ಸೋಮವಾರಪೇಟೆ, ಆ. ೧೭: ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸಲು ಯುವ ಜೆಡಿಎಸ್ ಮುಂದಾಗಿದ್ದು, ಚುನಾವಣೆಗಳಲ್ಲಿ ಯುವ ಸಮುದಾಯಕ್ಕೆ ಶೇ.೩೦ರಷ್ಟು ಸ್ಥಾನಗಳನ್ನು ಮೀಸಲಿರಿಸುವ ಬಗ್ಗೆ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಸೋಮವಾರಪೇಟೆ ತಾಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ತ್ರಿಶೂಲ್ ಕಾರ್ಯಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾದ್ಯಂತ ಜೆಡಿಎಸ್‌ನ ಯುವ ಘಟಕಗಳಿಗೆ ಅಧ್ಯಕ್ಷರುಗಳನ್ನು ನೇಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಗ್ರಾಮ ಮಟ್ಟದಿಂದ ಬಲಪಡಿಸ ಲಾಗುವುದು. ಗ್ರಾ.ಪಂ., ಹೋಬಳಿ ಮಟ್ಟದಲ್ಲಿ ಯುವ ಜೆಡಿಎಸ್ ಘಟಕಗಳನ್ನು ರಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಯುವ ಸಮುದಾಯಕ್ಕೆ ಶೇ.೩೦ರಷ್ಟು ಸ್ಥಾನಗಳನ್ನು ಮೀಸಲಿಡುವ ಬಗ್ಗೆ ಭರವಸೆ ನೀಡಿದ್ದಾರೆ. ಇದು ಸ್ವಾಗತಾರ್ಹವಾಗಿದ್ದು, ಯುವ ಸಮುದಾಯಕ್ಕೆ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಗೋಷ್ಠಿಯಲ್ಲಿದ್ದ ಯುವ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಸ್ವಾಗತ್ ಕುಶಾಲಪ್ಪ ಮಾತನಾಡಿ, ಜೀವಿಜಯ ಅವರು ಪಕ್ಷ ತೊರೆದ ನಂತರ ಜೆಡಿಎಸ್‌ನಲ್ಲಿ ಒಂದಿಷ್ಟು ಗೊಂದಲಗಳು ಉಂಟಾಗಿತ್ತು. ಇದೀಗ ಎಲ್ಲರನ್ನೂ ಒಗ್ಗೂಡಿಸಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಯುವ ಜೆಡಿಎಸ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಟಿ. ಪ್ರಜ್ವಲ್, ಕಾರ್ಯದರ್ಶಿ ವಿನಯ್ ಸಂಭ್ರಮ್, ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಆದರ್ಶ್ ತಮ್ಮಯ್ಯ ಉಪಸ್ಥಿತರಿದ್ದರು.