಧಕ ಶಕ್ತಿ ಇರುವಂತಹ ಔಷಧಿಯುಕ್ತ ಗಿಡಗಳನ್ನು ಹಾಗೂ ಪೌಷ್ಠಿಕಾಂಶಯುಕ್ತ ತೋಟಗಳನ್ನು ಮನೆಯಂಗಳದಲ್ಲಿ ನಿರ್ಮಾಣ ಮಾಡುವಂತೆ ಕರೆ ನೀಡಿದರು. ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ವಿಶ್ವನಾಥ್ ಮಾತನಾಡಿ, ಮಂಡಳಿಯ ವಿವಿಧ ಯೋಜನೆಗಳು ಹಾಗೂ ಗ್ರಾಮ ಪಂಚಾಯಿತಿ ಮೂಲಕ ಎನ್.ಆರ್.ಜಿ.ಯಡಿ ಕಾಫಿಗಿಡಗಳನ್ನು ಬೆಳೆಯುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹೋಬಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಹಾನ್ ತಾಜ್ ಮಾತನಾಡಿ, ಕೃಷಿ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್. ಚಂದ್ರಶೇಖರ್, ಉಪಾಧ್ಯಕ್ಷೆ ಗೀತಾ ತ್ಯಾಗರಾಜ್, ಸದಸ್ಯರು, ಪಿಡಿಒ ಶಿಲ್ಪಾ, ಸಿಬ್ಬಂದಿ, ರೈತ ಕೇಂದ್ರದ ಸಿಬ್ಬಂದಿ ತಾರಾ, ಹರೀಶ್, ರೈತರು ಹಾಜರಿದ್ದರು. ‘ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ’ ಎಂಬ ಕಾರ್ಯಕ್ರಮದಡಿ ಕೃಷಿ ಇಲಾಖೆಯ ಯೋಜನೆಗಳೊಂದಿಗೆ ಸಮಗ್ರ ಕೃಷಿ ಪದ್ಧತಿಯನ್ನು ಪ್ರಚಾರ ವಾಹನದ ಮೂಲಕ ಹೋಬಳಿ ವ್ಯಾಪ್ತಿಯ ಬೆಸೂರು, ಬ್ಯಾಡಗೊಟ್ಟ, ಕೊಡ್ಲಿಪೇಟೆಯಲ್ಲಿ ಪ್ರಚಾರಪಡಿಸಲಾಯಿತು.